ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದ. ಅದರಲ್ಲೂ ದರ್ಶನ್ ಗೆ ಜಾಮೀನು ನೀಡಿರುವ ಆಧಾರದ ಮೇಲೆಯೇ ನನಗೂ ಜಾಮೀನು ನೀಡಿ ಎಂದು ಕೇಳಿದ್ದ. ಕೋರ್ಟ್ ಇನ್ನೆಲ್ಲಿ ಜಾಮೀನು ಕೊಟ್ಟು ಬಿಡುತ್ತೋ ಎಂಬ ಆತಂಕವೂ ಎಲ್ಲರಲ್ಲೂ ಇತ್ತು. ಆದರೆ ಕೋರ್ಟ್ ಆತನ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಕೋರ್ಟ್ ನ ಈ ಆದೇಶವನ್ನ ನೇಹಾ ಕುಟುಂಬಸ್ಥರು ಸ್ವಾಗತಿಸಿದ್ದಾರೆ.
ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದು, ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಹಂತಕ ಫಯಾಜ್ ನನ್ನು ಆಗಸ್ಟ್ 6 ರಂದು ಖುದ್ದು ಹಾಜರಿಗೆ ಕೋರ್ಟ್ ಸೂಚನೆ ನೀಡಿತ್ತು. ಇಂದು ಕೋರ್ಟ್ ಮುಂದೆ ಹಾಜರಾಗಿದ್ದ ಫಯಾಜ್ ಗೆ ನ್ಯಾಯಾಲದಿಂದ ಜಾಮೀನು ಅರ್ಜಿ ವಜಾಗೊಂಡಿದ್ದು ಶಾಕ್ ಆಗಿದೆ. ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾತನಿಗೆ ನಿರಾಸೆಯಾಗಿದೆ.
ಇನ್ನು ಜಾಮೀನು ಅರ್ಜಿ ವಜಾಗೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನೇಹಾ ತಂದೆ ನಿರಂಜನಯ್ಯ ಹಿರೇಮಠ ಅವರು, ನಮಗೆ ಮೊದಲ ಜಯ ಸಿಕ್ಕಿದೆ. ಇದರಿಂದ ನೇಹಾ ಆತ್ಮಕ್ಕೆ ಶಾಂತಿ ಸಿಕ್ಕಂತೆ ಆಗಿದೆ. ಅವರುಗಳು ವಾಮ ಮಾರ್ಗ ಅನುಸರಿಸಿ ಜಾಮೀನು ಪಡೆಯುವ ಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಎಲ್ಲರ ಹೊಇರಾಡಕ್ಕೆ ಮೊದಲ ಹಂತದಲ್ಲಿಯೇ ನ್ಯಾಯ ಸಿಕ್ಕಿದೆ. ನಮಗೆ ನ್ಯಾಯ ಸಿಗುತ್ತದೆ ಅನ್ನೋ ಭರವಸೆ ಮೂಡಿದೆ. ಆರೋಪಿ ಫಯಾಗೆ ಆದಷ್ಟು ಬೇಗ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.


