ಸುದ್ದಿಒನ್
ಅಬ್ಬಿನಹೊಳೆ ಗ್ರಾಮವು ಪಂಚಾಯತಿ ಮುಖ್ಯ ಕೇಂದ್ರವಾಗಿದ್ದು, ತಾಲೂಕು ಕೇಂದ್ರ ಹಿರಿಯೂರಿನಿಂದ 21
ಕಿಲೋಮೀಟರ್ ದೂರ ಈಶಾನ್ಯಕ್ಕೆ , ಹಿರಿಯೂರು -ಧರ್ಮಪುರ ಮುಖ್ಯರಸ್ತೆಯಿಂದ ಉತ್ತರದಲ್ಲಿದೆ.
ಅಬ್ಬಿನಹೊಳೆ ಹೆಸರಿನ ಮೂಲ :
ಗ್ರಾಮದ ಹಿಂದಿನ ಹೆಸರು ಅಬ್ಬಿನಹೊಳಲು(ಅಬಿನ ವೊಳಲು ) ಆಗಿದೆ. ಅಬ್ಬಿ ಎಂದರೆ ನೀರಿನ ನೆಲೆ ಅಥವಾ ಜೋಗು ಪ್ರದೇಶ,ಹೊ(ವೊ)ಳಲು ಎಂದರೆ ಪಟ್ಟಣ ಎಂಬ ಅರ್ಥವಿದೆ. ಅಬ್ಬಿನಹೊಳಲು ಎಂದರೆ ನೀರಿನ ಪ್ರದೇಶದ ಬಳಿಯಲ್ಲಿ ಇರುವ ಪಟ್ಟಣ, ಊರು ಎಂಬ ಅರ್ಥವಿದೆ. ಇದೇ ಮುಂದುವರಿದು ಅಬ್ಬಿನಹೊಳೆಯಾಗಿದೆ.
ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದಿಂದ ಉತ್ತರದಲ್ಲಿದ್ದು, ಅದನ್ನು ಅರ್ಜುನ ಪುರಿ ಎನ್ನಲಾಗುತ್ತದೆ. ಆ ಭಾಗದಲ್ಲಿ ಈಗ ಏಳು ಮಂದಕ್ಕ (ಸಪ್ತ ಮಾತೃಕೆಯರ), ಜೀರ್ಣಾವಸ್ಥೆಯಲ್ಲಿರುವ ಈಶ್ವರ ಮಂದಿರದ ಅವಶೇಷಗಳನ್ನು ಕಾಣಬಹುದು.ಆದರೆ ಸದ್ಯಕ್ಕೆ ಇಲ್ಲಿಗೆ ತೆರಳಲು ಸಾಧ್ಯವಾಗದಿರುವಷ್ಟು ದಟ್ಟಪೆಳೆ ಹಾಗೂ ಸೀಮೆ ಜಾಲಿ ಗಿಡಗಳು ಬೆಳೆದಿದೆ.
ದೇವಾಲಯದ ಪ್ರದೇಶವು ಹಿಂದೆ ಬೃಹತ್ ಶಿಲಾಯುಗದ ಶಿಲಾ ನೆಲೆಯನ್ನು ಹೊಂದಿರುವುದನ್ನು ಹಂಪಿ ವಿವಿಯ ಡಾ.ಶರತ್ ಕುಮಾರ್ ಕೆಲವು ವರ್ಷಗಳ ಹಿಂದೆ ಗುರುತಿಸಿದ್ದರು. ದೇವಾಲಯದ ಉತ್ತರ ಭಾಗದಲ್ಲಿ ಇರುವ ಪ್ರದೇಶವು ಬೂದಿ ನೆಲೆಯಾಗಿದ್ದು ಇಲ್ಲಿ 3500-4500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗದ ಕಾಲದ ನಿಲ್ಲಿಸುಗಲ್ಲು ಸಮಾಧಿ, ನವಶಿಲಾಯುಗದ ಕಾಲದ ಮಡಿಕೆ ಚೂರು, ಮಣ್ಣಿನ ಬಿಲ್ಲೆ, ಕಬ್ಬಿಣದ ಸುಟ್ಟ ಕಿಟ್ಟ ಪತ್ತೆ ಹಚ್ಚಿದ್ದರು.
ಇದೇ ದೇವಾಲಯದ ಎದುರಿನಲ್ಲಿ ಬೃಹತ್ ಶಿಲಾಯುಗದ ಕಾಲದ ಶಿಲಾ ಸಮಾಧಿಯನ್ನು ಕಾಣಬಹುದು. ಇವೆಲ್ಲವನ್ನು ಗಮನಿಸಿದಾಗ ಸರಿಸುಮಾರು 4000 ವರ್ಷಗಳಿಂದಲೂ ಇಲ್ಲಿ ಜನವಸತಿ ಇದ್ದು ಪ್ರಾಗೈತಿಹಾಸಿಕ ನೆಲೆಯಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.
ದೇವಾಲಯ ಪರಿಚಯ :
ರಂಗನಾಥ ಸ್ವಾಮಿ ದೇವಾಲಯವು 16- 17ನೇ ಶತಮಾನದ ಪಾಳೆಗಾರರ ಕಾಲದಲ್ಲಿ ನಿರ್ಮಾಣಗೊಂಡಿದ್ದು,ವಾಸ್ತು ಶೈಲಿಯನ್ನು ವಿಜಯನಗರೋತ್ತರ ಕಾಲವೆಂದು ಹಂಪಿ ಕನ್ನಡ ವಿವಿಯ ರಾಜ್ಯ ಮತ್ತು ಪುರಾತತ್ವ ಇಲಾಖೆಯ ಮುಖ್ಯಸ್ಥರಾದ ಡಾ.ಸೋಮಶೇಖರ್ ದೃಢಪಡಿಸಿದ್ದಾರೆ. ದೇವಾಲಯವು ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದ್ದು, ಗರ್ಭಗೃಹ,ಅಂತರಾಳ, ನವರಂಗ,ಮುಖಮಂಟಪ,, ದೀಪಸ್ತಂಭಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ರಂಗನಾಥ ಸ್ವಾಮಿ ಎಂದು ಕರೆಯಲಾಗುವ ಕಲ್ಲಿನ ಲಿಂಗ ರೂಪದ ಉದ್ಭವ ಮೂರ್ತಿ ಇದೆ. ಅಂತರಾಳದಲ್ಲಿ ಶ್ರೀದೇವಿ ಮತ್ತು ಭೂದೇವಿಯರ ಶಿಲ್ಪಗಳಿದ್ದು, ಶಿಲ್ಪಗಳ ಕೈಯಲ್ಲಿ ಪದ್ಮಗಳಿವೆ.ನವರಂಗದಲ್ಲಿ ನಾಲ್ಕು ಕಂಬಗಳಿವೆ.ಇವುಗಳನ್ನು ಬಹುಮುಖಗಳಲ್ಲಿ ಕಡೆದಿರುವರು. ನವರಂಗದ ಮೇಲ್ಚಾವಣಿಯಲ್ಲಿ ಅಷ್ಟಕೋನಾಕೃತಿಯಲ್ಲಿ ಜೋಡಿಸಲಾದ ಭುವನೇಶ್ವರಿ ಇದ್ದು,ಮಧ್ಯದ ಚಪ್ಪಡಿಯಲ್ಲಿ ಪದ್ಮವಿದೆ. ಗರ್ಭಗೃಹ ,ಅಂತರಾಳ ಮತ್ತು ನವರಂಗದ ಬಾಗಿಲುವಾಡಗಳಿಗೆ ಹಿತ್ತಾಳೆಯ ತಗಡನ್ನು ಹೊಂದಿಸಿದ್ದಾರೆ.ತಗಡಿನಲ್ಲಿ ವೈಷ್ಣವ ದ್ವಾರಪಾಲಕರು,ಲಲಾಟದಲ್ಲಿ ಗಜಲಕ್ಷ್ಮೀಯ ಪ್ರತಿಮೆಗಳಿವೆ.
ಅಂತರಾಳದ ಬಾಗಿಲುವಾಡದಲ್ಲಿ ಪೂರ್ಣಕುಂಭ,ಪದ್ಮ, ಆಂಜನೇಯ,ಗರುಡ ಮೂರ್ತಿಗಳಿವೆ.ಗರ್ಭಗೃಹದ ಮೇಲ್ಭಾಗದಲ್ಲಿ ದ್ರಾವಿಡ ಮಾದರಿಯ ತ್ರಿತಲಗಳುಳ್ಳ ಶಿಖರವಿದ್ದು ಮೇಲ್ಭಾಗದಲ್ಲಿ ಲೋಹದ ಕಳಸವಿದೆ. ದೇವಾಲಯದ ಹೊರ ಭಾಗದ ಬಿತ್ತಿಯ ಮೇಲೆ ಒಂಟೆ,ಆನೆ, ಮೀನು,ಕೂರ್ಮ,ಛತ್ರಿ ಚಾಮರ ಹಿಡಿದಿರುವ ಪರಿಚರಿಕೆಯರೊಂದಿಗೆ ಕುದುರೆ ಸವಾರಿಯಲ್ಲಿರುವ ವೀರ ಮೊದಲಾದ ಉಬ್ಬು ಶಿಲ್ಪಗಳಿವೆ. ಮುಖ ಮಂಟಪದಲ್ಲಿ ಕುಳಿತುಕೊಳ್ಳಲು ಅನುವಾಗುವಂತೆ ಕಟ್ಟೆಯನ್ನು ನಿರ್ಮಿಸಿರುವರು.
ದೇವಾಲಯದ ಮುಂಭಾಗದಲ್ಲಿ 20 ಅಡಿಗಳ ದೀಪ ಸ್ತಂಭವಿದ್ದು ಇದರಲ್ಲಿ ಲಕ್ಷ್ಮಿ,ಗರುಡ,ರಾಮ, ಆಂಜನೇಯರ ಉಬ್ಬು ಕೆತ್ತನೆಗಳಿವೆ. ಗ್ರಾಮದಲ್ಲಿ 1243ರ ಶಾಸನದಲ್ಲಿ ಅಬಿನನೊಳಲ ಶ್ರೀ ರಾಮನಾಥ ದೇವರ ಅಖಂಡ ದೀಪ, ನೈವೇದ್ಯಗಳಿಗೆ ಸುಂಕವನ್ನು ಬಿಟ್ಟುದಾಗಿ ಹೇಳಲಾಗಿದೆ. ಶಾಸನದಲ್ಲಿ ಹೇಳುವಂತೆ ಗ್ರಾಮವನ್ನು 13ನೇ ಶತಮಾನದಲ್ಲಿ ಅಬಿನನೊಳಲ ಎಂದು ಕರೆದಿದೆ.
ಗಂಟೆ ಶಾಸನಗಳು :
ಹಿರಿಯೂರು ತಾಲೂಕು ಧರ್ಮಪುರ ಹೋಬಳಿ ಅಬ್ಬಿನಹೊಳೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಮೈಸೂರು ಒಡೆಯರ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ ಗಂಟೆ ಶಾಸನಗಳನ್ನು ಕಾಣಬಹುದು. ಒಂದೇ ದೇವಾಲಯದಲ್ಲಿ 4 ಶಾಸನಗಳು ದೊರಕಿರುವುದು ಬಹಳಷ್ಟು ಅಪರೂಪ.
ಇದರಿಂದ ದೇವಾಲಯಕ್ಕೆ ಸಂಬಂಧಿಸಿದಂತೆ ಇತಿಹಾಸದ ದಾಖಲೆಗಳು ಮತ್ತಷ್ಟು ಸಿಕ್ಕಿರುವುದು ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಎಲ್ಲಾ ಶಾಸನಗಳು ದಾನ ಶಾಸನಗಳಾಗಿದ್ದು ಜಾಗಟೆ, ಗಂಟೆಗಳ ಮೇಲೆ ದಾನ ನೀಡಿದವರ ಹೆಸರುಗಳ ಅಕ್ಷರಗಳನ್ನು ಮೂಡಿಸಿರುವುದು ಕುತೂಹಲಕಾರಿಯಾಗಿದೆ. ಇದರಲ್ಲಿ ದಾನ ನೀಡಿದವರ ಹೆಸರು,ಊರಿನ ಹೆಸರು,, ನೀಡಿದ ಕಾಲ ಎಲ್ಲವನ್ನು ಕೆತ್ತಲಾಗಿದೆ. ಹೊಸಗನ್ನಡ ಭಾಷೆಯಲ್ಲಿ ಇದನ್ನು ಬರೆಯಲಾಗಿದೆ. ಇವೆಲ್ಲವೂ 19ನೆಯ ಶತಮಾನಕ್ಕೆ ಸೇರಿದ ಶಾಸನಗಳಾಗಿವೆ.
ದೇವಾಲಯದ ಪೂಜಾ ಸಾಮಗ್ರಿಗಳನ್ನು ಇಡುವ ತಿಜೋರಿಯಲ್ಲಿ ದೇವಾಲಯದ ಹಿಂದಿನ ಕಳಸದ ಭಾಗದಲ್ಲಿ ಅಕ್ಷರಗಳು ಇರುವುದನ್ನು ದೇವಾಲಯದ ಅರ್ಚಕರಾದ ರಾಜೀವಚಾರ್ ಹಾಗೂ ರಂಗನಾಥಚಾರ್ ರವರು ಸಂಶೋಧಕರು ಕ್ಷೇತ್ರ ಕಾರ್ಯದಲ್ಲಿ ಗಮನಕ್ಕೆ ತಂದಿದ್ದರು. ಒಂದು ಶಾಸನ ಉಳ್ಳ ಗಂಟೆಯು ದೇವಾಲಯದ ಸಭಾಮಂಟಪದಲ್ಲಿ ಈಗಲೂ ಬಳಕೆಯಲ್ಲಿರುವುದನ್ನು ಕಾಣಬಹುದಾಗಿದೆ. ಅಂದು ಬಳಕೆಯಾಗಿರುವ ಕಂಚು ಮತ್ತು ತಾಮ್ರ ಲೋಹದ ಗಂಟೆಯೂ ಸ್ವಲ್ಪವೂ ಮುಕ್ಕಾಗದೆ ಇಂದಿಗೂ ಬಳಕೆಯಲ್ಲಿರುವುದು ಅಂದಿನ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.
ಮೊದಲನೇ ಶಾಸನ ತಿಳಿಸುವಂತೆ (ಶಾಸನ 1:) (ಕಳಸ )
ಒಂದು ಶಾಸನವು 1826 ಮೇ ಗುರುವಾರದಂದು ಯರಬೊಮ್ಮನಹಳ್ಳಿಯ ಅಕ್ಕಸಾಲಿಗ ಕೃಷ್ಣಪ್ಪನ ಮಗ ಕೋಡಿರಂಗಪ್ಪನು ಅಬ್ಬಿನಹೊಳೆಯ ರಂಗನಾಥ ಸ್ವಾಮಿ ದೇವರಿಗೆ ಒಪ್ಪಿಸಿದ ಕಳಸದ ಬಗ್ಗೆ ಮಾಹಿತಿ ನೀಡುತ್ತದೆ. ಮತ್ತೊಂದು ಶಾಸನವು (ಶಾಸನ 2:) ಹಾಳಾಗಿರುವ ತಾಮ್ರದ ಬಾಗಿಲುವಾಡ ಭಾಗದಲ್ಲಿದ್ದು, ಕಡಪದ ಸುಬ್ಬಣ್ಣನ ಭಕ್ತಿ ಎಂಬ ಅಕ್ಷರಗಳು ಮಾತ್ರ ಕಂಡು ಬರುತ್ತದೆ. ಇದು ಕೂಡ 19ನೆಯ ಶತಮಾನದ ಕಾಲಕ್ಕೆ ಸೇರಿದೆ.ಮೂರನೇ ಶಾಸನವು ಗಂಟೆಯ ಮೇಲೆ ಇದ್ದು, ಅಬ್ಬಿನೆಳೆಯ ರಂಗನಾಥನಿಗೆ ನೇರಳಕೆರೆ ಚಂನೆಕೃಷ್ಣಪ್ಪನು ಒಪ್ಪಿಸಿದ ಗಂಟೆ ಎಂಬ ಬರಹವಿದೆ. ಇದರಕಾಲ 1871 ಮೇ 14. ನಾಲ್ಕನೆಯ ಶಾಸನವು
ದೇವಾಲಯದ ಮತ್ತೊಂದು ಗಂಟೆಯ ಮೇಲೆ ಇದ್ದು, ಯರಬೊಮ್ಮನಹಳ್ಳಿಯ ಅಕ್ಕಸಾಲಿಗ ರಂಗಶಾಮವರ ಮಗ ರಂಗ ಅಭಿನೆಳೆ ರಂಗನಾಥ ಸ್ವಾಮಿಗೆ ಒಪ್ಪಿಸಿದ ಗಂಟೆ 10ನೆಯದು ಎಂದು ದಾಖಲಿಸಿದೆ. ಇದು 1874 ಮಾರ್ಚ್ 22ನೇ ತಾರೀಕಿನದ್ದಾಗಿದೆ.
ಶಾಸನದಲ್ಲಿ ತಿಳಿಸಿರುವಂತೆ ಆಂಧ್ರ ಪ್ರದೇಶ ರಾಜ್ಯದ ಮಡಕಸಿರಾ ತಾಲೂಕಿನ ಭಕ್ತರು, ಮಧುಗಿರಿ ತಾಲೂಕಿನ ನೇರಳಕೆರೆ,ಆಂಧ್ರದ ಕಡಪದ ಭಕ್ತರು ದಾನಗಳನ್ನು ನೀಡಿರುವುದು ಶಾಸನಗಳಲ್ಲಿ ಕಾಣಬಹುದಾಗಿದೆ.
ವೀರಗಲ್ಲುಗಳು :
ಕೆರೆಗೆ ಹೋಗುವ ಹಾದಿಯಲ್ಲಿ ಶಾಸನೋಕ್ತ ನೊಳಂಬರ ಕಾಲದ ವೀರಗಲ್ಲು ಇದ್ದು ಇದರಲ್ಲಿ 923ರಲ್ಲಿ ನೊಳಂಬರ ದೊರೆ ಅಯ್ಯಪ್ಪನ ಬಗ್ಗೆ ತಿಳಿಸಲಾಗಿದೆ. ಮತ್ತೊಂದು ವೀರಗಲ್ಲು ಇದೆ ದಾರಿಯಲ್ಲಿದ್ದು,12 ನೇ ಶತಮಾನದ ಹೊಯ್ಸಳರ ಕಾಲಕ್ಕೆ ಸೇರಿದೆ.ದೇವಾಲಯದ ಎದುರು ಭಾಗದಲ್ಲಿ ವಿಜಯನಗರ ಕಾಲದ ವೀರಮಾಸ್ತಿಗಲ್ಲು ಇರುವುದನ್ನು ಕಾಣಬಹುದು. ಇವೆಲ್ಲವನ್ನೂ ಸಂರಕ್ಷಣೆ ಮಾಡುವ ಅವಶ್ಯಕತೆ ಇದೆ. ಆ ಕಾರಣಕ್ಕೆ ಅಬ್ಬಿನಹೊಳೆ ಅತ್ಯಂತ ಪ್ರಾಚೀನ ಗ್ರಾಮವಾಗಿದ್ದು,ಸಾವಿರ ವರ್ಷಗಳಿಂದಲೂ ಇರುವ ಬಗ್ಗೆ ದಾಖಲೆ ಇದೆ.
ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಹರಡಿದೆ. ಅಲ್ಲಲ್ಲಿ ಏರಿಳಿತ ಇರುವ ಭೂಪ್ರದೇಶಗಳು ಕಂಡುಬರುತ್ತದೆ.
ದೇವಾಲಯದ ಎದುರಿನ ಬಾವಲಿಗಳು:
ದೇವಾಲಯದ ಎದುರು ಭಾಗದಲ್ಲಿ 5-6 ಬೃಹತ್ ಮರಗಳಿದ್ದು, ಇದರಲ್ಲಿ ನೂರಾರು ಬಾವಲಿಗಳು ಹೊಸ ಮಾಡುತ್ತಿವೆ. ಇವುಗಳನ್ನು ದೇವರ ಸ್ವರೂಪವೆಂದು ನಂಬುವ ಸ್ಥಳೀಯರು ಇದಕ್ಕೆ ಯಾವುದೇ ರೀತಿ ಹಾನಿ ಮಾಡುವುದಿಲ್ಲ. ಗ್ರಾಮದ ಇತರೆ ಬೃಹತ್ ಮರಗಳಿದ್ದರೂ ಅಲ್ಲಿ ಯಾವುದೇ ಬಾವಲಿಗಳು ವಾಸ ಮಾಡದೆ, ನೂರಾರು ವರ್ಷಗಳಿಂದಲೂ ದೇವಾಲಯದ ಎದುರಿನ ಮರಗಳಲ್ಲಿ ಬಾವಲಿಗಳು ವಾಸ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಕಾಕತಾಳೀಯ ವೆಂಬಂತೆ ದೇವಾಲಯದಲ್ಲಿ ಸಮಸ್ಯೆಯಾಗಿ ದೇವಾಲಯಕ್ಕೆ ಬೀಗ ಹಾಕಿದಾಗ ಬಾವಲಿಗಳು ಬೇರೆ ಕಡೆ ವಲಸೆ ಹೋಗಿದ್ದವು. ಮತ್ತೆ ದೇವಾಲಯದ ಬೀಗ ತೆರೆದು ಪೂಜೆ ಶುರುವಾದಾಗ ಬಾವಲಿಗಳು ವಾಪಸ್ ಬಂದು ಇಲ್ಲಿ ವಾಸ ಮಾಡತೊಡಗಿದವಂತೆ.
ರಥೋತ್ಸವ :
ಪ್ರತಿ ವರ್ಷ ನಡೆಯುವ ಬ್ರಹ್ಮರಥೋತ್ಸವಕ್ಕೆ ಅಕ್ಕಪಕ್ಕದ ಜಿಲ್ಲೆ,ತಾಲೂಕುಗಳಿಂದ ಸಾವಿರಾರು ಭಕ್ತರು ತಪ್ಪದೇ ಭಾಗವಹಿಸುತ್ತಾರೆ. ಜಾತ್ರೆಯ ಅಂಗವಾಗಿ ಅಗ್ನಿಪ್ರತಿಷ್ಠೆ, ಸಿಂಹವಾಹನೋತ್ಸವ, ಹನುಮಂತ ಮಹೋತ್ಸವ, ಗರುಡೋತ್ಸವ, ಕಲ್ಯಾಣೋತ್ಸವ ಗಜೇಂದ್ರ ಮೋಕ್ಷ, ಮೃಗಯಾತ್ರೋತ್ಸವ, ಕಂಕಣ ವಿಸರ್ಜನೆ, ಮಹಾಮಂಗಳಾರತಿ, ಕಣಿವೆ ಮಾರಮ್ಮನಿಗೆ ಆರತಿ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.
ಕಾರ್ತಿಕ ಹಾಗೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ದೀಪಾರಾಧನೆ,ಅಭಿಷೇಕ,ಅನ್ನ ಸಂತರ್ಪಣೆ ನಡೆಸಲಾಗುತ್ತದೆ.






