ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸುದ್ದಿಒನ್ :
ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಖ್ಯಾತಿ ಪಡೆದ ಬಾದಾಮಿ ಗುಹಾಂತರ ದೇವಾಲಯಗಳು ನಮಗೆಲ್ಲರಿಗೂ ಗೊತ್ತಿರುವ ಅದ್ಭುತ ಗುಹಾಂತರ ದೇವಾಲಯಗಳು ಇರುವ ಸುಂದರ ಸ್ಥಳವಾಗಿದೆ. ಇವೆಲ್ಲವೂ ಸುಮಾರು ಆರರಿಂದ ಒಂಬತ್ತನೇ ಶತಮಾನದವರೆಗೆ ಆಳಿದ ಬಾದಾಮಿ ಚಾಲುಕ್ಯರ ಪ್ರಮುಖ ಕೊಡುಗೆಯಾಗಿದೆ.
ಇಂತಹದ್ದೇ ಗುಹಾಂತರ ದೇವಾಲಯವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಬಳಿಯ ರಾಮದುರ್ಗ ಹೊಸಗುಡ್ಡದಲ್ಲಿದೆ. ಬಹಳ ಜನರಿಗೆ ಅಪರಿಚಿತ ಸ್ಥಳವಾದ ಈ ಜಾಗದಲ್ಲಿ ನಿಜಕ್ಕೂ ಅದ್ಭುತವಾದ ಒಂದು ಗುಹಾಂತರ ದೇವಾಲಯ ಇರುವುದು ಆಶ್ಚರ್ಯ ತರಿಸುತ್ತದೆ. ಇಡೀ ಕಲ್ಲಿನ ದೊಡ್ಡ ಗುಡ್ಡವನ್ನೇ ಕಡಿದು ಗುಹಾಂತರ ದೇವಾಲಯ ನಿರ್ಮಿಸಲಾಗಿದೆ. ಈ ಗುಹಾಂತರ ದೇವಾಲಯವು ನಿರ್ಮಾಣವಾಗಿರುವುದು 17ನೇ ಶತಮಾನದಲ್ಲಿ.
ಹೊಸಗುಡ್ಡ :
ಚಿತ್ರದುರ್ಗದಿಂದ ನಾಯಕನಹಟ್ಟಿಗೆ ಸಾಗುವ ರಸ್ತೆಯ ಬಲಭಾಗದಲ್ಲಿ ಕಾಣುವ ಈ ಬೆಟ್ಟವು ದೂರದಿಂದ ಸಾಧಾರಣ ಒಂದು ಸಣ್ಣ ಗುಡ್ಡದಂತೆ ಗೋಚರಿಸುತ್ತದೆ. ಸುತ್ತಲೂ ಕಿಲೋಮೀಟರ್ ಗಟ್ಟಲೆ ಹರಡಿರುವ ವಿಶಾಲ ಬಯಲು ಪ್ರದೇಶದ ಮಧ್ಯದಲ್ಲಿ ಈ ಗುಡ್ಡವು ದೂರದಿಂದಲೇ ಎದ್ದು ಕಾಣುತ್ತದೆ. ಮುಖ್ಯ ರಸ್ತೆಯಿಂದ 6 ಕಿಲೋಮೀಟರ್ ದೂರದಲ್ಲಿ ಸಾಗಿದರೆ ಈ ಗುಡ್ಡವು ಸಿಗುತ್ತದೆ.
ರಾಮಲಿಂಗೇಶ್ವರ ದೇವಾಲಯ :
ದುರ್ಗದ(ಕೋಟೆಯ) ಮೇಲೆ ನಿರ್ಮಿಸಿದ ಗುಹಾಂತರ ದೇವಾಲಯದಲ್ಲಿ ರಾಮಲಿಂಗೇಶ್ವರ (ಲಿಂಗ) ಇರುವುದರಿಂದ ಇದು ರಾಮದುರ್ಗವಾಗಿದೆ. ಆದರೆ ಆಡುಭಾಷೆಯಲ್ಲಿ ಇದನ್ನು ಹೊಸಗುಡ್ಡ ಎನ್ನುತ್ತಾರೆ. ಬೆಟ್ಟ ಹತ್ತಲು ಮೆಟ್ಟಿಲು ಹಾಗೂ ಸುಲಭದ ಸಿಮೆಂಟ್ ರಸ್ತೆ ಇದ್ದು ವಾಹನಗಳು ಮಂದಿರದ ಬಳಿವರೆಗೂ ತಲುಪಬಹುದು.
ಪ್ರವೇಶ ದ್ವಾರದಲ್ಲಿಯೇ ಇರುವ ಮುಖ್ಯ ಅಗಸೆ ಬಾಗಿಲು ಇಂದಿಗೂ ಗಟ್ಟಿ ಮುಟ್ಟಾಗಿದ್ದು, ಅಂದಿನ ತಂತ್ರಜ್ಞಾನದ ಕಾರ್ಯಕ್ಷಮತೆಯನ್ನು ಎತ್ತಿ ಹಿಡಿಯುತ್ತದೆ. ಅದನ್ನು ದಾಟಿ ಒಳಹೊಕ್ಕರೆ ಸಾಲು ಸಾಲು ಕಲ್ಲಿನಲ್ಲಿ ಜನರೇ ಕಟ್ಟಿರುವ ನೂರಾರು ಪುಟ್ಟ ಪುಟ್ಟ ಮೂರು ಕಲ್ಲುಗಳನ್ನು ಜೋಡಿಸಿ ಕಟ್ಟಿರುವ ಮನೆಗಳನ್ನು ಕಾಣಬಹುದು.ಈ ರೀತಿ ಈ ಜಾಗದಲ್ಲಿ ಕಟ್ಟಿದರೆ ನಮ್ಮ ಮನಸ್ಸಿನ ಆಸೆ ಹಾಗೂ ನಾವು ಮನೆ ಕಟ್ಟುವ ಯೋಗ ಕೈಗೂಡುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
ಇಡೀ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಹಾಗೂ ಹೆಚ್ಚು ಉಷ್ಣಾಂಶ ಇರುವ ಈ ಪ್ರದೇಶವು ಗುಹಾಂತರ ದೇವಾಲಯ ನಿರ್ಮಾಣಕ್ಕೆ ಆಯ್ಕೆ ಮಾಡಿರುವುದೇ ಆಶ್ಚರ್ಯ ತರಿಸುತ್ತದೆ. ಇದು ಪಾಳೇಗಾರರ ಕಾಲದ ಕೋಟೆಯಾಗಿದೆ. ಗುಡ್ಡದ ಮೇಲೆ ಬೃಹತ್ ಕಣಶಿಲೆಯ ಬೆಟ್ಟವನ್ನು ಕತ್ತರಿಸಿ ಸುಂದರವಾದ ಗುಹಾಂತರ ದೇವಾಲಯವನ್ನು ಕಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಾಗೂ ದಕ್ಷಿಣ ಕರ್ನಾಟಕದ ಅಪರೂಪದ ಗುಹಾಂತರ ದೇವಾಲಯ ಇದಾಗಿದೆ. ಬಾದಾಮಿಯ ಗುಹಾಂತರ ದೇವಾಲಯ ಬಿಟ್ಟರೆ ಇಲ್ಲಿ ಮಾತ್ರ ಗುಹಾಂತರ ದೇವಾಲಯವಿದೆ.
ನಾಯಕನಹಟ್ಟಿ ಬಖೈರಿನಂತೆ ಇದನ್ನು 17-18 ಶತಮಾನದಲ್ಲಿ ಹಟ್ಟಿಯ ಪಾಳೆಯಗಾರರಲ್ಲಿ ಒಬ್ಬನಾಗಿದ್ದ ಬೋಡಿಮಲ್ಲಪ್ಪ ನಾಯಕನು ನಿರ್ಮಿಸಿದನು ಎಂದು ಹೇಳಲಾಗುತ್ತದೆ.
ಒರಟಾದ ಬಂಡೆಗಲ್ಲನ್ನು ಕಡೆದು ಮಾಡಲಾದ ಈ ಗುಹಾಂತರ ದೇವಾಲಯದಲ್ಲಿ ಗರ್ಭಗೃಹ, ಸಭಾಮಂಟಪವಿದೆ.
ಗರ್ಭಗೃಹದಲ್ಲಿ ಇಂಡೋ -ಸಾರ್ಸೇನಿಕ್ ಶೈಲಿಯ ಮೂರು ಕಮಾನುಗಳುಳ್ಳ ಕೂಡುಗಳನ್ನು ಗೋಡೆಯ ಮೇಲೆ ಕಡೆಯಲಾಗಿದೆ. ಮಧ್ಯದ ಕೂಡುವಿನಲ್ಲಿ ಶಿವಲಿಂಗ,ಅದರ ಮೇಲೆ ಸರ್ಪವಿರುವ ಉಬ್ಬುಶಿಲ್ಪಗಳಿವೆ.
ಶಿವಲಿಂಗದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರನ್ನು ಮೇಲೆ ಪ್ರಭಾವಳಿಯನ್ನು ಕಡೆದಿರುವರು. ಶಿವಲಿಂಗದ ಕೆಳಗೆ ಹಾವಿನ ಬಾಲವನ್ನು ಕೆಳಗಿನವರೆಗೂ ಮೂಡಿಸಿದ್ದು ಇದರ ಕೆಳಗೆ ಭಾರವಾಹಕರು ಶಿವಲಿಂಗವುಳ್ಳ ಮಂಟಪವನ್ನು ಹೊತ್ತಂತೆ ಉಬ್ಬುಗೆತ್ತನೆಯಲ್ಲಿ ಮೂಡಿಸಲಾಗಿದೆ.
.ಇದಲ್ಲದೆ ಗರ್ಭಗೃಹದ ಮಧ್ಯದಲ್ಲಿ ಕಪ್ಪುಶಿಲೆಯ ಮೂರು ಅಡಿಗಳೆತ್ತರದ ಪ್ರತಿಷ್ಟಾಪನ ಲಿಂಗವನ್ನು ಸ್ಥಾಪಿಸಿದ್ದಾರೆ.
ಸಭಾಮಂಟದಲ್ಲಿ 4 ಕಂಬಗಳಿವೆ.ಈ ಕಂಬಗಳನ್ನು ನಕ್ಷತ್ರಾಕಾರದಂತೆ 12 ಮುಖಗಳಲ್ಲಿ ಕಡೆದಿರುವರು.ಕಂಬಗಳ ಮೇಲ್ಭಾಗದಲ್ಲಿ ಸುಂದರವಾಗಿ ಕಡೆದಿರುವ ಪುಷ್ಪ ಬೋದಿಗೆಗಳನ್ನು ನಾಲ್ಕು ಕಡೆಗಳಲ್ಲಿ ಕಡೆದಿರುವರು.
ಸಭಾಮಂಟಪದ ಭುವನೇಶ್ವರಿಯಲ್ಲಿ ಮುಗುಚಿದ ಕಮಲದ ಮೊಗ್ಗುಗಳನ್ನು ಆಳವಾಗಿ ಕಡೆದಿದ್ದಾರೆ. ಇವುಗಳ ಸುತ್ತಲೂ ಅಷ್ಟದಿಕ್ಪಾಲಕರನ್ನು ಕಡೆದಿರುವರು. ಇವುಗಳಲ್ಲದೆ ಛಾವಣಿಯ ಆರು ಅಂಕಣಗಳಲ್ಲಿ ಅನೇಕ ವಿಧದ ಉಬ್ಬುಶಿಲ್ಪಗಳನ್ನು ಕಾಣಬಹುದು. ದೇವಾಲಯದ ಮುಂಭಾಗದಲ್ಲಿ ಕಪ್ಪುಶಿಲೆಯ ಸುಂದರವಾದ ಅಲಂಕರಣೆಗಳುಳ್ಳ ನಂದಿಯನ್ನು ಪ್ರತಿಷ್ಠಾಪಿಸಿರುವರು.ಇದು ಮೂರೂವರೆ ಅಡಿ ಎತ್ತರ ಹಾಗೂ ನಾಲ್ಕೂವರೆ ಅಡಿ ಉದ್ದವಿದೆ. ಇಂತಹ ಸುಂದರ ಕಲಾ ನೈಪುಣ್ಯದ ದೇವಾಲಯ ಈ ಭಾಗದಲ್ಲಿ ಕಂಡು ಬರುವುದಿಲ್ಲ.
ಕೋಟೆ :
ಗುಹಾಂತರ ದೇವಾಲಯವಿರುವ ಬೆಟ್ಟವು ಪಾಳೆಯಗಾರರ ಕಾಲದ ಕೋಟೆಯನ್ನು ಹೊಂದಿದೆ.ಕೋಟೆಯಲ್ಲಿ ಎರಡು ಸುತ್ತಿನ ಗೋಡೆಯಿದೆ. ಅದರ ಸುತ್ತಲೂ ಬುರುಜುಗಳಿವೆ.ಇದೊಂದು ಪಾಳೇಗಾರರ ಕಾಲದ ರಕ್ಷಣಾತ್ಮಕ ಕೋಟೆಯಾಗಿದೆ.ಇಲ್ಲಿ ನಿಂತು ನೋಡಿದರೆ ದೂರದೂರದ ಸ್ಥಳಗಳು ಅತ್ಯಂತ ರಮಣೀಯವಾಗಿ ಕಾಣುತ್ತದೆ. ಕೆಲವು ವರ್ಷಗಳ ಹಿಂದೆ ನಿರ್ವಹಣೆಯ ಕೊರತೆಯಿಂದ ಇಲ್ಲಿನ ಶಿವಲಿಂಗ ಹಾಗೂ ನಂದಿಯನ್ನು ಹಾನಿಗೊಳಿಸಲಾಗಿತ್ತು. ನಂತರ ಸ್ಥಳೀಯರ ಸಹಕಾರ ಹಾಗೂ ಪ್ರಾಚ್ಯ ವಸ್ತು ಇಲಾಖೆಯ ಕಾಳಜಿಯಿಂದ ಪುನಃ ಇದಕ್ಕೆ ಒಂದು ರೂಪ ನೀಡಿ ಸಂರಕ್ಷಣೆ ಮಾಡಲಾಗಿದೆ. ಆದರೂ ಇಲ್ಲಿ ಆಗಾಗ ನಿಧಿಗಳ್ಳರ ಕಾಟ ಇದ್ದೇ ಇರುತ್ತದೆ.
ಅತ್ಯಂತ ಸುಂದರವಾಗಿ ಕೆತ್ತಲಾದ ನಂದಿಯ ಕಿವಿಯನ್ನು ನಿಧಿಯ ಆಸೆಗಾಗಿ ಭಗ್ನಗೊಳಿಸಿರುವುದು ಇತಿಹಾಸ ಪ್ರೇಮಿಗಳಿಗೆ ಬಹಳಷ್ಟು ಬೇಸರ ತರಿಸುತ್ತದೆ.
ಗುಹಾಂತರ ದೇವಾಲಯವನ್ನು ಕಡೆದ ದಿನಗಳ ಕುರುಹಾಗಿ ಅನೇಕ ಸಂಕೇತಗಳನ್ನು ಹೊರಭಾಗದ ಬಂಡೆಗಲ್ಲಿನ ಮೇಲೆ ಕಡೆಯಲಾಗಿದೆ. ಇದು ಅಂದಿನ ಶಿಲ್ಪಿಗಳು ತಮ್ಮ ಕೆಲಸದ ದಿನಗಳನ್ನು ಸೂಚಿಸುವ ಸಲುವಾಗಿ ಹಾಕಿದ ಗುರುತುಗಳಾಗಿವೆ ಎಂದು ಖ್ಯಾತ ಸಂಶೋಧಕರಾದ ಹಂಪಿ ವಿವಿಯ ಡಾ. ಎಸ್ ವೈ ಸೋಮಶೇಖರ್ ಹೇಳುತ್ತಾರೆ. ದೇವಾಲಯದ ಕಲೆ,ವಾಸ್ತು ಶಿಲ್ಪ ಹಾಗೂ ಉಬ್ಬುಶಿಲ್ಪಗಳು ಅಂದಿನ ಆಡಳಿತಗಾರರು ಕಲೆಗೆ ಕೊಟ್ಟ ಪ್ರೋತ್ಸಾಹವನ್ನು ತಿಳಿಸುತ್ತದೆ.
ಬೆಟ್ಟದ ಮೇಲ್ಭಾಗದಲ್ಲಿ : ದೇವಾಲಯದಿಂದ ಮೇಲ್ಭಾಗದಲ್ಲಿ ಕಾಲು ದಾರಿಯಲ್ಲಿ ಗುಡ್ಡದ ಮೇಲೆ ಹತ್ತಿದರೆ ಸುತ್ತಮುತ್ತಲ ಹತ್ತಾರು ಕಿಲೋಮೀಟರ್ ದೂರದ ಪ್ರದೇಶಗಳನ್ನು ಸುಂದರವಾಗಿ ಗೋಚರವಾಗುವುದನ್ನು ನೋಡಬಹುದು. ದೂರದ ಚಿತ್ರದುರ್ಗ ಬೆಟ್ಟಸಾಲು, ಹತ್ತಿರದ DRDO ವಿಮಾನ ನೆಲೆ, ದೂರದ ಹತ್ತಾರು ಹಳ್ಳಿಗಳು,ಸೂರ್ಯೋದಯ ಹಾಗೂ ಸೂರ್ಯಸ್ತಮಾನ ಈ ಜಾಗದಿಂದ ನಯನ ಮನೋಹರವಾಗಿ ಕಂಡುಬರುತ್ತದೆ. ಈ ಭಾಗದಲ್ಲಿ ಹಿಂದೆ ಸೈನಿಕರ ಅಗತ್ಯಕ್ಕೆ ಕೊಳಗಳನ್ನು ನಿರ್ಮಿಸಲಾಗಿದ್ದು ಮಳೆ ನೀರು ಇದರಲ್ಲಿ ಶೇಖರಣೆ ಯಾಗುವಂತೆ ನಿರ್ಮಿತವಾಗಿದೆ.
ದೇವಾಲಯಕ್ಕೆ ತೆರಳುವವರು ಸಂಜೆ 6:00ಯ ಒಳಗಡೆ ವಾಪಸ್ ಆಗಬೇಕು. ಪ್ರವಾಸೋದ್ಯಮ ಇಲಾಖೆ ಇಲ್ಲೊಂದು ಬೋರ್ಡ್ ಅಳವಡಿಸಿರುವುದು ಬಿಟ್ಟರೆ ಇನ್ನು ಯಾವುದೇ ಸೌಲಭ್ಯಗಳು ದೊರಕುವುದಿಲ್ಲ. ಪ್ರವಾಸೋದ್ಯಮ ಇಲಾಖೆ ಬಂದ ಪ್ರವಾಸಿಗರು ಭಕ್ತರಿಗೆ ಮತ್ತಷ್ಟು ಸೌಲಭ್ಯಗಳು ನೀರು ನೆರಳಿನ ವ್ಯವಸ್ಥೆ ಮಾಡಬೇಕಾಗಿದೆ.






