ಹೊಳಲ್ಕೆರೆ: (ಡಿ.28) : 1885 ಡಿಸೆಂಬರ್ 28ರಂದು ಎ.ಒ.ಹ್ಯೂಮ್ ಸ್ಥಾಪಿಸಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ವಿಶ್ವದಲ್ಲಿಯೇ ಅತ್ಯಂತ ಸುಭದ್ರ ಇತಿಹಾಸ ಹೊಂದಿರುವ ಪಕ್ಷವೆಂಬ ಏಕೈಕ ರಾಜಕೀಯ ಪಕ್ಷ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇಶವನ್ನು ಆಂಗ್ಲರ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಸ್ಥಾಪನೆಗೊಂಡ ಕಾಂಗ್ರೆಸ್ ಪಕ್ಷ ದೇಶದಾಧ್ಯಂತ ಕೋಟ್ಯಾಂತರ ಜನರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿ ಸ್ವತಂತ್ರ ಚಳವಳಿ ರೂಪಿಸಿದ ಪಕ್ಷವಾಗಿದೆ.ಈ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕು ಉಂಟು ಮಾಡಿ, ದೇಶದಿಂದ ಓಡಿಸುವ ಮೂಲಕ ದೇಶವನ್ನು ಸ್ವತಂತ್ರ ಭಾರತವನ್ನಾಗಿ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಬಣ ್ಣಸಿದರು.
ಆಂಗ್ಲರ ಗುಲಾಮತನದಿಂದ ಮುಕ್ತಿಗೊಳಿಸದ ಬಳಿಕ ದೇಶದ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು.ಇಂತಹ ಸಂಕಷ್ಟ ಸಂದರ್ಬದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಮುಖ್ಯ ಪಾತ್ರವಹಿಸಿದ್ದ ಪಂಡಿತ್ ಜವಾಹರ ಲಾಲ್ ಅವರು ದೇಶದ ಮೊದಲ ಪ್ರಧಾನಿ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವೇಳೆ ಸಾಲು ಸಾಲು ಸವಾಲುಗಳು ಎದುರಿಗಿದ್ದವು.
ಒಂದು ಸಣ್ಣ ಗುಂಡಪಿನ್ ಸೇರಿದಂತೆ ಸಣ್ಣ ಕೈಗಾರಿಕೆ ಸ್ಥಾಪನೆಯನ್ನು ಮಾಡಲು ಆಗದಷ್ಟು ದೇಶದ ಸಂಪತ್ತು ಬರಿದಾಗಿತ್ತು. ಇಂತಹ ಸಂದರ್ಭದಲ್ಲಿ ತನ್ನ ದೂರದೃಷ್ಟಿ ಚಿಂತನೆಗಳ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ನೆಹರು ತನ್ನ ಎಲ್ಲ ಸಹದ್ಯೋಗಿಗಳ ಸಹಕಾರ ಪಡೆದು ನವ ಭಾರತವನ್ನು ನಿರ್ಮಿಸುವಲ್ಲಿ ಶ್ರಮಿಸಿ ಯಶಸ್ವಿಯಾದರು.
ಪಂಚವಾರ್ಷಿಕ ಯೋಜನೆ ರೂಪಿಸುವ ಮೂಲಕ ಕೈಗಾರಿಕೆ, ನೀರಾವರಿ, ವಿಮಾನ ನಿಲ್ದಾಣ, ರೈಲು, ಬೃಹತ್ ಜಲಾಶಯಗಳ ನಿರ್ಮಾಣದ ಮೂಲಕ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದ ಮಹಾನ್ ನಾಯಕ ನೆಹರು ಎಂದು ಬಣ ್ಣಸಿದರು.
ದೇಶದಲ್ಲಿ ನೂರಾರು ಸಾರ್ವಜನಿಕ ಸಂಸ್ಥೆಗಳನ್ನು ನೆಹರು ಆದಿಯಾಗಿ ಈ ಹಿಂದೆ ಆಳಿದ ಎಲ್ಲ ಪ್ರಧಾನ ಮಂತ್ರಿಗಳು ಸ್ಥಾಪಿಸಿದ್ದಾರೆ. ಆದರೆ, ದುರದೃಷ್ಟವಶತ್ ಕೇವಲ ಏಳು ವರ್ಷದ ಹಿಂದೆ ಸುಳ್ಳು ಭರವಸೆ ಮತ್ತು ಕೋಮುಭಾವನೆ ಕೆರಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಯ ನರೇಂದ್ರ ಮೋದಿ ಅವರು,. 70 ವರ್ಷ ಆಡಳಿತ ನಡೆಸಿದವರ ಶ್ರಮವನ್ನು ಮಣ್ಣುಪಾಲು ಮಾಡಿದರು. ದೇಶವನ್ನು ಆರ್ಥಿಕ ದಿವಾಳಿಯನ್ನಾಗಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೂರದೃಷ್ಟಿಯಿಂದ ಸ್ಥಾಪಪನೆಗೊಂಡಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಶ್ರೀಮಂತರಿಗಾಗಿ ಒಳ್ಳೆ ಬೆಲೆಗೆ ಮಾರಾಟಕ್ಕೆ ಇಟ್ಟು ಜನರ ಬದುಕನ್ನು ಮೂರಾಬಟ್ಟೆ ಮಾಡಿದ್ದಾರೆ. ದೇಶದ ಬಡ, ಮಧ್ಯಮ ವರ್ಗದ ಜನರನ್ನು ಮತ್ತೊಮ್ಮೆ ಆಂಗ್ಲರ ರೀತಿ ಆಡಳಿತ ನಡೆಸುವ ಮೂಲಕ ಗುಲಾಮರನ್ನಾಗಿಸುತ್ತಿದ್ದಾರೆ ಎಂದು ಆಂಜನೇಯ ಆರೋಪಿಸಿದರು.
ಬ್ಯಾಂಕ್, ಬಿಎಸ್ಎನ್ಎಲ್, ಎಲ್ಐಸಿ, ವಿದ್ಯುತ್ ಕ್ಷೇತ್ರ, ರೈಲು ಸೇರಿದಂತೆ ದೇಶದ ಜನರ ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಮೋದಿ ಖಾಸಗೀಕರಗೊಳಿಸುತ್ತಿದ್ದಾರೆ. ಪರಿಣಾಮ ದೇಶದಲ್ಲಿ ಕೋಟ್ಯಾಂತರ ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ, ಉಳಿದ ನೌಕರರು ಅಭದ್ರತೆಯಲ್ಲಿ ಸಿಲುಕಿದ್ದು, ಅವರೆಲ್ಲರೂ ಬೀದಿಗಿಳಿದು ಮೋದಿ ವಿರುದ್ಧ ಬಹಿರಂಗ ಹೋರಾಟಕ್ಕೆ ಇಳಿದಿದ್ದಾರೆ. ಆದರೆ, ಬಿಜೆಪಿ ಸರ್ಕಾರಕ್ಕೆ ನೌಕರರ, ರೈತರ, ಕಾರ್ಮಿಕರ ಕೂಗು ಕೇಳಿಸಿಕೊಳ್ಳದಷ್ಟು ಕಿವುಡು ಆಗಿದೆ. ಕೇವಲ ಉಳ್ಳವರ ಮಾತುಗಳು ನರೇಂದ್ರ ಮೋದಿಗೆ ಇಂಪಾಗಿ ಕೇಳುತ್ತವೆ ಎಂದು ಬೇಸರಿಸಿದರು.
ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರು ಶಾಸ್ತ್ರಿ, ರಾಜೀವ್ ಗಾಂಧಿ ಸೇರಿದಂತೆ ದೇಶವನ್ನಾಳಿದ ಅನೇಕ ಮಹನೀಯರು ದೂರದೃಷ್ಟಿಯ ಚಿಂತನೆವುಳ್ಳವರಾಗಿದ್ದರು. ಆದರೆ ಮೋದಿ ಅವರ ಸರ್ವಾಧಿಕಾರ ಧೋರಣೆ ಮತ್ತು ದೂರದೃಷ್ಟಿ ರಹಿತ ಆಡಳಿತದಿಂದ ನೋಟು ಬ್ಯಾನ್, ಜಿಎಸ್ ಟಿ, ಲಾಕ್ ಡೌನ್, ಜನವಿರೋಧಿ ನೀತಿಗಳು ಜಾರಿಗೊಂಡು, ದೇಶ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದು, ಖಾಸಗಿ ವ್ಯಕ್ತಿಗಳ ಕಪಿಮುಷ್ಟಿಗೆ ಸಿಲುಕಿದೆ. ಇದರ ವಿರುದ್ಧ ದೇಶದಲ್ಲಿ ಸ್ವತಂತ್ರ ಹೋರಾಟದ ರೀತಿ ಚಳವಳಿ ರೂಪಿಸುವ ತುರ್ತು ದೇಶದ ಜನರ ಮುಂದಿರುವುದು ನೋವಿನ ವಿಷಯ ಎಂದರು.
ದೇಶಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ನೆಹರು ಕುಟುಂಬ ಕಂಡರೆ ಬಿಜೆಪಿಗೆ ಭೀತಿ. ಇದೇ ಕಾರಣಕ್ಕೆ ನೆಹರು ಅವರ ಬೆನ್ನೇಲುಬು ಆಗಿ ದೇಶದ ಏಕತೆಗೆ ಶ್ರಮಿಸಿದ್ದ ವಲ್ಲಭಬಾಯಿ ಪಟೇಲ್ ಅವರು ಪ್ರಧಾನಿ ಆಗುವುದನ್ನು ಕಾಂಗ್ರೆಸ್ ಪಕ್ಷದವರು ತಪ್ಪಿಸಿದರು ಎಂದು ಸುಳ್ಳು ಪ್ರಚಾರ ನಡೆಸುತ್ತಿದೆ. ಆದರೆ, ಇತಿಹಾಸ ಗಮನಿಸಿದರೆ ನೆಹರು ಪ್ರಧಾನ ಮಂತ್ರಿ ಆಗಬೇಕೆಂಬುದು ವಲ್ಲಭಭಾಯಿ ಪಟೇಲ್ ಅವರ ಆಶಯ, ಗುರಿ ಆಗಿತ್ತು. ಅಂದೇ ಸಂಘ ಪರಿವಾರದ ಅಪಾಯದ ಮುನ್ಸೂಚನೆ ಅರಿತು, ಅ ಸಂಘಟನೆಯನ್ನು ನಿಷೇಧಿಸಿದ್ದು ವಲ್ಲಭಬಾಯಿ ಪಟೇಲ್ ಎಂಬ ಸತ್ಯವನ್ನು ಜನರಿಗೆ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿ, ಬಿಜೆಪಿಯ ನಕಲಿ ದೇಶಭಕ್ತಿಯನ್ನು ಬಯಲು ಮಾಡಬೇಕೆಂದು ಕರೆ ನೀಡಿದರು.
ಬಿಜೆಪಿ ಜನರ ಭಾವನೆ ಕೆರಳಿಸಿ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ದೇಶವನ್ನು ಏಕತೆ ಬುನಾದಿ ಮೇಲೆ ಪುನರ್ ನಿರ್ಮಾಣ ಮಾಡುವ ಸಂಕಲ್ಪ ಹೊಂದಿದೆ. ಈಗಾಗಲೇ ದೇಶದ ಜನರಿಗೆ ಸಿಲಿಂಡರ್, ಪೆಟ್ರೋಲ್, ಬೆಳೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಜೆಪಿಯ ನಿಜವಾದ ಮುಖವಾಡವನ್ನು ಜನರಿಗೆ ಪರಿಚಯಿಸಿದೆ. ಕೃಷಿ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮುಂದಾಗಿ ರೈತರ ಹೋರಾಟಕ್ಕೆ ಬೆಚ್ಚುಬಿದ್ದು ಉತ್ತರ ಪ್ರದೇಶದ ಚುನಾವಣೆ ಕಾರಣಕ್ಕೆ ಹಿಂಪಡೆದಿದ್ದು, ಚುನಾವಣೆ ಬಳಿಕ ಮತ್ತೆ ಕಾಯ್ದೆ ಜಾರಿಗೊಳಿಸುವ ಮುನ್ಸೂಚನೆಯನ್ನು ಬಿಜೆಪಿ ನಾಯಕರೇ ಬಹಿರಂಗ ಪಡಿಸಿದ್ದಾರೆ.
ಈ ಜನವಿರೋಧಿ ಸರ್ಕಾರವನ್ನು ಬುಡಸಮೇತ ಕಿತ್ತು, ಜನಪರ ಸರ್ಕಾರ ಸ್ಥಾಪನೆಗೆ ಜನ ಎಲ್ಲೆಡೆ ಉತ್ಸುಕರಾಗಿದ್ದು, ಕಾಂಗ್ರೆಸ್ ಪಕ್ಷ ಕೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷರಾದ ಗಂಗಾಧರಪ್ಪ, ಸದಸ್ಯರಾದ ರಂಗಸ್ವಾಮಿ, ಲೋಹಿತ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ಪಪಂ ಸದಸ್ಯರಾದ ಆನಂದ್ ರಾಜಪ್ಪ, ಸೈಯದ್ ಸಜಿಲ್, ವಕೀಲರಾದ ಜಯಣ್ಣ, ಮುಖಂಡರಾದ ಮಂಜುನಾಥ್, ನಿರ್ಮಲ, ಮಂಜುಳ ಉಪಸ್ಥಿತರಿದ್ದರು.