ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಗೆ ಸವಾಲೊಂದನ್ನ ಹಾಕಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಗೆ ತಾಕತ್ತಿದ್ದರೆ ಮೇಕೆದಾಟು ಯೋಜನೆಗೆ ತಮಿಳುನಾಡನ್ನು ಒಪ್ಪಿಸಲಿ ಎಂದು ಸವಾಲು ಹಾಕಿದ್ದಾರೆ.
ನನ್ನ ಹಳೆಯ ಮಾತಿಗೆ ಈಗಲೂ ನಾನು ಬದ್ಧ. ಪ್ರಧಾನಿ ಮೋದಿಯವರನ್ನು ನಾನು ಐದೇ ನಿಮಿಷದಲ್ಲಿ ಒಪ್ಪಿಸುತ್ತೇನೆ. ಕಾಂಗ್ರೆಸ್ ನವರಿಗೆ ತಮಿಳುನಾಡಿನವರನ್ನು ಒಪ್ಪಿಸುವ ಶಕ್ತಿ ಇಲ್ಲ. ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳು ಸರ್ಕಾರವನ್ನು ಧಿಕ್ಕರಿಸಿದರೆ ಮೇಕೆದಾಟು ಯೋಜನೆ ಆಗುತ್ತದೆ. ಇಲ್ಲವಾದರೆ ಮೇಕೆದಾಟು ಯೋಜನೆಯ ಅನುಷ್ಠಾನ ಕಾಂಗ್ರೆಸ್ ನಿಂದ ಸಾಧ್ಯವಿಲ್ಲ. ನನ್ನ ಒಬ್ಬನ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಅತಿಯಾದ ಭಯವಿದೆ. ಹೀಗಾಗಿಯೇ ಯಾವಾಗಲೂ ನನ್ನ ಹೆಸರನ್ನ ಜಪಿಸುತ್ತಾ ಇರುತ್ತಾರೆ.
ಬಿಜೆಪಿ – ಜೆಡಿಎಸ್ ಒಂದಾದ ಮೇಲಂತು ಕಾಂಗ್ರೆಸ್ ನವರಿಗೆ ನಿದ್ದೆ ಬರ್ತಿಲ್ಲ. ಹೀಗಾಗಿಯೇ ಪದೇ ಪದೇ ನನ್ನನ್ನೇ ಟಾರ್ಗೆಟ್ ಮಾಡ್ತಾ ಇದ್ದಾರೆ. ಮುಂದಿನ ಐದು ವರ್ಷ ಅಲ್ಲ, ಇನ್ನು ಇಪ್ಪತ್ತು ವರ್ಷ ಬೇಕಾದರೂ ಅವರದ್ದೇ ಸರ್ಕಾರವಿರಲಿ. ಆದರೆ ಹೇಳಿದ ಕೆಲಸವನ್ನ ಮೊದಲು ಮಾಡಿ. ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದ್ರೂ ಅನ್ನೋದು ನಮಗೂ ಗೊತ್ತಿದೆ. ಸಿಎಂ ಖುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಗಲಾಟೆಗಳೇ ನಡೆಯುತ್ತಿವೆ. ಹೀಗೆ ಗಲಾಟೆಯಲ್ಲಿಯೇ ಮುಳುಗಿರುವ ಕಾಂಗ್ರೆಸ್ ಅನ್ನು ಜನ ಹೇಗೆ ತಾನೇ ಒಪ್ಪುತ್ತಾರೆ ಹೇಳಿ. ನಾನು ಕೇವಲ ಸಂಸದರ ಹಣವಲ್ಲ, ವಿಶೇಷ ಅನುದಾನವನ್ನು ತಂದಿದ್ದೇನೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
