ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ: ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಾಟಕಗಳನ್ನು ನಶಿಸಿ ಹೋಗಲು ಬಿಡಬಾರದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ರಂಗ ಕಹಳೆ ಬೆಂಗಳೂರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರದಿಂದ ಆರಂಭಗೊಂಡಿರುವ 20 ನೇ ಕುವೆಂಪು ನಾಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರ ಕವಿ ಕುವೆಂಪುರವರ ಜೈ ಭಾರತ ಜನನಿಯ ತನುಜಾತೆ, ಓ ನನ್ನ ಚೇತನ ಆಗು ನೀ ಅನಿಕೇತನ ಇವುಗಳು ಇನ್ನು ಎಲ್ಲರ ಮನದಲ್ಲಿ ಹಾಸುಹೊಕ್ಕಾಗಿವೆ. ಅನೇಕ ಮಹಾಕಾವ್ಯ, ಕೃತಿಗಳನ್ನು ರಚಿಸಿದ್ದಾರೆ. ಏನಾದರೂ ಆಗು ಮೊದಲು ನೀ ಮಾನವನಾಗು ಎನ್ನುವ ಅವರ ಸಂದೇಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಟಿ.ವಿ, ಫೇಸ್‍ಬುಕ್, ಸಾಮಾಜಿಕ ಜಾಲತಾಣ, ವಾಟ್ಸ್‍ಪ್‍ಗಳಲ್ಲಿ ತೊಡಗಿದ್ದು, ನಾಟಕಗಳನ್ನು ನೋಡುವವರೆ ಇಲ್ಲದಂತಾಗಿದ್ದಾರೆ. ಯಾವುದೇ ಕಾರಣಕ್ಕೂ ನಾಟಕಗಳು ನಶಿಸಿ ಹೋಗಲು ಬಿಡಬಾರದು. ಹೆಚ್ಚು ಹೆಚ್ಚು ನಾಟಕಗಳನ್ನು ಪ್ರೇಕ್ಷಕರು ವೀಕ್ಷಿಸುವ ಮೂಲಕ ರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ ಶ್ರೇಷ್ಟ ಕವಿಗಳನ್ನು ನಾಟಕ, ಕಾವ್ಯಗಳ ಮೂಲಕ ನೋಡುವ ಸುವರ್ಣಾವಕಾಶ ಒದಗಿದೆ. ಆದ್ದರಿಂದ ನಾಲ್ಕು ದಿನಗಳ ಕಾಲ ನಡೆಯುವ ಕುವೆಂಟು ನಾಟಕೋತ್ಸವದಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಂಗಕಲಾವಿದರನ್ನು ಪ್ರೋತ್ಸಾಹಿಸಬೇಕು. ಕುವೆಂಪುರವರ ಎಲ್ಲಾ ಕೃತಿ, ನಾಟಕಗಳಲ್ಲಿ ಮಲೆನಾಡ ಚಿತ್ರಣವಿದೆ. ಟಿ.ಎಸ್.ವೆಂಕಣ್ಣಯ್ಯ ಕುವೆಂಪುರವರ ಗುರುಗಳಾಗಿದ್ದರು. ನಾಟಕಗಳನ್ನು ನೋಡಿದರೆ ಜೀವನದಲ್ಲಿ ಪ್ರಭಾವ ಬೀರುತ್ತದೆ. ಚಲನಚಿತ್ರಕ್ಕಿಂತ ನಾಟಕ ಮನಸ್ಸಿನ ಮೇಲೆ ಹೆಚ್ಚು ಪರಿಣಾಮವಾಗುತ್ತದೆ ಎಂದರು.
ನಾಟಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ.ಬಿ.ರಾಜಶೇಖರಪ್ಪನವರು ಮಾತನಾಡುತ್ತ ಕನ್ನಡ ಸಾಹಿತ್ಯಕ್ಕೆ ಕುವೆಂಪುರವರು ದೊಡ್ಡ ಶಕ್ತಿ. 20 ನೇ ಶತಮಾನದ ದೊಡ್ಡ ಕವಿ ಕುವೆಂಪು ಎಲ್ಲರ ಮನ ಸೆಳೆದಿದ್ದಾರೆ. ಕ್ರಾಂತಿಕಾರಿ ನಿಲುವು ವ್ಯಕ್ತಪಡಿಸುವ ಅವರ ನಾಟಕದಲ್ಲಿ ವಸ್ತು ಹಳೆಯದಾದರೂ ದೃಷ್ಟಿಕೋನ, ದರ್ಶನ ಹೊಸತನದಿಂದ ಕೂಡಿದೆ. ನವೀನ, ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನ ನಾಟಕದಲ್ಲಿ ಸಮ್ಮಿಳಿತವಾಗಿದೆ. ಬಹಳ ಎತ್ತರದ ದೊಡ್ಡ ಕವಿಯಾಗಿದ್ದ ಕುವೆಂಪುರವರ ನಾಟಕಗಳಿಗೆ ಪ್ರೇಕ್ಷಕರ ಮನಸ್ಸನ್ನು ಅರಳಿಸುವ ಶಕ್ತಿಯಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ, ತೋಟಪ್ಪ ಉತ್ತಂಗಿ ಇವರುಗಳು ಮಾತನಾಡಿದರು.