
ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್
ಚೀನಿಯರ ಪ್ರಕಾರ ಮುತ್ತು ಎಂದರೆ ಕಪ್ಪೆಚಿಪ್ಪು. ಮೀನಿನ ಹೃದಯ. ಮನುಷ್ಯನ ಮೈಯೇರಿ ಅವನನ್ನು ಅಲಂಕರಿಸಿದ ಮೊದಲ ಆಭರಣ ವಸ್ತು. ಇತರ ಬೆಲೆಬಾಳುವ ಆಭರಣಗಳನ್ನು ಕಲ್ಲು , ಅದಿರುಗಳಿಂದ ಹೊರ ತೆಗೆದು, ಪಾಷಿಪ್ ಮಾಡಿ ಬಳಸಬೇಕಾಗುತ್ತದೆ. ಆದರೆ ಮುತ್ತು ದೊರೆಯುವಾಗಲೇ ಶುದ್ಧವಾಗಿರುತ್ತದೆ. ಆದ್ದರಿಂದ ನಮ್ಮ ಹಿರಿಯರಿಗೆ ಇದು ಪ್ರೀತಿಯ ಆಭರಣವಾಯಿತು. ಅನೇಕ ಕಡೆ ಮುತ್ತು, ಸಂಪತ್ತು, ಜ್ಞಾನ ಮತ್ತು ಸದ್ಗುಣದ ಪ್ರತೀಕವೆನಿಸಿಕೊಂಡಿದೆ.
ಹೊಳೆಯುವ, ಗಟ್ಟಿಯಾದ ಗೋಲಾಕಾರದಲ್ಲಿರುವ ಮುತ್ತು ಬಹಳ ಸುಂದರ ಮತ್ತು ಅಮೂಲ್ಯ. ಪಾರದರ್ಶಕತೆ ಇದರ ಇನ್ನೊಂದು ಗುಣ. ಕ್ಯಾಲ್ಷಿಯಂ ಕಾರ್ಬೋನೇಟ್ ಇರುವ ಸೀಮೇಸುಣ್ಣದ ಮಾದರಿಯಲ್ಲಿರುವ ಚಿಪ್ಪಿನಿಂದ ಇದು ರೂಪುಗೊಂಡಿದೆ. ಮುತ್ತಿನ ಶಿಂಪು (nacre) ಚಿಪ್ಪು ಮೀನಿನಂಥ ಪ್ರಾಣಿಯಿಂದ ರೂಪುಗೊಂಡಿದೆ. ಇದರ ಚಿಪ್ಪು ಮೇಲ್ನೋಟಕ್ಕೆ ಆಕೃತಿಯಿಲ್ಲದೇ ವಿರೂಪವಾಗಿ ಕಾಣುತ್ತದೆ. ಅದರೊಳಗೆ ಪ್ರಾಣಿಯ ಮೃದು ಶರೀರವನ್ನು ಅಂಗಾಂಶಗಳ ತೆಳುವಾದ ಪದರ ರಕ್ಷಿಸುತ್ತದೆ.
ಕಪ್ಪೆಚಿಪ್ಪು ಮೀನುಗಳು ಆಹಾರಕ್ಕಾಗಿ ಪ್ಲಾಂಕ್ಟನ್ ಅಥವಾ ತೇಲಾಡುವ ವಸ್ತುಗಳನ್ನು ಸೆಳೆದುಕೊಳ್ಳಲು ಚಿಪ್ಪನ್ನು ಸ್ವಲ್ಪ ತೆರೆಯುತ್ತವೆ. ಆಗ ಕೆಲವೊಮ್ಮೆ ಮರಳು ಮತ್ತು ಚಿಪ್ಪಿನ ಕಣಗಳು ಅದರೊಳಗೆ ನುಗ್ಗುತ್ತವೆ. ಅದನ್ನು ಹೊರತಳ್ಳಲು ಕಪ್ಪೆಚಿಪ್ಪಿಗೆ ಸಾಧ್ಯವಾಗುವುದಿಲ್ಲ. ಬದಲಾಗಿ ಇದರಿಂದ ರಕ್ಷಿಸಿಕೊಳ್ಳಲು ತೆಳುವಾದ ಪದರವನ್ನು ಬಳಸಿಕೊಳ್ಳುತ್ತದೆ. ಮುತ್ತು ಆಗ ರೂಪುಗೊಳ್ಳುತ್ತದೆ.
ಸಾಮಾನ್ಯವಾಗಿ ಮುತ್ತುಗಳು ಬಿಳಿಯ ಬಣ್ಣದಲ್ಲಿದ್ದರೂ ನಸುಗುಲಾಬಿ ಬಣ್ಣದ ಮುತ್ತುಗಳೂ ಇವೆ. ಚಿಪ್ಪಿನೊಳಗೆ ವಿವಿಧ ವಸ್ತುಗಳಿಗೆ ಅನುಗುಣವಾಗಿ ಕಪ್ಪು, ನೀಲಿ, ಚಿನ್ನದ ಬಣ್ಣದ ಮುತ್ತುಗಳು ರಚನೆಯಾಗುವುದುಂಟು. ಪಕ್ಕಾ ಗೋಲಾಕಾರದಲ್ಲಿರುವ ಮತ್ತು ನೀರ ಹನಿಯಾಕಾರದಲ್ಲಿದ್ದು ಹೊಳೆಯುವ ಮುತ್ತುಗಳು ಅಮೂಲ್ಯವಾದವು.
ಪ್ಟೆರೈಡ್ (Pteridae) ಜಾತಿಯ ಕಪ್ಪೆಚಿಪ್ಪುಗಳಲ್ಲಿರುವ ಮುತ್ತುಗಳು ಬಹಳ ದುಬಾರಿ. ಉತ್ತರ ಮತ್ತು ಪಶ್ಚಿಮ ಅಸ್ಟ್ರೇಲಿಯ, ಕ್ಯಾಲಿಫೋರ್ನಿಯದ ಕರಾವಳಿ, ಷರ್ಷಿಯಾ ಕೊಲ್ಲಿ ಹಾಗೂ ಹಿಂದೂ ಮಹಾಸಾಗರಗಳಲ್ಲಿ ಈ ಜಾತಿಯ ಕಪ್ಪೆಚಿಪ್ಪುಗಳು ಕಾಣಸಿಗುತ್ತವೆ. ಇವು ಅಪರೂಪ ಕೂಡ.
ಎಲ್ಲಾ ಕಪ್ಪೆಚಿಪ್ಪುಗಳೂ ಮುತ್ತನ್ನು ಉತ್ಪಾದಿಸುವುದಿಲ್ಲ. ಸರಾಸರಿ ಮೂರು ಟನ್ ಕಪ್ಪೆಚಿಪ್ಪುಗಳ ಪೈಕಿ ಮೂರು ಅಥವಾ ನಾಲ್ಕು ಕಪ್ಪೆಚಿಪ್ಪುಗಳಲ್ಲಿ ಮಾತ್ರ ಮುತ್ತು ದೊರೆಯುತ್ತದೆ. ಈ ಚಿಪ್ಪುಗಳಿಗಾಗಿ ಸಮುದ್ರದಾಳದಲ್ಲಿ ಹುಡುಕಾಟ ನಡೆಯುತ್ತಲೇ ಇರುತ್ತದೆ. ಇದೊಂದು ಬಹಳ ದುಸ್ತರವಾದ, ಸವಾಲಾಗುವಂಥ, ಸೂಕ್ತ ಪ್ರತಿಫಲ ದೊರೆಯದಂಥ ಕೆಲಸ. ಈ ನೈಸರ್ಗಿಕ ಕೊಡುಗೆಯನ್ನು ಆಧುನಿಕ ತಂತ್ರಜ್ಞಾನ ಮತ್ತು ಔದ್ಯಮಿಕ ಜಗತ್ತು ಗಮನಾರ್ಹನಾಗಿ ಬದಲಾಯಿಸಿದೆ. ಈಗ ಜಪಾನ್ ಮತ್ತು ಆಸ್ಟ್ರೇಲಿಯದಲ್ಲಿ ಮುತ್ತುಗಳನ್ನು ಬೆಳೆಯಲಾಗುತ್ತಿದೆ.
ಜಪಾನಿನಲ್ಲಿ 1893ರಲ್ಲಿಯೇ ಕೃತಕ ಮುತ್ತು ಸೃಷ್ಟಿಸಲಾಗಿತ್ತು. ಒಂದು ಚಿಪ್ಪಿನ ತುಣುಕನ್ನು ಇನ್ನೊಂದು ಕಪ್ಪೆಚಿಪ್ಪಿನ ಒಳಪದರದ ಚಿಕ್ಕ ತುಣುಕನ್ನು ಸಂಯೋಜಿಸಿ, ಅದನ್ನು ಸಮುದ್ರ ದಾಳದ ರಹಸ್ಯ ಸ್ಥಳದಲ್ಲಿ ಇಟ್ಟು ಮುತ್ತು ಬೆಳಯಲಾಗುತ್ತಿದೆ. ಕಪ್ಪೆಚಿಪ್ಪಿಗೆ ಗಾಯವಾಗದಂತೆ ಎಚ್ಚರಿಕೆ ವಹಿಸಿ ಇದನ್ನು ಮಾಡಬೇಕು. ಮೂರರಿಂದ ಆರು ವರ್ಷಗಳ ಅವಧಿಯಲ್ಲಿ ಬೆಲೆ ಬಾಳುವ ಮುತ್ತು ಕೈಗೆ ಸಿಗುತ್ತದೆ. ನೈಸರ್ಗಿಕವಾಗಿ ದೊರೆಯುವ ಮುತ್ತಿಗೂ, ಇದಕ್ಕೂ ವ್ಯತ್ಯಾಸವೇ ಕಾಣದಷ್ಟು ಸಾಮ್ಯತೆ ಇರುತ್ತದೆ. ಕ್ಷ-ಕಿರಣದ ಮೂಲಕ ಮಾತ್ರ ನೈಜ ಮುತ್ತನ್ನು ಪತ್ತೆ ಹಚ್ಚಬಹುದು. ಮೂಲಕೇಂದ್ರದಿಂದ ಸಂಪೂರ್ಣವಾಗಿ ವೃತ್ತಾಕಾರವಾಗಿರುವ ಮುತ್ತು, ಕೃತಕವಾದದ್ದು.






