ನಮ್ಮೂರ ದೇಗುಲ : ಚಿತ್ರದುರ್ಗ : ಶ್ರೀ ಸಂಪಿಗೆ ಸಿದ್ದೇಶ್ವರ ದೇವಾಲಯದ ಪರಿಚಯ

4 Min Read

ವಿಶೇಷ ಲೇಖನ
ಡಾ ಕೆ ವಿ ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ
ನೊ : 9342466936

 

ಚಿತ್ರದುರ್ಗ ಕೋಟೆಯಲ್ಲಿನ ಮೇಲುದುರ್ಗದಲ್ಲಿರುವ ಗುಹಾಂತರ ದೇವಾಲಯಗಳಲ್ಲಿ ಪ್ರಮುಖವಾದ ಶ್ರೀ ಸಂಪಿಗೆ ಸಿದ್ದೇಶ್ವರ ದೇವಾಲಯವು ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧಿ ಪಡೆದ ದೇವಾಲಯವಾಗಿದೆ. ಇದನ್ನು ಕ್ರಿಸ್ತಶಕ 1328 ರಲ್ಲಿ ನಿರ್ಮಿಸಲಾಗಿದ್ದು, ಹೊಯ್ಸಳರ ಶೈಲಿ ಹೊಂದಿದೆ.
ದೇವಾಲಯದ ಹಿಂಭಾಗ ಹಾಗೂ ಸುತ್ತಲೂ ಸಂಪಿಗೆ ಹೂವಿನ ಮರಗಳು ಇರುವ ಕಾರಣಕ್ಕೆ ಈ ಸಿದ್ದೇಶ್ವರನಿಗೆ ಸಂಪಿಗೆ ಸಿದ್ದೇಶ್ವರ ಎಂದು ಹೆಸರು ಬಂದಿದೆ.

ಕೋಟೆಯ ಒಳಗಡೆ ಮೇಲುದುರ್ಗದಲ್ಲಿ ಇರುವ ಮುರುಘಾಮಠದ ಹಿಂಭಾಗದಲ್ಲಿ ಈ ದೇವಾಲಯವಿದೆ. (ತುಪ್ಪದಕೊಳ ತಪ್ಪಲಿನಲ್ಲಿ) ದೇವಾಲಯವು ಬೃಹತ್ ಬಂಡೆಗಲ್ಲಿನ ಕೆಳಭಾಗದ ಗುಹೆಯಲ್ಲಿ ನಿರ್ಮಾಣಗೊಂಡ ಗುಹಾಲಯವಾಗಿದೆ. ಶಾಸನಗಳಲ್ಲಿ ಈ ದೇವರನ್ನು ಸಿದ್ಧನಾಥನೆಂದು ಕರೆಯಲಾಗಿದೆ. ಹಿಂದೆ ಈ ಗುಡಿಯ ಗುಹೆಗಳಲ್ಲಿ ರಸಾಸಿದ್ಧರು ವಾಸಿಸುತ್ತಿದ್ದು, ಈ ಶಿವಲಿಂಗವನ್ನು ಪೂಜಿಸುತ್ತಿದ್ದರಿಂದ ಸಿದ್ಧನಾಥಲಿಂಗ ಸಿದ್ದೇಶ್ವರ ಎಂದು ಹೆಸರಾಗಿದೆ.ಪಂಚಾಚಾರ್ಯ ಗುರುಗಳಾದ ಶ್ರೀ ರೇವಣಸಿದ್ಧರು ಇಲ್ಲಿ ಕೆಲಕಾಲ ನೆಲೆಸಿದ್ದು, ಮರುಳಸಿದ್ದರು ಇಲ್ಲಿಗೆ ಆಗಮಿಸಿ ಅವರ ದರ್ಶನ ಪಡೆದಿದ್ದರೆಂಬ ಪ್ರತೀತಿಯಿದೆ.

ದೇವಾಲಯದ ಪರಿಚಯ :
ಗರ್ಭಗೃಹ,ಅಂತರಾಳ, ನವರಂಗ,ಮುಖಮಂಟಪ, ವಿಶಾಲ ಪ್ರಾಕಾರಗೋಡೆ, ಸಾಲುಮಂಟಪ,ದೀಪಸ್ತಂಭ, ಉಯ್ಯಾಲೆಕಂಬ,ಗೋಪುರ ಹಾಗೂ ಉಪದೇಗುಲಗಳಿಂದ ಈ ದೇವಾಲಯ ಕೂಡಿದೆ. ಸಂಪಿಗೆ ಸಿದ್ದೇಶ್ವರ ದೇಗುಲದ ಒಳಭಾಗದಲ್ಲಿ ವೀರಭದ್ರೇಶ್ವರನಿಗೆ ಇನ್ನೊಂದು ಗರ್ಭಗೃಹವನ್ನು ಪ್ರತ್ಯೇಕವಾಗಿ ಕಲ್ಪಿಸಲಾಗಿದೆ. ಇದು 15 -16ನೇ ಶತಮಾನದ ಗುಡಿಯಾಗಿದೆ. ಮುಖ್ಯ ಗರ್ಭಗೃಹವು ಪಶ್ಚಿಮಾಭಿಮುಖವಾಗಿದ್ದರೆ, ದೇವಾಲಯದ ನವರಂಗ ಹಾಗೂ ಮುಖಮಂಟಪಗಳು ಉತ್ತರಾಭಿಮುಖವಾಗಿದೆ.
ಗರ್ಭಗೃಹದಲ್ಲಿ ಅರ್ಧ ಅಡಿ ಎತ್ತರದ ಪಾನವಟ್ಟದ ಪೀಠದ ಮೇಲೆ ಅರ್ಧಅಡಿಯ ಕಪ್ಪುಶಿಲೆಯಲ್ಲಿ ಕಡೆಯಲಾದ ನಯವಾದ ಶಿವಲಿಂಗವಿದೆ. ಎಡಭಾಗದಲ್ಲಿ ಮುಕ್ಕಾಲು ಅಡಿ ಎತ್ತರದ ಹಾಗೂ ಆರು ಅಡಿ ವ್ಯಾಸವುಳ್ಳ ವಿಶಾಲವಾದ ಪೀಠದಲ್ಲಿ ಪಾದಗಳಿವೆ.

ಈ ಪಾದಗಳಿಗೆ ಕಾಲ ಕಡಗಗಳನ್ನು ಚಿತ್ರಿಸಿರುವುದು ಗಮನಾರ್ಹ.
ಪಾದಗಳ ಮೇಲೆ ಒಂದು ಅಡಿ ಎತ್ತರದ ಶಿಲ್ಪವನ್ನು ಇಡಲಾಗಿದ್ದು,ಇದನ್ನು ಅಲ್ಲಮಪ್ರಭು ಎಂದು ಹೇಳಲಾಗುತ್ತದೆ. ಪ್ರಭಾವಳಿಯ ಹಿನ್ನೆಲೆಯಲ್ಲಿರುವ ಈ ವ್ಯಕ್ತಿ ಶಿಲ್ಪವು ಪದ್ಮಾಸನದಲ್ಲಿ ಕುಳಿತು ಧ್ಯಾನಮುದ್ರೆಯಲ್ಲಿ ಕೈಯಿಟ್ಟುಕೊಂಡು ಧ್ಯಾನದಲ್ಲಿ ನಿರತವಾಗಿರುವಂತಿದೆ.
ಕಿರೀಟಮುಕುಟ, ಹಾರ,ಕಂಠಹಾರ, ಭುಜಕೀರ್ತಿ, ತೋಳುಬಂದಿ, ಕೈ ಮತ್ತು ಕಾಲುಬಳೆಗಳು ಹಾಗೂ ಪಂಚೆಯನ್ನು ಧರಿಸಿರುವನು. ಅಂತರಾಳದಲ್ಲಿ ಶಿವಲಿಂಗಕ್ಕೆ ಎದುರಾಗಿ ನಂದಿ ಇದೆ. ಎರಡೂವರೆ ಅಡಿ ಎತ್ತರ ಹಾಗೂ ಮೂರು ಅಡಿ ಉದ್ದವಿರುವ ಕಪ್ಪುಶಿಲೆಯಲ್ಲಿ ಕಡೆಯಲಾದ ಸುಂದರ ಶಿಲ್ಪ ಇದಾಗಿದೆ. ಇದಕ್ಕೆ ಹಣೆಪಟ್ಟಿ, ದಂಡೆ, ಸರಪಳಿಗಳಿವೆ. ಅಂತರಾಳದ ಎಡಬದಿಯಲ್ಲಿ ಪಾರ್ವತಿಯ ಶಿಲ್ಪವಿದೆ. ಶಿಲ್ಪವು ಅರ್ಧ ಅಡಿ ಎತ್ತರದ ಪೀಠದ ಮೇಲೆ ಸುಮಾರು ನಾಲ್ಕು ಅಡಿಗಳಷ್ಟು ಎತ್ತರವಾಗಿದೆ. ಕೀರ್ತಿಮುಖದ ಪ್ರಭಾವಳಿಯಲ್ಲಿ ತ್ರಿಭಂಗಿಯಲ್ಲಿ ನಿಂತಿರುವ ಪಾರ್ವತಿಯು ತನ್ನ ನಾಲ್ಕು ಕೈಗಳಲ್ಲಿ ತ್ರಿಶೂಲ, ರುದ್ರಾಕ್ಷಿಮಾಲೆ,ಎಡಗೈಯಲ್ಲಿ ಡಮರುಗ ಹಾಗೂ ಫಲಗಳನ್ನು ಹಿಡಿದಿರುವಳು.ಪಾರ್ವತಿಯು ವಿವಿಧ ಆಭರಣಗಳನ್ನು ಧರಿಸಿದ್ದು ಅವುಗಳಲ್ಲಿ ಪದ್ಮಕುಂಡಲಹಾರ,
ಭುಜಕೀರ್ತಿ, ಹಾರ,ಕಂಠಹಾರ ಉಪವೀತ,ಕೈ ಮತ್ತು ಕಾಲು ಬಳೆಗಳು, ಕಾಲುಂಗುರಗಳನ್ನು ಧರಿಸಿರುವಳು.

 

ನವರಂಗದಲ್ಲಿ ನಾಲ್ಕು ಕಂಬಗಳಿವೆ.
ಇವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿವೆ.ಚಚ್ಚೌಕ ಪೀಠದ ಮೇಲೆ ಬಹುಮುಖಗಳಲ್ಲಿ ಕಡೆಯಲಾದ ದಿಂಡು,ಡಿಂಡಿನ ಮೇಲೆ ಅಬಾಕಸ್ ಫಲಕ ಹಾಗೂ ಬೋದಿಗೆಗಳಿವೆ.
ಗರ್ಭಗೃಹ,ಅಂತರಾಳ ಮತ್ತು ನವರಂಗದ ಬಾಗಿಲುವಾಡ ಗಳು ಸರಳವಾಗಿದ್ದು ಇಕ್ಕೆಲಗಳನ್ನು ಅರೆಕಂಬಗಳಿಂದ ಅಲಂಕರಿಸಲಾಗಿದೆ. ಲಲಾಟ ಭಾಗವು ಮುಂಚಾಚಿರುವುದನ್ನು ಕಾಣಬಹುದು.

ನವರಂಗದ ಎಡಬದಿಯ ಚಿಕ್ಕ ಕೂಡುವಿನಲ್ಲಿ ಗುಂಡಯ್ಯ- ಬ್ರಹ್ಮಯ್ಯ ಶೂಲಬ್ರಹ್ಮ ಶಿಲ್ಪಗಳಿವೆ. ಕಪ್ಪುಶಿಲೆಯಲ್ಲಿ ಕಡೆದ ಈ ಶಿಲ್ಪಗಳು 3 ಅಡಿ ಎತ್ತರವಾಗಿವೆ.
ಕೈಗಳಲ್ಲಿ ಶೂಲ ಮತ್ತು ಲಿಂಗಗಳನ್ನು ಹಿಡಿದಿದ್ದಾರೆ. ಗುಂಡಯ್ಯ ಬಲಗೈಯಲ್ಲಿ ಲಿಂಗವನ್ನು ಹಿಡಿದಿದ್ದರೆ, ಬ್ರಹ್ಮಯ್ಯನು ಎಡಗೈಯಲ್ಲಿ ಲಿಂಗವನ್ನು ಹಿಡಿದಿದ್ದಾನೆ.
ಹಾಗೆಯೇ ಶೂಲಗಳನ್ನು ಗುಂಡಯ್ಯ ಎಡಗೈಯಲ್ಲಿ, ಬ್ರಹ್ಮಯ್ಯ ಬಲಗೈಯಲ್ಲಿ ಹಿಡಿದಿದ್ದಾರೆ.

ನವರಂಗದ ನೈರುತ್ಯಕ್ಕೆ ಒಂದು ಗರ್ಭಗೃಹವಿದ್ದು,
ಇದರಲ್ಲಿ ವೀರಭದ್ರನನ್ನು ಪ್ರತಿಷ್ಠಾಪಿಸಿರುವರು.
ಕಪ್ಪು ಶಿಲ್ಪದಲ್ಲಿ ಕಡೆಯಲಾದ ಸುಂದರವಾದ ಶಿಲ್ಪವಿದು.
ಎರಡು ಅಡಿ ಎತ್ತರದ ಪೀಠದ ಮೇಲೆ ಐದು ಅಡಿ ಎತ್ತರದ ವೀರಭದ್ರನನ್ನು ಕಡೆಯಲಾಗಿದೆ.ವೀರಭದ್ರನು ತನ್ನ ನಾಲ್ಕು ಕೈಗಳಲ್ಲಿ ಕತ್ತಿ- ಗುರಾಣಿ, ಬಿಲ್ಲುಬಾಣಗಳನ್ನು ಹಿಡಿದಿದ್ದಾನೆ.
ಕೆಳಗೆ ನಂದಿ ಹಾಗೂ ದಕ್ಷಬ್ರಹ್ಮನ ಉಬ್ಬು ರಚನೆಗಳಿವೆ.
ವಿವಿಧ ಆಭರಣಗಳಿಂದ ಅಲಂಕೃತನಾದ ವೀರಭದ್ರನು ಕಿರೀಟದಲ್ಲಿ ಶಿವಲಿಂಗವನ್ನು, ಮುಖದಲ್ಲಿ ಕೋರೆಮೀಸೆಗಳು, ಕೊರಳಿನಲ್ಲಿ ಹಾರ, ಕಂಠಹಾರ,ರುಂಡಮಾಲೆಗಳು, ಸೊಂಟದಲ್ಲಿ ನೆರಿಗೆಯುಳ್ಳ ಪಂಚೆ ಧರಿಸಿದ್ದಾನೆ. ಕಿವಿಯಲ್ಲಿ ಸರ್ಪಕುಂಡಲ, ಕೈಕಡಗ, ಕಾಲ್ಕಡಗ,ತೋಳುಬಂದಿ, ಉಂಗುರ ಮೊದಲಾದ ಆಭರಣಗಳಿವೆ.

ನವರಂಗದ ಪಶ್ಚಿಮ ಗೋಡೆಯಲ್ಲಿ ವ್ಯಕ್ತಿಯೊಬ್ಬನ ಶಿಲ್ಪವಿದೆ.ಇವನು ಸೋಮಣ್ಣ ಎಂದು ಪಕ್ಕದ ಶಾಸನದಲ್ಲಿ ಹೇಳಿದೆ. ಪದ್ಮಾಸನದಲ್ಲಿ ಕುಳಿತು ಕೈಮುಗಿದು ಧ್ಯಾನಿಸುತ್ತಿರುವ ಶಿಲ್ಪವಿದು. ನವರಂಗದ ದ್ವಾರಬಾಗಿಲು ಒಳಭಾಗದಲ್ಲಿ ನಂದಿ,ಲಿಂಗ ನಾಗಶಿಲ್ಪಗಳಿವೆ.
ಇವುಗಳ ಬಳಿಯಲ್ಲಿ ಭೈರವನ ಶಿಲ್ಪವನ್ನು ಕಾಣಬಹುದು.
ಭೈರವನ ಶಿಲ್ಪವು 2 ಅಡಿ ಎತ್ತರವಿದೆ.
ತನ್ನ ನಾಲ್ಕು ಕೈಗಳಲ್ಲಿ ತ್ರಿಶೂಲ,ಡಮರುಗ,ಖಡ್ಗ, ಪಾನಬಟ್ಟಲು ಹಾಗೂ ಶಿರಗಳನ್ನು ಹಿಡಿದಿರುವನು. ಕೆಳಗೆ ವಾಹನವಾದ ನಾಯಿ ಇದೆ.

ದೇವಾಲಯದ ಮುಖಮಂಟಪದಲ್ಲಿ ಕಕ್ಕಾಸನವಿದೆ.
ಈ ಕಕ್ಷಾಸನದ ಮೇಲೆ ಎರಡು ಶಿಲಾಶಾಸನಗಳನ್ನು ಇಡಲಾಗಿದೆ. ಅತ್ಯಂತ ಸುಂದರವಾಗಿ ಗುಂಡಾದ ಅಕ್ಷರಗಳಲ್ಲಿ ಕಡೆಯಲಾದ ಈ ಶಾಸನಗಳು ವಿಜಯನಗರದ ಕಾಲದ್ದಾಗಿವೆ.
ದೇವಾಲಯದ ಹೊರಭಾಗದಲ್ಲಿ ವಿಶಾಲವಾದ ವೇದಿಕೆ, ಪ್ರಾಕಾರ ಗೋಡೆ , ಗರ್ಭಗೃಹಗಳಿವೆ. ಈ ವೇದಿಕೆಯನ್ನು ಪಾಳೆಗಾರರ ಕಾಲದಲ್ಲಿ ಪಟ್ಟಾಭಿಷೇಕ ನಡೆಯುತ್ತಿದ್ದ ಸ್ಥಳವೆಂದು ಹೇಳಲಾಗುತ್ತದೆ. ಗೋಡೆಗೆ ಹೊಂದಿಕೊಂಡಂತೆ ಉತ್ತರಾಭಿಮುಖವಾಗಿ ಮಹಾದ್ವಾರವಿದೆ.
ಈ ಮಹಾದ್ವಾರದ ಮೇಲೆ ದ್ರಾವಿಡ ಮಾದರಿಯಲ್ಲಿ ಗೋಪುರವನ್ನು ನಿರ್ಮಿಸಿದ್ದಾರೆ.ಇದರಲ್ಲಿ ಗಾರೆಗಚ್ಚಿನ ಮೂರ್ತಿಗಳನ್ನು ನಿರ್ಮಿಸಿದ್ದು ಭಗ್ನಗೊಂಡಿವೆ.

ದೇವಾಲಯದ ಒಳಗಡೆ ಇರುವ ಕ್ರಿಸ್ತಶಕ 1328ರ ಶಾಸನದಲ್ಲಿ ಹೊಯ್ಸಳರ ಅಧಿಕಾರಿ ಬೇಬದಣ್ಣಾಯಕನ ಮಕ್ಕಳಾದ ಸಿಂಗೆಯನಾಯಕ ಮತ್ತು ಬಲ್ಲಪ್ಪದಣ್ಣಾಯಕರು ನಮ್ಮ ತಂದೆ ಬೇಬದಣ್ಣಾಯಕನ ಹೆಸರಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ,ದೇವರ ಅಮೃತಪಡಿಗೆ ಭೂಮಿ ಮತ್ತಿತರ ದಾನದತ್ತಿಗಳನ್ನು ನೀಡಿದರೆಂದು ಹೇಳಿದೆ. ಶಾಸನದಲ್ಲಿ ಸಿದ್ದೇಶ್ವರ ದೇವರನ್ನು ಬೇಬನಾಥನೆಂದೇ ಕರೆಯಲಾಗಿದೆ. ಈ ಶಿಲಾಶಾಸನವನ್ನು ಮಾಡಿದವನು ಆಚಾರಿ ಬಬೋಜನ ಮಗ ಸೋಮೋಜ ಎಂಬುದು ತಿಳಿಯುತ್ತದೆ.
ಕ್ರಿಸ್ತಶಕ 1355-56 ರಲ್ಲಿ ಹಾಕಿಸಲಾದ ಎರಡು ಶಾಸನಗಳಲ್ಲಿ ವಿಜಯನಗರ ಅರಸ ಒಂದನೇ ಬುಕ್ಕರಾಯನ ಅಧಿಕಾರಿಯಾದ ಮಲ್ಲಿನಾಥ ಒಡೆಯನು ಈ ದೇವರಿಗೆ ಕಲ್ಲಿನಉಪ್ಪರಿಗೆ, ಶಿಖರ ಪ್ರತಿಷ್ಠಾಪನೆ ಹಾಗೂ ಕಲ್ಲಿನ ಉಯ್ಯಾಲೆ ಕಂಬಗಳನ್ನು ಹಾಕಿಸಿದನೆಂದು ಇಲ್ಲಿನ ಶಾಸನದಿಂದ ತಿಳಿದುಬರುತ್ತದೆ. ಈ ದೇವರ ಅಂಗರಂಗಭೋಗದೀಪ್ತಿ, ಅಮೃತಪಡಿಗೆಗೆ ಎಂದು ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಹಾಗೂ ಮುಸುವಡಿಪುರ (ಮುಸಂಡಿಹಾಳ್ ) ಗ್ರಾಮಗಳನ್ನು ದತ್ತಿ ಬಿಟ್ಟ ಬಗ್ಗೆ ತಿಳಿಸಿದೆ.ಈ  ಎರಡು ಶಾಸನಗಳನ್ನು ಕಡೆದವನು ಹಾಗೂ ಕಲ್ಲಿನ ಉಪ್ಪರಿಗೆ, ಶಿಖರ ಹಾಗೂ ಕಲ್ಲಿನ ಕಂಬಗಳನ್ನು ಮಾಡಿದವನು ಕಲ್ಲುಕುಟಿಕ ರಾಮೋಜನೆಂದು ತಿಳಿದುಬರುತ್ತದೆ.ಈ ಶಾಸನಗಳ ಬರಹವನ್ನು ಸಿದ್ದಪಡಿಸಿದವರು ಕರಣೀಕರಾದ ದೇವಣ್ಣ, ರೇವಪ್ಪ, ಸೋವರಸರ ವೀರಪ್ಪ ಎಂಬುದು ಗಮನಾರ್ಹ.

ಮಾಹಿತಿ :ಎಸ್ ವೈ ಸೋಮಶೇಖರ್ ಹಂಪಿ ವಿವಿ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks