ಮೈಸೂರು: ಈ ಬಾರಿಯ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಬಾನು ಮುಷ್ತಾಕ ಅವರನ್ನು ಆಯ್ಕೆ ಮಾಡಿದಾಗಿನಿಂದ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಬಿಜೆಪಿ ನಾಯಕರು ಬಾನು ಮುಷ್ತಾಕ ಅವರ ಆಯ್ಕೆಯನ್ನು ಒಪ್ಪುತ್ತಿಲ್ಲ. ಸಂಸದರಾದ ಯದುವೀರ್ ಅವರು ಮೊದಲು ಸ್ವಾಗತ ಮಾಡಿ, ಆಮೇಲೆ ಷರತ್ತನ್ನ ಹಾಕಿದ್ದರು. ಇದೀಗ ರಾಜಮಾತೆ ಪ್ರಮೋದಾ ದೇವಿ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಅದರ ಬಗ್ಗೆ ನನ್ನ ಅಭಿಪ್ರಾಯ ಏನು ಇಲ್ಲ. ನಾನು ಮಾತನಾಡುವುದು ಏನು ಇಲ್ಲ. ಅದು ಸರ್ಕಾರದ ಕಾರ್ಯಕ್ರಮ. ಕರೆಯುವವರ ಇಷ್ಟ ಯಾರನ್ನ ಕರಿತಾ ಇದ್ದೀವಿ ಅನ್ನೋದು. ಕರೆಯಿಸಿಕೊಂಡವರು ಬರ್ತೀವಿ ಬರಲ್ಲ ಅಂತ ಹೇಳೋದು ಅವರಿಷ್ಟ. ನನಗೂ ಅದಕ್ಕೂ, ನನ್ನ ಯಾವುದೇ ಅಭಿಪ್ರಾಯವಿಲ್ಲ ಎಂದಿದ್ದಾರೆ.
ಇದೇ ವೇಳೆ ಧಾರ್ಮಿಕವಾಗಿ ಧಕ್ಕೆ ಉಂಟಾಗುತ್ತದೆ ಎಂಬ ವಿಚಾರ ಚರ್ಚೆಯಾಗ್ತಿದೆ ಎಂಬ ಪ್ರಶ್ನೆ ಮಾಡಿದಾಗ, ಅದು ಯಾರೂ ಚರ್ಚೆ ಮಾಡಿದ್ದಾರೆ ಅವರನ್ನೇ ಕೇಳಬೇಕು. ಪೂಜಾ ವಿಧಿ ವಿಧಾನಗಳ ಬಗ್ಗೆ ಏನಾಗುತ್ತೆ ಎಂಬುದರ ಬಗ್ಗೆ ಅವರನ್ನೆ ಕೇಳಬೇಕು. ಯಾಕಂದ್ರೆ ಎಲ್ಲವನ್ನು ಸರ್ಕಾರವೇ ಅರೇಂಜ್ ಮಾಡ್ತಾ ಇರೋದು. ನನ್ನ ಬಳಿ ಅದಕ್ಕೆ ಉತ್ತರವಿಲ್ಲ. ನಮ್ಮ ಪರಂಪರೆಯ ಭಾಗವಲ್ಲ ಅದು. ನಮ್ಮ ಯಾವ ಇನ್ವಾಲ್ಮೆಂಟ್ ಕೂಡ ಇಲ್ಲ. ಇಲ್ಲಿಯ ತನಕ ನಾವೂ ಯಾವುದೇ ರೀತಿಯ ಇನ್ವಾಲ್ಮೆಂಟ್ ಇಲ್ಲ. ನಮ್ಮದು ಹಿಂದಿನಿಂದ ಹೇಗೆ ನಡೆಸಿಕೊಂಡು ಬಂದಂತ ಸಂಪ್ರದಾಯದಂತೆ ನಡೆಸಿಕೊಂಡು ಹೋಗ್ತೀವಿ. ಸರ್ಕಾರ ಏನು ಮಾಡುತ್ತೆ ಅದು ಅವರಿಗೆ ಬಿಟ್ಟದ್ದು. ಯಾಕಂದ್ರೆ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತೆ. ಅವರವರಿಗೆ ಹೇಗೆಗೆ ಬೇಕೋ ಆ ರೀತಿ ನಡೆಸಿಕೊಂಡು ಹೋಗ್ತಾರೆ ಎಂಬ ಮಾತನ್ನ ಹೇಳಿದ್ದಾರೆ.






