ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ಸಾಮೂಹಿಕ ಅತ್ಯಾಚಾರಕ್ಕೊಳಗಾದ ಪೂಲನ್‍ದೇವಿ ಡಕಾಯಿತರ ರಾಣಿಯಾಗಬೇಕೆಂದು ನಿರ್ಧಾರ ತೆಗೆದುಕೊಂಡಿದ್ದರಲ್ಲಿ ಯಾವ ತಪ್ಪು ಇಲ್ಲ ಎಂದು ಲೇಖಕ ಹೆಚ್.ಆನಂದ್‍ಕುಮಾರ್ ತಿಳಿಸಿದರು.
ಸಮಾಜವಾದಿ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಮಾಜಿ ಸಂಸದೆ ಪೂಲನ್‍ದೇವಿರವರ ಹುತಾತ್ಮ ದಿನ ಒಂದು ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
1963 ರಲ್ಲಿ ಉತ್ತರ ಪ್ರದೇಶದ ಕುಗ್ರಾಮದಲ್ಲಿ ಜನಿಸಿದ ಪೂಲನ್‍ದೇವಿಗೆ ಪೋಷಕರು 11 ನೇ ವರ್ಷಕ್ಕೆ ವಿವಾಹ ಮಾಡುತ್ತಾರೆ. ಅಪಾರ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಈಕೆ ಚಂಬಲ್ ಕಣಿವೆಯಲ್ಲಿ ಡಕಾಯಿತಿ ಮೂಲಕ ದೋಚುತ್ತಿದ್ದ ಎಲ್ಲವನ್ನು ಬಡವರಿಗೆ ಹಂಚುತ್ತಿದ್ದಳು. ಸಮಾಜವಾದಿ ಎನ್ನುವುದು ಎಲ್ಲರನ್ನು ಅಪ್ಪಿಕೊಳ್ಳುವ ಪಾರ್ಟಿ. ಹಾಗಾಗಿ ಪೂಲನ್‍ದೇವಿಗೆ ಸಂಸದೆಯಾಗಲು ಅವಕಾಶ ಒದಗಿಸುತ್ತದೆ. ಹೆಣ್ಣನ್ನು ಶೋಷಣೆ ಮಾಡುವ ಹಕ್ಕು ಯಾರಿಗೂ ಇಲ್ಲ. ಎಲ್ಲರ ಭಾವನೆಗಳನ್ನು ಗೌರವಿಸಬೇಕು. ಪೂಲನ್‍ದೇವಿ ಇತಿಹಾಸದ ಪುಟಗಳಲ್ಲಿ ದೀರೋದಾತ್ತೆಯಾಗಿ ಮೆರೆದಿದ್ದಾಳೆಂದು ಸ್ಮರಿಸಿದರು.
ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪೂಲನ್‍ದೇವಿಯನ್ನು ಸ್ಮರಣೆ ಮಾಡಿಕೊಳ್ಳುವುದು ಸಮಾಜವಾದಿ ಪಾರ್ಟಿಯ ಜವಾಬ್ದಾರಿ. ಇತಿಹಾಸವನ್ನು ಮರೆಯಬಾರದು. ಪೂಲನ್‍ದೇವಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಹೆಣ್ಣಿಗೆ ಅನ್ಯಾಯವಾದಾಗ ಪ್ರಶ್ನಿಸುವ ಗಟ್ಟಿತನ ಎಲ್ಲರಲ್ಲಿಯೂ ಬೆಳೆಯಬೇಕೆಂದರು.
ಸಮಾಜವಾದಿ ಪಾರ್ಟಿಯಿಂದ ಲೋಸಕಭೆಗೆ ಸ್ಪರ್ಧಿಸಿದ್ದ ಪೂಲನ್‍ದೇವಿ ಮೂರು ಲಕ್ಷ ಮತಗಳನ್ನು ಪಡೆದು 37 ಸಾವಿರ ಮತಗಳ ಅಂತರದಿಂದ ಜಯಶಾಲಿಯಾಗಿ ಪಾರ್ಲಿಮೆಂಟ್ ಪ್ರವೇಶಿಸಿದ್ದು, ನಿಜಕ್ಕೂ ಆಕೆಯ ದಿಟ್ಟತನಕ್ಕೆ ದೊರೆತ ಫಲ. ನ್ಯಾಯಕ್ಕಾಗಿ ಹೋರಾಡದಿದ್ದರೆ ಸಾಮಾಜಿಕ ನ್ಯಾಯ ಯಾರಿಗೂ ಸಿಗುವುದಿಲ್ಲ. ಪೂಲನ್‍ದೇವಿಯ ಮೇಲಾದಂತ ಸಾಮೂಹಿಕ ಅತ್ಯಾಚಾರ ಯಾವ ಮಹಿಳೆಯ ಮೇಲೂ ಆಗಬಾರದೆಂದರು.
ಕರ್ನಾಟಕ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಗಿರೀಶ್‍ನಾಯ್ಕ ಆರ್. ಮಾತನಾಡಿ ಹಿಂಸೆ ಅವಮಾನವನ್ನು ಸಹಿಸಿಕೊಂಡ ಪೂಲನ್‍ದೇವಿಯ ಜೀವನ ಚರಿತ್ರೆಯನ್ನು ಕೇಳಿದಾಗ ಮೈ ರೋಮಾಂಚನವಾಗುತ್ತದೆ. ಕೊನೆಗೆ ಆಕೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಅನುಯಾಯಿಯಾಗಿ ಕೆಟ್ಟ ವ್ಯವಸ್ಥೆ ವಿರುದ್ದ ಹೋರಾಡುತ್ತಾಳೆಂದು ನೆನಪಿಸಿಕೊಂಡರು.
ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡುತ್ತ ಚಂಬಲ್ ಕಣಿವೆಯ ರಾಣಿ ಎಂದೆ ಹೆಸರುವಾಸಿಯಾಗಿದ್ದ ಪೂಲನ್‍ದೇವಿಯ ಜೀವನವೇ ಒಂದು ಹೋರಾಟ ಎಂದು ಗುಣಗಾನ ಮಾಡಿದರು.
ಸಮಾಜವಾದಿ ಪಾರ್ಟಿ ಎಸ್.ಟಿ. ಘಟಕದ ಅಧ್ಯಕ್ಷ ಡಾ.ಟಿ.ಶಿವಣ್ಣ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೆಹಬೂಬ್‍ಬಾಷಾ ಎಸ್. ನ್ಯಾಯವಾದಿ ಗುರುಮೂರ್ತಿ
ಮಹಲಿಂಗಪ್ಪ ಇವರುಗಳು ಮಾತನಾಡಿದರು.


















