ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 02 : ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರು ಸಚಿವರು ಹೊರಗುಳಿದಿದ್ದಾರೆ. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಅವರು ಹಾಗೂ ಇತ್ತಿಚೆಗಷ್ಟೇ ಕೆ.ಎನ್.ರಾಜಣ್ಣ ಅವರು ಸಂಪುಟದಿಂದ ಹೊರಗುಳಿದಿದ್ದಾರೆ. ಇದರ ನಡುವೆ ಮತ್ತೆ ಸಂಪುಟದಲ್ಲಿ ಅದೇ ಸಮುದಾಯದವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ. ಹೀಗಾಗಿ ಪೈಪೋಟಿಯೂ ಹೆಚ್ಚಾಗಿದೆ. ಅದರಲ್ಲೂ ಈ ಬಾರಿ ಮತ್ತೊಂದು ಸಚಿವ ಸ್ಥಾನ ಚಿತ್ರದುರ್ಗಕ್ಕೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೇ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ತೆರೆಮರೆಯಲ್ಲಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಶಾಸಕ ಟಿ.ರಘುಮೂರ್ತಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಮಂತ್ರಿಮಂಡಲದಲ್ಲಿ ಅವಕಾಶ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾಸಕ ಟಿ.ರಘುಮೂರ್ತಿ ಅವರು ನಿರಂತರವಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರಾಭವಗೊಂಡಾಗಲೂ ಟಿ.ರಘುಮೂರ್ತಿ ಆಯ್ಕೆಯಾಗಿದ್ದರು. ಭಾರತ್ ಜೋಡೋ ಯಾತ್ರೆಯ ಸಂಘಟನೆಯ ಹೊರೆಯ ಸಿಂಹಪಾಲನ್ನು ಹೊತ್ತಿದ್ದರು. ಪಕ್ಷ ಸಂಘಟನೆಯಲ್ಲೂ ಸಕ್ರಿಯವಾಗಿದ್ದಾರೆ.
ಮತ್ತೊಂದು ಕಡೆ ಬಿಜೆಪಿಯಲ್ಲಿದ್ದ ಎನ್.ವೈ.ಗೋಪಾಲಕೃಷ್ಣ ಅವರು ಕಾಂಗ್ರೆಸ್ ಗೆ ಬರುವಾಗಲೇ ಮಂತ್ರಿ ಸ್ಥಾನದ ಭರವಸೆ ನೀಡಿದ್ದರು ಎನ್ನಲಾಗಿದೆ. ಹಾಗಾಗಿ ಈ ಬಾರಿ ಅವಕಾಶ ಸಿಗಬಹುದು ಎಂದೇ ಚರ್ಚೆಗಳು ನಡೆಯುತ್ತಿವೆ. ಜಿಲ್ಲೆಯ ಹಿರಿಯ ಕಾಂಗ್ರೆಸ್ಸಿಗರಾಗಿದ್ದರೂ, ಮಾಜಿ ಶಾಸಕ ತಿಪ್ಪೇಸ್ವಾಮಿ ಗೆಲುವಿನ ನಂತರ ಪಕ್ಷ ತೊರೆದು, ಕ್ಷೇತ್ರ ಬದಲಿಸಿದ್ದ ಎನ್.ವೈ.ಗೋಪಾಲಕೃಷ್ಣ ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಮರು ಸೇರ್ಪಡೆಯಾಗಿ, ಶಾಸಕರಾಗಿದ್ದಾರೆ. ಈ ಇಬ್ಬರು ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.






