ನಮ್ಮೂರು ನಮ್ಮ ಹೆಮ್ನೆ : ಹಿರಿಯೂರು : ಮರಡಿಹಳ್ಳಿ ಗ್ರಾಮದ ಪರಿಚಯ

7 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಮರಡಿಹಳ್ಳಿ ಗ್ರಾಮವು ಪಂಚಾಯಿತಿ ಕೇಂದ್ರವಾಗಿದ್ದು, ಹಿರಿಯೂರಿನಿಂದ 24 ಕಿಲೋಮೀಟರ್ ದೂರ ವಾಯುವ್ಯಕ್ಕೆ,
ಹಿರಿಯೂರು- ಐಮಂಗಲ – ಮರಡಿಹಳ್ಳಿ ಮಾರ್ಗದಲ್ಲಿದೆ.

ಈ ಗ್ರಾಮಕ್ಕೆ ಹಳೆಗ್ರಾಮ ನಿವೇಶನ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಆದರೆ ಗ್ರಾಮದ ವಾಯುವ್ಯಕ್ಕೆ ಇರುವ ಆಂಜನೇಯಸ್ವಾಮಿ ದೇವಾಲಯದ ಬಳಿಯಲ್ಲಿ ಇರುವ ಸ್ಥಳದಲ್ಲಿ ಹಿಂದೆ ಹಳೆಗ್ರಾಮ ನಿವೇಶನ ಇರಬಹುದೆಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಇದಕ್ಕೆ ಓಬಕ್ಕನಹಳ್ಳಿ ಎಂಬ ಹೆಸರಿದ್ದಿತು ಎಂದು ಹಿಂದಿನ ಇತಿಹಾಸತಜ್ಞರು ಹೇಳುತ್ತಾರೆ.

ಹೆಸರಿನ ಮೂಲ :
ಮರಡಿ ಎಂದರೆ ಸಣ್ಣಗುಡ್ಡ ಎತ್ತರದ ಸ್ಥಳ ಎಂಬ ಅರ್ಥವಿದೆ. ಹಾಗಾಗಿ ಮರಡಿಯ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಹಳ್ಳಿಯ ಕಾರಣಕ್ಕೆ ಈ ಗ್ರಾಮಕ್ಕೆ ಮರಡಿಹಳ್ಳಿ ಎಂಬ ಹೆಸರು ಬಂದಿದೆ. ಗ್ರಾಮವು ಮರಡಿಯ ಪೂರ್ವ ಹಾಗೂ ಉತ್ತರದ ಭಾಗದಲ್ಲಿ ನಿರ್ಮಾಣವಾಗಿದೆ. ಈ ಮರಡಿಗೆ ಸ್ಥಳೀಯರು ರಂಗಪ್ಪನ ಗುಡ್ಡ ಎಂಬ ಹೆಸರು ಹೇಳುತ್ತಾರೆ. ಈ ಮರಡಿಯ ಮೇಲೆ ಉದ್ಭವ ರಂಗನಾಥ ಸ್ವಾಮಿಯ ಶಿಲ್ಪವಿದೆ. ಸ್ಥಳೀಯ ಕಲ್ಲುಗಳನ್ನು ಬಳಸಿ ಇದಕ್ಕೆ ಸಣ್ಣ ದೇವಾಲಯ ನಿರ್ಮಾಣ ಮಾಡಲಾಗಿದೆ.ಇದರ ಬಳಿಯಲ್ಲಿಯೇ ಪಿಲ್ಲೋಲಾವಾ ಶಿಲೆಗಳನ್ನು ಕಾಣಬಹುದು.

ಭೌಗೋಳಿಕವಾಗಿ ಗಮನಿಸಬಹುದಾದರೆ ಹಿಂದಿನಿಂದಲೂ ಈ ಪ್ರದೇಶ ಹಾಗೂ ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಒಣ ಭೂಪ್ರದೇಶ ಇರುವ ಮೈದಾನದ ಜಾಗವಾಗಿದೆ. ಮಳೆಯ ಪ್ರಮಾಣ ತೀವ್ರವಾಗಿ ಕಡಿಮೆ ಇರುವ ಜಾಗ ಇದಾಗಿದೆ. ಸುತ್ತಮುತ್ತಲ ಹತ್ತಿರದ ಯಾವುದೇ ಪ್ರದೇಶದಲ್ಲೂ ಸಣ್ಣಗುಡ್ಡಗಳು ಕಾಣುವುದಿಲ್ಲ.ಆದರೆ ಈ ಗ್ರಾಮದಲ್ಲಿ ಮಾತ್ರ ಸಣ್ಣ ಮರಡಿಗಳು ಕಂಡುಬರುತ್ತವೆ.

ರಾಷ್ಟ್ರೀಯ ಭೂ ವೈಜ್ಞಾನಿಕ ಸ್ಮಾರಕ :
ಗ್ರಾಮದ ಮರಡಿಯ ಮೇಲೆ ಇರುವ ರಾಷ್ಟ್ರೀಯ ಭೂ ವೈಜ್ಞಾನಿಕ ಸ್ಮಾರಕ ಪಿಲ್ಲೋಲಾವಾ ಅಗ್ನಿಶಿಲೆಗಳೆಂದೇ ಪ್ರಸಿದ್ಧಿ ಪಡೆದಿವೆ. ಇದನ್ನು ಅಧ್ಯಯನ ಮಾಡಲು,ನೋಡಲು ನೂರಾರು ವಿದ್ಯಾರ್ಥಿಗಳು, ಶಿಕ್ಷಕರು,ಅಧ್ಯಾಪಕರು, ಭೂವಿಜ್ಞಾನಿಗಳು… ದೇಶವಿದೇಶಗಳಿಂದ ಆಗಮಿಸುತ್ತಾರೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ಇವು ಅಗ್ನಿಶಿಲೆಗಳಾಗಿದ್ದು ಎರಡೂವರೆ ಕೋಟಿ ವರ್ಷಗಳಷ್ಟು ಪ್ರಾಚೀನವಾಗಿದ್ದು, ನಾವಿಂದು ಜೀವಿಸುವ ಈ ನೆಲವು ಒಂದಾನೊಂದು ಕಾಲದಲ್ಲಿ ಸಾಗರದ ತಳವಾಗಿದ್ದು ಜ್ವಾಲಾಮುಖಿಗಳು ಲಾವಾರಸವನ್ನು ಚಿಮ್ಮಿ ತಣ್ಣಗಾದ ನಂತರ ಘನರೂಪ ಪಡೆದು ಈಗಿರುವ ಆಕಾರದ ಶಿಲೆಗಳಾಗಿವೆ. ದಿಂಬಿನ ಆಕಾರದಲ್ಲಿ ಇರುವ ಕಾರಣಕ್ಕೆ ಇವನ್ನು ಪಿಲ್ಲೋ-ಲಾವಾ ಎಂದು ಹೇಳಲಾಗುತ್ತದೆ. ಈ ಶಿಲೆಯ ಅಡ್ಡಸೀಳಿಕೆಯಲ್ಲಿ ಕಾಣಿಸುವ ಎಲ್ಲ ರಚನೆಗಳು ನೈಸರ್ಗಿಕ ವಿಸ್ಮಯವನ್ನಾಗಿಸಿದೆ. ಈ ಶಿಲೆಗಳು ಉತ್ಕೃಷ್ಟ ಗುಣಮಟ್ಟದೆಂದು ಲಂಡನ್ನಿನ ಭೂಗರ್ಭ ಮ್ಯೂಸಿಯಂನಲ್ಲಿ ಈ ಶಿಲೆಗಳನ್ನು ಇರಿಸಿದ್ದಾರೆ. ಇಂತಹ ಶಿಲೆಗಳನ್ನು ಪ್ರಥಮವಾಗಿ ಸಂಶೋಧಿಸಿದವರು ಡಾ.ಸಿ. ಎಚ್. ಪಿಚ್ಚಮುತ್ತು.1978 ರಲ್ಲಿ ಇದನ್ನು ಸಂರಕ್ಷಿತ ಸ್ಮಾರಕವಾಗಿ ಸರ್ಕಾರ ಘೋಷಿಸಿದೆ.

ಗ್ರಾಮದ ಶಾಲೆ :
ಗ್ರಾಮದ ಮಧ್ಯ ಭಾಗದಲ್ಲಿರುವ ಶಾಲಾ ಸಮುಚ್ಚಯವು ಇಂದು ವಿಶಾಲವಾಗಿ ಹರಡಿದೆ.1920-2023 1948-2023 ರ ಸಮಯವು ಶಾಲೆಗಳ ಶತಮಾನೋತ್ಸವ ಹಾಗೂ ಅಮೃತ ಮಹೋತ್ಸವದ ಸಂಭ್ರಮ ಆಚರಣೆಯಲ್ಲಿದೆ. ಶಾಲೆಯ ಈ ಅವಧಿಯಲ್ಲಿ ಈ ಶಾಲೆಯಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶವಿದೇಶಗಳ ಉನ್ನತ ಸ್ಥಾನದಲ್ಲಿದ್ದು ಗ್ರಾಮದ,ಜಿಲ್ಲೆಯ ಹೆಸರನ್ನು ಮೇಲಕ್ಕೇರಿಸಿದ್ದಾರೆ. ಹಳೆ ವಿದ್ಯಾರ್ಥಿಗಳ ಸಂಘವು ಇಲ್ಲಿದ್ದು,ವಾರ್ಷಿಕ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸುತ್ತಾರೆ. ಈಗ ಈ ಶಾಲೆಯ ಆವರಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆ ಕೂಡ ಶುರುವಾಗಿದೆ.

ಗ್ರಾಮದಲ್ಲಿರುವ ದೇವಾಲಯಗಳು :

1.*ಆಂಜನೇಯಸ್ವಾಮಿ ದೇವಾಲಯ*
ಗ್ರಾಮದ ವಾಯುವ್ಯಕ್ಕೆ ಹಳೆ ಗ್ರಾಮ ನಿವೇಶನದ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಕ್ಕೆ ಅಭಿಮುಖವಾಗಿದ್ದು, ದೇವಾಲಯವು ಕಲ್ಯಾಣ- ಚಾಲುಕ್ಯ ಶೈಲಿಯಲ್ಲಿ 11- 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ, ತೆರೆದ ಸಭಾಮಂಟಪಗಳಿಂದ ಕೂಡಿದ ದೇವಾಲಯ ಇದಾಗಿದೆ. ಗರ್ಭಗೃಹದ ಬಾಗಿಲವಾಡವು ಸುಂದರವಾಗಿದ್ದು, ಇಕ್ಕೆಲಗಳಲ್ಲಿ ಸ್ತಂಭಶಾಖೆಗಳಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಶಿಲ್ಪವಿದೆ.
ಗರ್ಭಗೃಹದ ಒಳಭಾಗದಲ್ಲಿರುವ ಆಂಜನೇಯನ ಶಿಲ್ಪವು ಮೂರೂವರೆ ಅಡಿ ಎತ್ತರವಿದ್ದು ಇದು ನಂತರದ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಸಭಾಮಂಟಪದಲ್ಲಿ 6 ಕಂಬಗಳಿವೆ.ಇವು ಚಚ್ಚೌಕಾರದ ಪೀಠದ ಮೇಲೆ ಕಪ್ಪು ಶಿಲೆಯಲ್ಲಿ ಕಂಡರಿಸಿದ ಕಂಬಗಳಿವೆ.
ಈ ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿರುವರು. ಕಂಬದ ದಿಂಡಿನ ಮೇಲ್ಭಾಗದಲ್ಲಿ ಕೀರ್ತಿಮುಖದ ರಚನೆಗಳಿದ್ದು ಮಧ್ಯಭಾಗದಲ್ಲಿ ಗಣೇಶ ,ಪದ್ಮ ,ಲಜ್ಜಾಗೌರಿ ಮೊದಲಾದ ಉಬ್ಬುಶಿಲ್ಪಗಳನ್ನು ಕಡೆಯಲಾಗಿದೆ.
ಕಂಬದ ದಿಂಡಿನಲ್ಲಿರುವ ಹಿರಣ್ಯ ಕಶ್ಯಪನ ಹೊಟ್ಟೆಯನ್ನು ಬಗೆಯುತ್ತಿರುವ ನರಸಿಂಹ, ವಿಷ್ಣು ,ಹೂಬಳ್ಳಿ, ಪೂರ್ಣಕುಂಭ ,ನೃತ್ಯಗಾರ್ತಿ, ವಾದ್ಯಗಾರ ,ನಾಟ್ಯಶಿವ, ಲಿಂಗವನ್ನು ಪೂಜಿಸುತ್ತಿರುವ ವಾನರರನ್ನು ಕೆತ್ತಲಾಗಿದೆ. ಕಂಬಗಳಲ್ಲಿ ವೃತ್ತಾಕಾರದ ಘಟ ಮತ್ತು ಸರಳವಾದ ಬೋಧಿಕೆಗಳಿವೆ. ಮುಂಬದಿಯ ಎರಡು ಕಂಬಗಳಲ್ಲಿ ಶಿಲ್ಪಗಳಿರುವುದಿಲ್ಲ. ದೇವಾಲಯದ ಪಕ್ಕದಲ್ಲಿ ನಾಗಶಿಲ್ಪಗಳಿವೆ. ದೇವಾಲಯದ ಎದುರುಗಡೆ ಸಪ್ತಮಾತೃಕೆಯರ ಮೂರು ಬಿಡಿಶಿಲ್ಪಗಳಿವೆ. ಈ ಎಲ್ಲಾ ಬಗೆಯ ಶಿಲ್ಪ, ದೇಗುಲದ ಲಕ್ಷಣಗಳನ್ನು ಗಮನಿಸಿದರೆ ಈ ದೇವಾಲಯವು ಕ್ರಿಸ್ತಶಕ 10 – 11 ಶತಮಾನದಲ್ಲಿ ನಿರ್ಮಾಣವಾಗಿದ್ದು ಕಾಲಾಂತರದಲ್ಲಿ ಇದು ಊರ ಹೊರಗೆ ಇರುವ ದೇವಾಲಯವಾದ್ದರಿಂದ ಭಗ್ನಗೊಂಡಿದೆ. ನಂತರದ ಕಾಲದಲ್ಲಿ ಇದರ ಗರ್ಭಗೃಹದಲ್ಲಿ ಆಂಜನೇಯನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಿಪಾಠ ಮುಂದುವರೆದಿದೆ.

2. ಶ್ರೀರಾಮ ದೇವಾಲಯ* ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು 17 -18 ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
ಶ್ರೀರಾಮ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹ,ಅಂತರಾಳ,ತೆರೆದ ಸಭಾಮಂಟಪಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗೃಹದಲ್ಲಿ ಶ್ರೀರಾಮ, ಲಕ್ಷ್ಮಣ,ಸೀತೆ ಮತ್ತು ಆಂಜನೇಯನ ವಿಗ್ರಹಗಳಿವೆ. ಈ ವಿಗ್ರಹಗಳನ್ನು ಕಪ್ಪುಶಿಲೆಯಲ್ಲಿ ಕಡೆಯಲಾಗಿದೆ.ತೆರೆದ ಸಭಾಮಂಟಪದಲ್ಲಿ ನಾಲ್ಕು ಕಂಬಗಳಿವೆ. ಇವು ಚಚ್ಚೌಕ ಹಾಗೂ ಅಷ್ಟ ಮುಖಗಳಲ್ಲಿದ್ದು ಸರಳವಾದ ಬೋಧಿಗೆಗಳನ್ನು ಹೊಂದಿದೆ. ಪ್ರತಿ ವರ್ಷ ರಾಮನವಮಿಯಲ್ಲಿ ಈ ದೇವರ ಉತ್ಸವ ಹಾಗೂ ಮೆರವಣಿಗೆ ಜರುಗುತ್ತದೆ.

3.*ವೆಂಕಟೇಶ್ವರ ಸ್ವಾಮಿ ದೇವಾಲಯ:*
ಗ್ರಾಮದ ಮಧ್ಯಭಾಗದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದ್ದು 20 ನೇ ಶತಮಾನದಲ್ಲಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ, ಅಂತರಾಳ, ಸಭಾಮಂಟಪ, ಮಹಾದ್ವಾರ ಪ್ರಾಕಾರ ಗೋಡೆಗಳನ್ನು ಈ ದೇವಾಲಯ ಒಳಗೊಂಡಿದೆ.

ಗರ್ಭಗೃಹದಲ್ಲಿ ಎರಡೂವರೆ ಅಡಿ ಎತ್ತರದ ಪೀಠದ ಮೇಲೆ ಸಮಭಂಗಿಯಲ್ಲಿ ನಿಂತಿರುವ ಮೂರೂವರೆ ಅಡಿ ಎತ್ತರದ ಕಪ್ಪು ಶಿಲೆಯ ವೆಂಕಟೇಶ್ವರನ ಶಿಲ್ಪವಿದೆ. ಕೈಗಳಲ್ಲಿ ಶಂಖ,ಚಕ್ರ ಅಭಯಹಸ್ತ ಹಾಗೂ ಕಟಿಹಸ್ತಮುದ್ರೆಯಲ್ಲಿವೆ. ಮೇಲ್ಭಾಗದಲ್ಲಿ ಕೀರ್ತಿಮುಖ ಹಾಗೂ ಹೂಬಳ್ಳಿಗಳ ಅಲಂಕರಣೆಯುಳ್ಳ ಪ್ರಭಾವಳಿ ಇದೆ. ವೆಂಕಟೇಶ್ವರನ ಬಲಭಾಗದಲ್ಲಿ ಪದ್ಮಾವತಿಯ ಶಿಲ್ಪವಿದೆ. ಸಭಾಮಂಟಪದಲ್ಲಿ 6 ಕಂಬಗಳಿದ್ದು ಚಚ್ಚೌಕ ಪೀಠದ ಮೇಲೆ ಚಚ್ಚೌಕ ಅಷ್ಟಮುಖಗಳಲ್ಲಿ ಕಡೆದ ದಿಂಡು ಮತ್ತು ಸರಳವಾದ ಬೋಧಿಗೆಗಳನ್ನು ಹೊಂದಿವೆ. ದೇವಾಲಯದ ಎದುರು ಭಾಗದಲ್ಲಿ ಒಂದು ಅಡಿ ಎತ್ತರದ ಗರುಡ ಶಿಲ್ಪವಿದೆ.
ದೇವಾಲಯದ ಬಲಭಾಗದಲ್ಲಿ ಸೂರ್ಯನಾರಾಯಣ ಎಡಭಾಗದಲ್ಲಿ ಸತ್ಯನಾರಾಯಣ ಹಿಂಭಾಗದಲ್ಲಿ ನಾಗಶಿಲ್ಪ, ರಂಗನಾಥ ಸ್ವಾಮಿ ದೇವಾಲಯಗಳಿವೆ.
ದೇವಾಲಯದ ಮುಂಭಾಗದಲ್ಲಿ ದಶಾವತಾರದ ಶಿಲ್ಪಗಳಿವೆ.
ಪ್ರತಿ ಶನಿವಾರ ಈ ದೇವಾಲಯದಲ್ಲಿ ವಿಶೇಷ ಅಲಂಕಾರ,ಪೂಜೆ,ಪ್ರಾರ್ಥನೆ ಹಾಗೂ ಭಕ್ತರಿಂದ ಅನ್ನದಾಸೋಹ ನಡೆಯುತ್ತದೆ.

ಪ್ರತಿ ವರ್ಷ ಜಾತ್ರಾ ಸಮಯ ಹಾಗೂ ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಯುಗಾದಿಯ ನಂತರದ ದಿನಗಳಲ್ಲಿ ಈ ದೇವರ ರಥೋತ್ಸವ ವಿಜೃಂಭಣೆಯಿಂದ ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ.
ದೇವಾಲಯದ ಬಳಿಯಲ್ಲಿ ಮದುವೆ,ನಾಮಕರಣ..
ಮುಂತಾದ ಶುಭ ಸಮಾರಂಭಗಳು ಸದಾ ಕಾಲ ನಡೆಯುತ್ತಿರುತ್ತದೆ. ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಸಾಹುಕಾರ್ ಸೂರಪ್ಪ ರೆಡ್ಡಿ ರವರು:
ಇವರು ಮಹಾನ್ ದೈವಭಕ್ತರು, ಸಮಾಜಸೇವಕರು, ಕೊಡುಗೈದಾನಿಯಾಗಿದ್ದು ಗ್ರಾಮದ ಅಗ್ರಗಣ್ಯರಾಗಿದ್ದಾರೆ.
ಕನಸಿನಲ್ಲಿ ಕಂಡ ತಿರುಪತಿ ತಿಮ್ಮಪ್ಪನ ಇಚ್ಛೆಯಂತೆ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯವನ್ನು ಇವರೇ ಕಟ್ಟಿಸಿದರು. ಗ್ರಾಮದಿಂದ ಹತ್ತಿಯನ್ನು ಬೆಂಗಳೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಿ ಅಲ್ಲಿಂದ ಚಕ್ಕಡಿ ಗಾಡಿಗಳಲ್ಲಿ ವಿವಿಧ ಊರುಗಳಿಂದ ದೇವಾಲಯಕ್ಕೆ ಕಲ್ಲಿನ ಕಂಬಗಳನ್ನು ತರಿಸಿ ದೇವಾಲಯದ ನಿರ್ಮಾಣ 1880-1911 ರ ಸಮಯದಲ್ಲಿ ಮಾಡಿಸಿದರು.

1920 ರಲ್ಲಿ ಗ್ರಾಮದಲ್ಲಿ ಮಾಧ್ಯಮಿಕ ಶಾಲೆ,ಅಂಚೆ ಕಚೇರಿ, ಆಸ್ಪತ್ರೆ ಇವರ ಉದಾರ ದೇಣಿಗೆಯಿಂದ ಶುರುವಾದವು. ಚಿತ್ರದುರ್ಗ ನಗರದ ಬಿ.ಡಿ. ರಸ್ತೆಯಲ್ಲಿ ಇರುವ ಜಿಲ್ಲಾ ರೆಡ್ಡಿ ಜನಾಂಗದ ವಸತಿ ನಿಲಯಕ್ಕೆ ಹಾಗೂ ಅದರ ಪಕ್ಕದ ಮೈಸೂರು ಬ್ಯಾಂಕ್ ಗೆ ಅಪಾರವಾದ ದೇಣಿಗೆಯನ್ನು ನೀಡಿ ಅಂದಿನ ಮೈಸೂರಿನ ಮಹಾರಾಜರಿಂದ ಹಾಗೂ ಬುದ್ಧಿಜೀವಿ
ಡಾ.ಸಿ. ಆರ್.ರೆಡ್ಡಿ ಅವರಿಂದ ಸಾಹುಕಾರ ಎಂಬ ಬಿರುದನ್ನು ಪಡೆದು ಸಾಹುಕಾರ್ ಸೂರಪ್ಪನೆಂದು ಪ್ರಸಿದ್ಧರಾದರು.

4.ಈಶ್ವರ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈಶ್ವರ ದೇವಾಲಯವು ವೆಂಕಟೇಶ್ವರ ಸ್ವಾಮಿ ದೇವಾಲಯದ ಬಳಿಯಲ್ಲಿದೆ. ಉತ್ತರಾಭಿಮುಖವಾಗಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯದ ಗರ್ಭಗೃಹದಲ್ಲಿ ಈಶ್ವರಲಿಂಗ ಹಾಗೂ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ.

5. ಕಾಳಮ್ಮದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಕಾಳಮ್ಮದೇವಿ ದೇವಾಲಯವು ಪೂರ್ವಾಭಿಮುಖವಾಗಿದ್ದು ಗರ್ಭಗೃಹದಲ್ಲಿ ಕಾಳಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಇದರ ಎದುರು ಭಾಗದಲ್ಲಿ ಅಶ್ವತ ಕಟ್ಟೆ ಹಾಗೂ ನಾಗಶಿಲ್ಪಗಳಿವೆ.

6. ದುರ್ಗಾಂಬಿಕಾ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.

7. ಕೊಲ್ಲಾಪುರದಮ್ಮ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಕೊಲ್ಲಾಪುರದಮ್ಮದೇವಿ ದೇವಾಲಯವು ಪೂರ್ವಾಭಿಮುಖವಾಗಿದ್ದು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಇದರ ಜೊತೆಗೆ ಗ್ರಾಮದ ಪಶ್ಚಿಮಕ್ಕೆ ಬುರುಜಿನರೊಪ್ಪ ರಸ್ತೆಯಲ್ಲಿ ಗೌರಸಂದ್ರ ಮಾರಮ್ಮ ದೇವಾಲಯವಿದ್ದು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.

ನಾಟಕರಂಗ:
ಗ್ರಾಮದ ನಾಟಕಕಾರ ಕವಿ ಮರಡಿಹಳ್ಳಿ ರುದ್ರಪ್ಪ (1855-1940)ಮತ್ತು ರುದ್ರನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ(1904-1969) ಇವರುಗಳಿಂದ ಇಂದಿಗೂ ನಾಟಕ ಕಲೆ ಗ್ರಾಮದಲ್ಲಿ ಜೀವಂತಿಕೆಯಿಂದ ಇದೆ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆಯುವ ಜಾತ್ರಾ ಸಮಯದಲ್ಲಿ ಹಲವಾರು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ಮಾಡಲಾಗುತ್ತದೆ.
ಮೈಸೂರಿನ ಮಹಾರಾಜರ ಕುರಿತು ಭಾಮಿನಿ ಷಟ್ಪದಿ ಹಾಗೂ ಕಂದ ಪದ್ಯಗಳನ್ನು ರಚಿಸಿ ವಾಚಿಸಿದ ಕವಿ ರುದ್ರಪ್ಪರನ್ನು ಮಹಾರಾಜರು ಅಂದು ದಸರಾ ದರ್ಬಾರ್ ನಲ್ಲಿ ಸನ್ಮಾನಿಸುತ್ತಾರೆ.
ಸೀತಾರಾಮರೆಡ್ಡಿ ಅವರು ಚಕ್ರವ್ಯೂಹ,ದಾನ ಶೂರಕರ್ಣ, ದುರ್ದೈವ ಎಂಬ ಪೌರಾಣಿಕ ಹಾಗೂ ರಾಜವೀರ ಮದಕರಿ ನಾಯಕ ವಿಜಯನಗರ ಪತನ ರಾಣಾ ಪ್ರತಾಪ ಸಿಂಹ ಎಂಬ ಐತಿಹಾಸಿಕ ನಾಟಕ ಬರೆದು ಜನಸಾಮಾನ್ಯರಿಂದ ಹಿಡಿದು ಮೈಸೂರು ಮಹಾರಾಜರ ತನಕ ಮೆಚ್ಚುಗೆ ಅಭಿಮಾನಕ್ಕೆ ಪಾತ್ರರಾದವರು. ರೆಡ್ಡಿರವರ ರಾಜವೀರ ಮದಕರಿ ನಾಯಕ ನಾಟಕ ರಾಜ್ಯದಲ್ಲಿಯೇ ಇತಿಹಾಸ ಸೃಷ್ಟಿಸಿತ್ತು.

ನೊಳಂಬಿ ಪಟ್ಟಣ (ನೊಣಬಿ ):

ಗ್ರಾಮದಿಂದ ಈಶಾನ್ಯಕ್ಕೆ ಬಸಪ್ಪನ ಮಾಳಿಗೆಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಗ್ರಾಮದಿಂದ 3 ಕಿ.ಮಿ ದೂರಕ್ಕೆ ಇರುವ ನೊಣಬಿ ಬೇಚಾರಕ್ ಗ್ರಾಮವು 9-11 ನೇ ಶತಮಾನದಲ್ಲಿ ಅಸ್ತಿತ್ವದಲ್ಲಿ ಇದ್ದ ಗ್ರಾಮವಾಗಿದ್ದು ಇಂದು ಬೇಚಾರಕ್ ಪ್ರದೇಶವಾಗಿದೆ. ಈ ಸ್ಥಳದಲ್ಲಿ ಈಗ ಆಂಜನೇಯ ಸ್ವಾಮಿ ದೇವಾಲಯವಿದ್ದು, ಈ ದೇವಾಲಯವು 19 -20 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ಇಲ್ಲಿ ಪ್ರತಿವರ್ಷ ಗ್ರಾಮದ ವಾರ್ಷಿಕ ಪರೇವು ಆಚರಣೆ ನಡೆಸಲಾಗುತ್ತದೆ. ಇದರ ಬಳಿಯಲ್ಲಿ ಭೂತಪ್ಪನ ಗುಡಿ ಹಾಗೂ ನಾಗರ ಶಿಲ್ಪಗಳಿವೆ.

ಪೂರಕ ಮಾಹಿತಿ:
ಚಿತ್ರದುರ್ಗ ಜಿಲ್ಲಾ ದೇವಾಲಯ ಕೋಶ
ಡಾ.ಎಸ್ ವೈ ಸೋಮಶೇಖರ್. ಹಂಪಿ ವಿವಿ.
ಟಿ. ಗಿರಿಜಮ್ಮ ಚಿತ್ರದುರ್ಗ ಜಿಲ್ಲಾ ದರ್ಶನಿ.
ಎಂ.ಜಿ ರಂಗಸ್ವಾಮಿ ಹಿರಿಯೂರು ತಾಲೂಕು ಜಾನಪದ.

Share This Article
Leave a Comment

Leave a Reply

Your email address will not be published. Required fields are marked *