ಬೆಂಗಳೂರು: ಕೆಲವೊಂದು ಸಣ್ಣ ಸಣ್ಣ ಎಡವಟ್ಟುಗಳು ದೊಡ್ಡ ದೊಡ್ಡ ಬೆಲೆಯನ್ನ ತೆರಬೇಕಾಗುತ್ತದೆ. ಈಗ ಕಾಂಗ್ರೆಸ್ ಪಾಳಯದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕ ಶಿವಲಿಂಗೇಗೌಡ ಅವರ ಆಡಿಯೋ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂಕಷ್ಟ ತಂದೊಡ್ಡುವ ಎಲ್ಲಾ ಸಾಧ್ಯತೆಯೂ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವೋಟ್ ಗಾಗಿ ನೋಟು ಹಂಚಿಕೆ ಮಾಡಲಾಗಿದೆ ಎಂಬ ಆಡಿಯೋ ವೈರಲ್ ಆಗಿತ್ತು.
ಶಿವಲಿಂಗೇಗೌಡ ಅವರದ್ದೇ ಆಡಿಯೋ ಎನ್ನಲಾಗಿದ್ದು, ಈ ಸಂಬಂಧ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಂಸದ ಶ್ರೇಯಸ್ ಎಂ ಪಾಟೀಲ್ ಪರವಾಗಿ ಜಿಲ್ಲೆಯಲ್ಲಿ ಹಣ ಹಂಚಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಸಭಾ ಸದಸ್ಯ ಎನ್. ಚಂದ್ರಶೇಖರ್ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ ಎಂದು ಮಾತನಾಡಿದ್ದರು. ಈ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಅದೇ ಆಡಿಯೋ ಸಿದ್ದರಾಮಯ್ಯ ಹಾಗೂ ಡಿಕೆಶಿ ಕಂಟಕವಾಗಬಹುದಾ ಎಂಬ ಪ್ರಶ್ನೆಗಳು ಮೂಡಿವೆ. ಯಾಕಂದ್ರೆ ಆ ಆಡಿಯೋದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಹೆಸರು ಕೇಳಿ ಬಂದ ಹಿನ್ನೆಲೆ, ಇಬ್ಬರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಲು, ಪ್ರಾಸಿಕ್ಯೂಷನ್ ಗೆ ನೀಡಲು ವಕೀಲ ದೇವರಾಜೇಗೌಡ ಮನವಿ ಮಾಡಿದ್ದಾರೆ. 1.5 ಕೋಟಿ ಹಣ ಖರ್ಚು ಮಾಡಿರುವ ಬಗ್ಗೆ ಆ ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದೆ ಎಂದು ದೂರು ನೀಡಿದ್ದಾರೆ. ಇತ್ತ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಮತಗಳ್ಳತನವಾಗಿದೆ ಅಂತ ಹೋರಾಟ ಮಾಡಿದ್ರೆ, ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದೆ.






