ವಿಶೇಷ ಲೇಖನ :
ಡಾ.ಕೆ.ವಿ.ಸಂತೋಷ್
ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ, ಮೊ : 9342466936
ಸುದ್ದಿಒನ್
ಚಿತ್ರದುರ್ಗದ ಪಾಳೆಗಾರರ ಅಧಿದೇವತೆ ಈ ಉಚ್ಚಂಗಿ ಯಲ್ಲಮ್ಮ. ಉಚ್ಚಂಗಿ ಯಲ್ಲಮ್ಮ ದೇವಿಯನ್ನು ರಾಜಉತ್ಸವಾಂಬ /ಉಚ್ಚಿಂಗಮ್ಮ ಎಂದೂ ಕರೆಯುತ್ತಾರೆ. ಚಿತ್ರದುರ್ಗ ನಗರದ ಪ್ರಮುಖ ದೇವಾಲಯವಾದ ಉತ್ಸವಾಂಬ ದೇವಿಯ ಮಂದಿರವು ಕೋಟೆ ರಸ್ತೆಯ ಬಲಭಾಗದಲ್ಲಿ ದೊಡ್ಡಪೇಟೆ-ಚಿಕ್ಕಪೇಟೆ ಕೂಡುವ ರಸ್ತೆಯಲ್ಲಿದೆ.ಪೂರ್ವಾಭಿಮುಖವಾಗಿದ್ದು,17-18 ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಈ ದೇವತೆಯನ್ನು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗದಿಂದ ಕ್ರಿಸ್ತಶಕ 1666 ರಲ್ಲಿ ಪೂಜಾರಿ ಕೆಂಚಯ್ಯ ಮತ್ತು ಚೌಡಿಕೆ ಸಿದ್ದಯ್ಯ ಎಂಬುವವರು ತಂದು ಇಲ್ಲಿ ಪ್ರತಿಷ್ಠಾಪಿಸಿದರೆಂದೂ, ನಂತರ ಚಿತ್ರದುರ್ಗದ ನಾಯಕರು ದೇವಾಲಯವನ್ನು ಕಟ್ಟಿಸಿದರೆಂದೂ ಎಂದು ಹೇಳಲಾಗುತ್ತದೆ .ಬಿಚ್ಚುಗತ್ತಿ ಭರಮಣ್ಣನಾಯಕನ ಕಾಲದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಿ ಈ ದೇವಿಗೆ ಭರಮಸಾಗರ ಹೋಬಳಿಯ ಬ್ಯಾಲಾಳು ಗ್ರಾಮವನ್ನು ದತ್ತಿ ಬಿಡಲಾಗಿತ್ತು.
ಪಾಳೆಯಗಾರರ ಕಾಲದ ಈ ದೇವಾಲಯವು ಗರ್ಭಗೃಹ, ಅಂತರಾಳ, ಸಭಾಮಂಟಪ, ಮಹಾಮಂಟಪ, ಪ್ರಾಕಾರಗೋಡೆಗೆ ಹೊಂದಿಕೊಂಡಿರುವ ಮಂಟಪಗಳು, ಮಹಾದ್ವಾರಗೋಪುರ, ದೀಪಸ್ತಂಭ ಮೊದಲಾದವನ್ನು ಒಳಗೊಂಡ ವಿಶಾಲ ದೇಗುಲವಾಗಿದೆ.ಇವುಗಳಲ್ಲದೆ ಇತರ ಚಿಕ್ಕ ದೇಗುಲಗಳು ಆವರಣದಲ್ಲಿವೆ.ಗರ್ಭಗೃಹದಲ್ಲಿ ಒಂದೂವರೆ ಅಡಿ ಎತ್ತರದ ಪೀಠದ ಮೇಲೆ ಮೂರುವರೆ ಅಡಿಗಳಷ್ಟು ಎತ್ತರದ ಉತ್ಸವಾಂಬ /ಯಲ್ಲಮ್ಮ ಮೂರ್ತಿ ಇದೆ. ಸುಖಾಸನದಲ್ಲಿ ಕುಳಿತ ದೇವಿಯ ನಾಲ್ಕು ಕೈಗಳಲ್ಲಿ ಮೇಲಿನವು ತ್ರಿಶೂಲ, ಡಮರುಗ ,ಕೆಳಗಿನವು ಖಡ್ಗ, ಪಾನಬಟ್ಟಲುಗಳನ್ನು ಹಿಡಿದಿದ್ದಾರೆ.ದೇವಿಯ ಮೇಲ್ಬಾಗ ಕೀರ್ತಿಮುಖದ ಪ್ರಭಾವಳಿ ಇದೆ .ದೇವಿಯ ಬಲ ಮಗ್ಗುಲಲ್ಲಿ ಇನ್ನೊಂದು ಶಿಲ್ಪವಿದೆ .ಇದನ್ನು ಪರಶುರಾಮನೆಂದು ಹೇಳಲಾಗುತ್ತದೆ .ನಾಲ್ಕು ಅಡಿ ಎತ್ತರದ ಈ ಶಿಲ್ಪವು ನಾಲ್ಕು ಕೈಗಳನ್ನು ಹೊಂದಿದ್ದು ಬಿಲ್ಲು,ಬಾಣ,ಕೊಡಲಿ ಹಾಗೂ ಇನ್ನೊಂದು ಕೈ ಸಾಮಾನ್ಯ ಸ್ಥಿತಿಯಲ್ಲಿದೆ.ಗರ್ಭಗೃಹದ ಗೋಡೆಗೆ ಹಿತ್ತಾಳೆಯ ತಗಡಿನ್ನು ಹೊದಿಸಿದ್ದು,ಇದರಲ್ಲಿ ಪೂರ್ಣಕುಂಭ ಮತ್ತು ಪದ್ಮಗಳ ರಚನೆಗಳಿವೆ. ಅಂತರಾಳದ ದ್ವಾರಬಾಗಿಲನ್ನು ಹಿತ್ತಾಳೆಯ ತಗಡಿನಿಂದ ಮುಚ್ಚಲಾಗಿದೆ. ಇದರಲ್ಲಿ ತ್ರಿಶೂಲ ,ಡಮರುಗ, ಗದೆ ಹಾಗೂ ಅಭಯಹಸ್ತ ಮುದ್ರೆಯಲ್ಲಿ ನಿಂತಿರುವ ದ್ವಾರಪಾಲಕಿರನ್ನು ಚಿತ್ರಿಸಿರುವರು.ಸಭಾಮಂಟಪದಲ್ಲಿ ಆರು ಕಂಬಗಳಿದ್ದು ಅವುಗಳನ್ನು ಬಹುಮುಖ ಗಳಲ್ಲಿ ಕಡೆದಿರುವರು.ಕಂಬಗಳ ಚಚ್ಚೌಕ ಭಾಗದಲ್ಲಿ ವಿವಿಧ ಉಬ್ಬುಶಿಲ್ಪಗಳನ್ನು ಕಡೆಯಲಾಗಿದ್ದು, ಅವುಗಳಲ್ಲಿ ನಾಗ, ವೀಣಾವಾದಕ, ನರ್ತಕಿ ,ಪದ್ಮ ,ಕಾಳಿಂಗಮರ್ಧನ, ಹಾಲುಣಿಸುತ್ತಿರುವ ಹಸು, ಹಂಸ, ಕೈಮುಗಿದು ನಿಂತ ಭಕ್ತ, ಭೈರವ..ಇತ್ಯಾದಿ ಉಬ್ಬುಶಿಲ್ಪಗಳಿವೆ.ಈ ಕಂಬಗಳ ಮೇಲೆ ವೃತ್ತಾಕಾರದ ಫಲಕ, ಚಚ್ಚೌಕ ಬೋದಿಗೆಗಳಿವೆ. ಸಭಾಮಂಟಪದ ಮೇಲ್ಛಾವಣಿಯಲ್ಲಿ ಮಗುಚಿದ ಪದ್ಮವಿದೆ.
ಮಹಾಮಂಟಪದ ಎರಡು ಬದಿಯಲ್ಲಿ ಸಭೆ-ಸಮಾರಂಭಗಳಲ್ಲಿ ಕುಳಿತುಕೊಳ್ಳಲು ಅನುವಾಗುವ ಹಜಾರಗಳಿವೆ.ಇದರಲ್ಲಿ ಎಂಟು ಕಂಬಗಳಿವೆ .ಈ ಕಂಬಗಳು ಬಹುಮುಖಗಳಲ್ಲಿವೆ. ಇವುಗಳಲ್ಲಿ ವಿವಿಧ ಶಿಲ್ಪಗಳನ್ನು ಕಡೆಯಲಾಗಿದ್ದು, ಅವುಗಳಲ್ಲಿ ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡುತ್ತಿರುವ ಯತಿ,ವಾದ್ಯ ಬಾರಿಸುತ್ತಿರುವ ವ್ಯಕ್ತಿ ,ಕೈಮುಗಿದು ನಿಂತ ಭಕ್ತ, ಗರುಡ, ಈಟಿ ಹಿಡಿದು ಕುದುರೆ ಸವಾರಿಯಲ್ಲಿರುವ ಯೋಧ, ಕೈಗಳಲ್ಲಿ ಕೋಲನ್ನಿಡಿದು ಗೋಣಿಯನ್ನು ಹೊದ್ದಿರುವ ವ್ಯಕ್ತಿ ,ಪುಂಗಿ ಊದುತ್ತಾ ಹಾವಾಡಿಸುತ್ತಿರುವ ಹಾವಾಡಿಗ ,ಸಿಂಹ ,ರಾಜಭಕ್ತ ಬಿಲ್ಲನ್ನು ಹಿಡಿದು ನಿಂತ ಬೇಡತಿ ,ಆನೆಯ ಸವಾರ ಮೊದಲಾದ ಉಬ್ಬುಶಿಲ್ಪಗಳನ್ನು ವಿವಿಧ ರೀತಿಯ ಈ ಕಂಬಗಳಲ್ಲಿ ಕಾಣಬಹುದು. ದೇವಾಲಯದ ಗರ್ಭಗೃಹದ ಮೇಲೆ ದ್ರಾವಿಡ ಮಾದರಿಯ ಶಿಖರವನ್ನು ನಿರ್ಮಿಸಲಾಗಿದೆ.
ಮೇಲ್ಭಾಗದಲ್ಲಿ ಲೋಹದ ಕಳಸವನ್ನು ಪ್ರತಿಷ್ಠಾಪಿಸಿರುವರು. ಈ ದೇಗುಲದ ಸುತ್ತಲೂ ವಿಜಯನಗರ ಕಾಲದ ದೇಗುಲಗಳಲ್ಲಿರುವಂತೆ ವಿವಿಧ ಮಂಟಪಗಳಿವೆ. ಮುಂಭಾಗದಲ್ಲಿ ಮಹಾದ್ವಾರವಿದ್ದು, ಇದು ಹಿಂದೆ 5 ಅಂತಸ್ತು ಹೊಂದಿದ್ದು ಎನ್ನಲಾಗುತ್ತದೆ.ಆದರೆ ಈಗ ಒಂದು ಅಂತಸ್ತು ಮಾತ್ರ ಉಳಿದಿದೆ. ಇದರಲ್ಲಿನ ನಾಲ್ಕು ಕಂಬಗಳಲ್ಲಿ ಗಣೇಶ, ಆಂಜನೇಯ ,ಹಾವಾಡಿಗ,ಭೈರವ, ಭಕ್ತ, ಸಿಂಹ ಶ್ರೀರಾಮ ..ಮೊದಲಾದ ಉಬ್ಬು ಕೆತ್ತನೆಗಳಿವೆ. ದೇವಾಲಯದ ಮುಂಭಾಗದಲ್ಲಿ ಸುಮಾರು 30 ಅಡಿಗಳೆತ್ತರದ ದೀಪಸ್ತಂಭವನ್ನು ನಿಲ್ಲಿಸಲಾಗಿದೆ .ದೀಪಸ್ತಂಭದ ಮುಂದೆ ಉಯ್ಯಾಲೆ ಕಂಬವಿದೆ. ಇದರಲ್ಲಿ ಉತ್ಸವಾಚರಣೆಗಳ ಸಂದರ್ಭದಲ್ಲಿ ದೇವಿಯನ್ನು ಉಯ್ಯಾಲೆಯಲ್ಲಿ ಇಟ್ಟು ತೂಗುವ ಸಂಪ್ರದಾಯವಿತ್ತು.ದೇಗುಲದ ಮುಂದೆ ಬಲಭಾಗದಲ್ಲಿ ಮಾತಂಗಿ ಗುಡಿಯಿದೆ .ಇದರಲ್ಲಿ ಮಾತಂಗಿಯ ಪಾದಗಳಿವೆ. ಒಂದು ಹೆಣ್ಣು ಶಿಲ್ಪವಿದೆ.ಇದನ್ನು ಮಹಾರಾಣಿ ಎಂದು ಕರೆಯುತ್ತಾರೆ.ಇದೊಂದು ವೀರಗಲ್ಲಾಗಿದೆ.
ಉಚ್ಚಂಗಿಯಲ್ಲಮ್ಮ ಚಿತ್ರದುರ್ಗದ ಪಾಳೆಗಾರರ ಅಧಿದೇವತೆಯಾಗಿದ್ದು ಹಿಂದಿನಿಂದಲೂ ಅತ್ಯಂತ ವೈಭವದಿಂದ ಜಾತ್ರೆ ಉತ್ಸವಗಳು ಜರುಗುತ್ತವೆ. ವೈಶಾಖ ಮಾಸದಲ್ಲಿ ವಿಶೇಷವಾಗಿ 15 ದಿನಗಳ ಕಾಲ ಜಾತ್ರೆಯನ್ನು ನಡೆಸುತ್ತಾರೆ .ಈ ದಿನಗಳಲ್ಲಿ ಗಂಗಾಪೂಜೆ ,ಕಳಸಪೂಜೆ, ಕಂಕಣಧಾರಣೆ ಉತ್ಸವ, ಪಲ್ಲಕ್ಕಿ ಉತ್ಸವ ಜರುಗುತ್ತದೆ. 12 ನೇ ದಿವಸದಂದು ಸಿಡಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಸಿಡಿ ಆಚರಣೆಯಲ್ಲಿ ಮೊದಲು ಕೊಂಡಿಯನ್ನು ಮೈಗೆ ಸಿಕ್ಕಿಸಿಕೊಂಡು ಮಾಡಲಾಗುತ್ತಿತ್ತು.ಆದರೆ ಈಗ ಚರ್ಮದ ಬದಲಿಗೆ ಬಟ್ಟೆ ಕಟ್ಟಿಕೊಂಡು ಅದಕ್ಕೆ ಕೊಂಡಿಯನ್ನು ಹಾಕಿಕೊಳ್ಳುವುದು ರೂಢಿಯಲ್ಲಿದೆ. ಇದನ್ನು ಮಾತಂಗಿಯ ಆರಾಧಕರು ನೆರವೇರಿಸುತ್ತಾರೆ .ದಸರಾ ಹಬ್ಬದಲ್ಲಿ ದೇವಿಯ ವಿಶೇಷ ಆರಾಧನೆ ನಡೆಯುತ್ತದೆ .ಈ ಸಂದರ್ಭದಲ್ಲಿ ಬರುವ ವಿಜಯದಶಮಿ ದಿನದಂದು ಸಂತೆಹೊಂಡದ ಬಳಿ ಕೆಂಡ ತುಳಿಯುವ ಆಚರಣೆಯನ್ನು ನಡೆಸುತ್ತಾರೆ. ಶ್ರಾವಣ,ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ .ಈ ದೇವರ ಉಪಸ್ಥಿತಿಯಲ್ಲಿ ಭೇಟಿ ಉತ್ಸವ ನಡೆಯುತ್ತದೆ.ಈ ದೇವರ ಹೆಸರಿನಲ್ಲಿ ಬುರುಜಿನಹಟ್ಟಿಯಲ್ಲಿ ಸಿಹಿನೀರುಹೊಂಡ ನಿರ್ಮಿಸಲಾಗಿದೆ.




