ಚಿತ್ರದುರ್ಗ, (ಜ.03) : ಪದವಿ ಪೂರ್ವ ಶಿಕ್ಷಣದ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬೋಧನೆಗೆ ಸಂಬಂಧಿಸಿದಂತೆ ಶೀಘ್ರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆಯುವಂತೆ ಆಗ್ರಹಿಸಿ ಅನ್ನದ ಭಾಷೆಯಾಗಿ ಕನ್ನಡ ವೇದಿಕೆ ಪದಾಧಿಕಾರಿಗಳ ನಿಯೋಗ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಈ ವರ್ಷ ಪಠ್ಯಪುಸ್ತಕ ಒದಗಿಸಿದೆ. ಪಿಯು ಕಾಲೇಜಿನಲ್ಲಿ ಬಹುತೇಕ ಉಪನ್ಯಾಸಕರು ಕನ್ನಡದಲ್ಲಿ ಪಾಠ ಮಾಡಲು ಸಿದ್ದರಿದ್ದಾರೆ. ಹಾಗಾಗಿ ಪ್ರಾಂಶುಪಾಲರ ಸಭೆ ಕರೆದು ಸೂಕ್ತ ಪ್ರೇರಣೆ ಒದಗಿಸುವಂತೆ ನಿಯೋಗ ಮನವಿ ಮಾಡಿತು.
ಗ್ರಾಮಾಂತರ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್ ಎಸ್‍ಎಲ್‍ಸಿ ಅಭ್ಯಾಸ ಮಾಡುವ ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುವ ಕನಸು ಹೊತ್ತಿರುತ್ತಾರೆ. ಶೇಕಡಾ 80 ರಿಂದ 90 ರಷ್ಟು ಫಲಿತಾಂಶ ಪಡೆದಿದ್ದರೂ ಇಂಗ್ಲೀಷ್ ಕಾರಣಕ್ಕಾಗಿ ಈ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುವ ಆಸೆಗಳ ಕಮರಿಸಿಕೊಳ್ಳುತ್ತಿದ್ದಾರೆ. ಪಿಯುಸಿ ವಿಜ್ಞಾನ ವಿಷಯವ ಕನ್ನಡದಲ್ಲಿ ಬೋಧನೆ ಮಾಡಿದರೆ ಎಲ್ಲರೂ ಕಾಲೇಜಿಗೆ ಸೇರ್ಪಡೆಯಾಗಿ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ.
ಮಹರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಂಖ ಗ್ರಾಮದಲ್ಲಿ ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡಲಾಗುತ್ತಿದ್ದು ಅಲ್ಲಿ ಪ್ರತಿ ವರ್ಷ ಇಪ್ಪತ್ತು ವಿದ್ಯಾರ್ಥಿಗಳು ಇಂಜಿನಿಯರಿಂಗ್, ಐದರಿಂದ ಹತ್ತು ಮಂದಿ ಮೆಡಿಕಲ್ ಶಿಕ್ಷಣಕ್ಕೆ ಹೋಗುತ್ತಿದ್ದಾರೆ. ಮಹರಾಷ್ಟ್ರದಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯುವುದು ಸಾಧ್ಯವಾಗುವುದಾದರೆ ಕರ್ನಾಟಕದಲ್ಲಿ ಏಕಿಲ್ಲ. ನೆರೆಯ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿಯೇ ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಇಂಜಿನಿಯರಿಂಗ್ ಮೆಡಿಕಲ್ ಗೆ ದಾಖಲಾಗುತ್ತಿದ್ದಾರೆ. ಇಂತಹ ಶೈಕ್ಷಣಿಕ ವಾತಾವರಣ ಕರ್ನಾಟಕದಲ್ಲಿಯೂ ಸೃಷ್ಟಿಯಾಗಬೇಕಿದ್ದು ಈ ಸಂಬಂಧ ಪೈಲಟ್ ಪ್ರಾಜೆಕ್ಟ್ ಆಗಿ ಚಿತ್ರದುರ್ಗ ಜಿಲ್ಲೆಯನ್ನು ಕೈಗೆತ್ತಿಕೊಳ್ಳುವಂತೆ ನಿಯೋಗ ಸಚಿವ ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿತು.
ನಂತರ ಮಾತನಾಡಿದ ನಾರಾಯಣಸ್ವಾಮಿ ಇದೊಂದು ಒಳ್ಳೆ ಪ್ರಯತ್ನವಾಗಿದ್ದು ಜಾರಿ ಮಾಡುವ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ. ಹಾಗಾಗಿ ಜನವರಿ ಹತ್ತರಂದು ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಭೆ ಕರೆಯುವಂತೆ ಜಿಲ್ಲಾ„ಕಾರಿ ಕವಿತಾ ಮನ್ನಿಕೇರಿ ಅವರಿಗೆ ಸೂಚಿಸಿದರು.
ಮಹರಾಷ್ಟ್ರದ ಸಂಖ ಕಾಲೇಜಿಗೆ ವಿಜ್ಞಾನದ ಪಿಯು ಪಠ್ಯ ಪುಸ್ತಕ ಪೂರೈಕೆ ಹಾಗೂ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುವವಂತೆ ಇದೇ ಸಂದರ್ಭದಲ್ಲಿ ಸಚಿವ ನಾರಾಯಣಸ್ವಾಮಿ ಗಡಿನಾಡು ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸೋಮಶೇಖರ್ ಅವರಿಗೆ ಸೂಚಿಸಿದರು. ಅನ್ನದ ಭಾಷೆಯಾಗಿ ಕನ್ನಡ ವೇದಿಕೆ ಪದಾ„ಕಾರಿಗಳಾದ ನಿವೃತ್ತ ಪ್ರಾಚಾರ್ಯ ಸಂಗೇನಹಳ್ಳಿ ಅಶೋಕ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶ.ಮಂಜುನಾಥ್, ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.