ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಅತ್ಯಂತ ವಿಶಾಲವಾದ ದೇವಾಲಯ ಸಂಕೀರ್ಣವಾಗಿದ್ದು ಹೊಯ್ಸಳರ ಕಾಲ 12ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಕಾಲ ಕಾಲಕ್ಕೆ ಇದನ್ನು ಜೀವನೋದ್ಧಾರ ಗೊಳಿಸಲಾಗಿದ್ದು 16ನೇ ಶತಮಾನದಲ್ಲಿ ಸ್ಥಳೀಯ ಆಡಳಿತ ಅಧಿಕಾರಿಯಾಗಿದ್ದ ಗುಲ್ಯಪ್ಪ ನಾಯಕನು 1568-70 ರ ಸುಮಾರಿಗೆ ಮತ್ತಷ್ಟು ದೇವಾಲಯವನ್ನು ವಿಸ್ತರಿಸಿ ಜೀರ್ಣೋದ್ಧಾರ ಮಾಡಿದನೆಂದು ಇಲ್ಲಿನ ಕಂಬ ಶಾಸನ ತಿಳಿಸುತ್ತದೆ.
ಹೊಯ್ಸಳರ ಶೈಲಿಯಲ್ಲಿ ನಿರ್ಮಿಸಲಾದ ಪ್ರಮುಖ ದೇವಾಲಯ ಇದಾಗಿದ್ದು, ಪೂರ್ವಾಭಿಮುಖವಾಗಿದೆ.
ಚಿತ್ರದುರ್ಗ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಾಲಯ ಸಂಕೀರ್ಣವಾದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಗರ್ಭಗೃಹ, ಅಂತರಾಳ,ನವರಂಗ, ವಿಶಾಲವಾದ ಮಹಾಮಂಟಪ, ಗರುಡಮಂಟಪಗಳಿಂದ ಕೂಡಿದ ದೇವಾಲಯವಾಗಿದೆ.
ಗರ್ಭಗೃಹದಲ್ಲಿ 5 ಅಡಿ ಎತ್ತರದ ಶ್ರೀ ವೇಣುಗೋಪಾಲ ಸ್ವಾಮಿಯ ಶಿಲ್ಪವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಚಿತ್ರದುರ್ಗದ ಕೋಟೆಯ ಮೇಲಿರುವ ಶ್ರೀ ವೇಣುಗೋಪಾಲ ಸ್ವಾಮಿಯ ಮೂರ್ತಿಯು ಕೂಡ ಇದೇ ಶಿಲ್ಪದ ಸಾಮ್ಯತೆ ಇದೆ ಎಂದು ಹೇಳಲಾಗುತ್ತದೆ.
ವೇಣುಗೋಪಾಲ ಸ್ವಾಮಿಯ ವಿವಿಧ ಆಭರಣಗಳಿಂದ ಅಲಂಕೃತನಾಗಿದ್ದು ಕೊಳಲನ್ನು ಊದುತ್ತಿರುವನು. ಕೀರ್ತಿ ಮುಖದ ಪ್ರಭಾವಳಿ, ಕೆಳಗೆ ರಾಧೆ,ರುಕ್ಮಿಣಿ,ಹಸುಗಳ ಉಬ್ಬು ರಚನೆಗಳಿರುವ ಸುಂದರವಾದ ಶಿಲ್ಪವಾಗಿದೆ.
ವಿಜಯನಗರ ಕಾಲದಲ್ಲಿ ಈ ದೇವಾಲಯದ ವಿಸ್ತರಣೆ ಆಗಿರುವುದನ್ನು ಇಲ್ಲಿನ ಅಂತರಾಳದ ಬಾಗಿಲಿನ ಬಳಿ ಇರುವ ವೈಷ್ಣವ ದ್ವಾರಪಾಲಕರ ಮೂಲಕ ಗಮನಿಸಬಹುದಾಗಿದೆ.
ನವರಂಗದಲ್ಲಿ 4 ಕಂಬಗಳಿವೆ. ಮಹಾಮಂಟಪದಲ್ಲಿ ವಿಜಯನಗರ ಶೈಲಿಯ 20 ಕಂಬಗಳಿವೆ.ಇವು ಚಿತ್ರಕಾಂಡ ಸ್ತಂಭಗಳಾಗಿವೆ. ದೇವಾಲಯಕ್ಕೆ ವಿಶಾಲವಾದ ಪ್ರಾಕಾರ ಗೋಡೆ ಇದೆ. ಇಲ್ಲಿನ ಕಂಬ ಶಾಸನದಲ್ಲಿ ಹಾಗೂ ತಾಮ್ರ ಶಾಸನದಲ್ಲಿ ಈ ದೇವಾಲಯಕ್ಕೆ ದಾನ ದತ್ತಿ ನೀಡಿದ ವಿವರಗಳನ್ನು ತಿಳಿಸಲಾಗಿದೆ. ದೇವಾಲಯದಲ್ಲಿ ನಿತ್ಯ ಪೂಜೆಗಳು ನಡೆಯುತ್ತಿದ್ದು ಪ್ರತಿ ವರ್ಷ ಭಾರತ ಹುಣ್ಣಿಮೆಯಲ್ಲಿ ಒಂದು ವಾರಗಳ ಕಾಲ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜಾತ್ರೆಯ ಸಮಯದಲ್ಲಿ ಕುಂಕುಮ ಪೂಜೆ, ಆನೆಉತ್ಸವ, ಶೇಷೋತ್ಸವ,ರಥೋತ್ಸವ ನಡೆಯುತ್ತದೆ.







