Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದುರ್ಗದ ರಸ್ತೆಗಳ ರಾಜ, ಅಭಿವೃದ್ದಿಯ ಹರಿಕಾರ ಯಾರು ಗೊತ್ತಾ ?

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 27 : ಜಿಲ್ಲೆಯಲ್ಲಿ ಬಹುತೇಕ ಹಳ್ಳಿಗಳ ರಸ್ತೆಗಳು ಹೆದ್ದಾರಿ ನೆನಪಿಸುತ್ತವೆ, ಇನ್ನೂ ಹಲವು ಕಡೆ ಬೃಹತ್ ಚೆಕ್‍ಡ್ಯಾಮ್‍ಗಳು ಜಲಾಶಯವನ್ನು ನೆನಪು ಮಾಡುತ್ತವೆ.

ಜಿಲ್ಲೆಯ ಅನೇಕ ಗ್ರಾಮೀಣ ಮಾರ್ಗದ ರಸ್ತೆಗಳು ವಿಸ್ತರಣೆ ಜೊತೆಗೆ ಅಭಿವೃದ್ಧಿಯ ಸ್ಪರ್ಶ ಕಂಡಿವೆ. ಈ ಕೊಡುಗೆ ಸ್ಥಳೀಯ ಜನಪ್ರತಿನಿಧಿಗಳದ್ದೇ ಎಂಬ ನಂಬಿಕೆ ಬಹಳಷ್ಟು ಮಂದಿಯ ಮನಸ್ಸಿನಲ್ಲಿ ನೆಲೆಯೂರಿದೆ. ಆದರೆ, ಇಂತಹ ಅಭಿವೃದ್ಧಿಯ ಹಿಂದೆ ಅಧಿಕಾರಿಯೊಬ್ಬರ ಬದ್ಧತೆ ಕಾರಣವೆಂಬುದು ಜಿಲ್ಲೆಯ ಜನರಮಟ್ಟಿಗೆ ಅಪರಿಚಿತ ವಿಷಯ.

ಚಿತ್ರದುರ್ಗದಿಂದ-ನಾಯಕನಹಟ್ಟಿ, ಬೆಳಗಟ್ಟದಿಂದ-ಕಾಸವರಹಟ್ಟಿ, ಹಾಯ್ಕಲ್‍ನಿಂದ-ತುರುವನೂರು, ಕೋಟೆಹಳ್ಳಿ, ರಾಮಜೋಗಿಹಳ್ಳಿ, ನನ್ನಿವಾಳ, ಕಾತ್ರಾಳ್‍ನಿಂದ ಜಗಳೂರು, ಬಂಜಗೆರೆ ಮಾರ್ಗ, ಯಳಗೋಡು ಗ್ರಾಮದಿಂದ ತುರುವನೂರು ಹೀಗೆ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ವಿಶಾಲ ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಿವೆ.

ಜೊತೆಗೆ ಹೊಸದುರ್ಗದ ಕೆಲ್ಲೋಡು ಬಹೃತ್ ಸೇತುವೆ, ಸೊಂಡೆಕೊಳ, ಮಹದೇವನಕಟ್ಟೆ, ಮಲ್ಲಾಡಿಹಳ್ಳಿ, ಇಸಾಮುದ್ರ, ಕೋಗುಂಡೆ ಸೇರಿ ವಿವಿಧೆಡೆ ಬ್ರಿಡ್ಜ್‌ ಗಳು. ಹೀಗೆ ಅನೇಕ ಅಭಿವೃದ್ಧಿ ಆಗಿದ್ದು, ಈ ಎಲ್ಲ ಕಾರ್ಯಗಳ ಹಿಂದೆ ಸರ್ಕಾರದ (ಪಿಡಬ್ಲ್ಯುಡಿ) ಕಾರ್ಯದರ್ಶಿ ಆಗಿದ್ದ ಚಿತ್ರದುರ್ಗ ತಾಲ್ಲೂಕಿನ (ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ) ಹಾಯ್ಕಲ್ ಗ್ರಾಮದ ಕೃಷ್ಣಾರೆಡ್ಡಿ ಅವರ ಬದ್ಧತೆ, ಹುಟ್ಟೂರಿನ ಸೇವೆ ಮಾಡಬೇಕೆಂಬ ಮನದಾಸೆ ಕೆಲಸ ಮಾಡಿದೆ. ಆದರೆ, ಈ ವಿಷಯ ಗುಟ್ಟಾಗಿಯೇ ಉಳಿದಿದೆ.

2018ರಿಂದ 2023ರ ವರೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಯಮಿತ ಎಂಡಿ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಅವಧಿ ಜಿಲ್ಲೆಯ ರಸ್ತೆ, ಸೇತುವೆ ಅಭಿವೃದ್ಧಿಗಾಗಿ ಬರೋಬ್ಬರಿ 500 ಕೋಟಿ ರೂ. ಅನುದಾನ ಬಜೆಟ್‍ನಲ್ಲಿ ಸೇರ್ಪಡೆ ಮಾಡಿ ಒದಗಿಸಿದ್ದಾರೆ.

ಈ ಹಣ ಶಾಸಕರು, ಎಂಎಲ್ಸಿಗಳ ಅನುದಾನ ಹೊರತುಪಡಿಸಿ ನೇರವಾಗಿ ಇಲಾಖೆಯಿಂದಲೇ ಮಂಜೂರು ಮಾಡಿಸಿ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಯಾಗಿ ಬಹುದೊಡ್ಡ ಕೊಡುಗೆ ನೀಡಿರುವುದು ವಿಶೇಷ.

ನಾಯಕನಹಟ್ಟಿ ಮಾರ್ಗದ ರಸ್ತೆ, ಗುರುತಿಪ್ಪೇರುದ್ರಸ್ವಾಮಿ ಸನ್ನಿಧಾನದ ಅಕ್ಕಪಕ್ಕ ಮಳಿಗೆಗಳ ನಿರ್ಮಾಣ, ದೇಗುಲದ ಎದುರು ದ್ವಿಪಥ ರಸ್ತೆ, ಝಗಮಗಿಸುವ ವಿದ್ಯುತ್ ದ್ವೀಪಗಳು ಅನೇಕ ಕಾರ್ಯಗಳಿಗೆ ಇಲಾಖೆಯಿಂದಲೇ ನೇರ ಅನುದಾನ ಒದಗಿಸಿ ಅಭಿವೃದ್ಧಿ ಕಾರ್ಯ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕೋಟ್ಯಂತರ ಅನುದಾನವನ್ನು ಜಿಲ್ಲೆಯೊಂದಕ್ಕೆ ನೇರ ಬಿಡುಗಡೆ ಮಾಡುವಲ್ಲಿ ಎದುರಾದ ಅಡ್ಡಿ ಆತಂಕಗಳನ್ನು ಮೆಟ್ಟಿ, ನನ್ನ ಹುಟ್ಟೂರು ಅಭಿವೃದ್ಧಿ ನನ್ನ ಹೊಣೆ. ಸಾವಿರಾರು ಕೋಟಿ ರೂ. ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ನನಗೂ ಆಸೆಗಳಿವೆ…! ನನ್ನ ಸ್ವಂತ ಜಿಲ್ಲೆ ಹಿಂದುಳಿದ್ದು, ಅದು ಅಭಿವೃದ್ಧಿ ಕಾಣಬೇಕು. ಅದಕ್ಕೆ ಅನುದಾನ ಬಿಡುಗಡೆ ಮಾಡಲು ಪ್ರೊ.ಡಿ.ಎಂ.ನಂಜುಂಡಪ್ಪ ವರದಿಯೇ ಹೇಳುತ್ತದೆ. ಆ ಕೆಲಸ ಮಾಡುತ್ತಿದ್ದೇನೆ ಎಂದು ವಾದ ಮಂಡಿಸಿ ಅನುದಾನದ ಹೊಳೆ ಹರಿಸಿದ್ದಾರೆ.

ಇಷ್ಟೇಲ್ಲ ಅನುದಾನ ನೀಡಿದರೂ ಎಲ್ಲಿಯೂ ಈ ಕುರಿತು ಪ್ರಚಾರ ಪಡೆದಿಲ್ಲ. ಕಾಮಗಾರಿಗೆ ಚಾಲನೆ, ಉದ್ಘಾಟನೆ ಎಲ್ಲವೂ ಜನಪ್ರತಿನಿಧಿಗಳೇ ಮಾಡಬೇಕು. ಅಧಿಕಾರಿಯಾಗಿ ನನ್ನ ಕೆಲಸ ನಾನು ಮಾಡಿದ್ದೇನೆ ಎನ್ನುವುದು ಹುದ್ದೆಯಿಂದ ನಿವೃತ್ತಗೊಂಡಿರುವ ಕೃಷ್ಣಾರೆಡ್ಡಿ ಅವರ ಮಾತು.


ನನ್ನೂರಿಗೆ ನನ್ನ ಸಣ್ಣ ಸೇವೆ : ಚಿತ್ರದುರ್ಗ ಜಿಲ್ಲೆ ಅತ್ಯಂತ ಹಿಂದುಳಿದಿದ್ದು, ಇದನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳು-ಅಧಿಕಾರಿಗಳ ಹೊಣೆಗಾರಿಕೆ. ನನಗೆ ದೊರೆತ ಉನ್ನತ ಅಧಿಕಾರವನ್ನು ನನ್ನ ಸ್ವಂತ ಜಿಲ್ಲೆ ಪ್ರಗತಿಗೆ ಬಳಸಿದ್ದೇನೆ. ಇದು ನನ್ನ ಕರ್ತವ್ಯ, ಇದರಲ್ಲಿ ವಿಶೇಷತೆ ಇಲ್ಲ. ನನ್ನೂರಿಗೆ ನನ್ನ ಸಣ್ಣ ಸೇವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕೃಷ್ಣಾರೆಡ್ಡಿ.

ಬದ್ಧತೆ ಅಗತ್ಯ : ಒಬ್ಬ ಅಧಿಕಾರಿ ಬದ್ಧತೆ ಪ್ರದರ್ಶಿಸಿದರೆ ಜನಪ್ರತಿನಿಧಿಗಿಂತಲೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದೆಂಬುದನ್ನು ಅನೇಕ ಅಧಿಕಾರಿಗಳು, ಇಂಜಿನಿಯರ್‌ಗಳ ಕಾರ್ಯ ಕಣ್ಮುಂದೆ ಇದೆ. ಅದೇ ಹಾದಿಯಲ್ಲಿ ಕೃಷ್ಣಾರೆಡ್ಡಿಯವರು, ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರತಿಯೊಬ್ಬ ಅಧಿಕಾರಿ ಈ ರೀತಿ ಇಚ್ಛಾಶಕ್ತಿ ಪ್ರದರ್ಶಿಸಿದರೆ ನಾಡು ಸಮಗ್ರವಾಗಿ ಅಭಿವೃದ್ಧಿ ಕಾಣಲಿದೆ ಎಂಬುದು ಹನುಮಂತಪ್ಪ, ಲೋಕೇಶ್ವರಪ್ಪ, ಕೃಷ್ಣಮೂರ್ತಿ, ನಾಗರಾಜಪ್ಪ, ತಿಪ್ಪೇಸ್ವಾಮಿ ಸೇರಿ ಅನೇಕರ ಅಭಿಪ್ರಾಯ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...