ಚಿತ್ರದುರ್ಗ. ಜೂನ್16 : ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ನಡೆಯುವ ಸಾಮೂಹಿಕ ಯೋಗ ಅಭ್ಯಾಸದಲ್ಲಿ ಸಾರ್ವಜನಿಕರು ಸೇರಿದಂತೆ ಎಲ್ಲಾ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪ್ಪದೇ ಪಾಲ್ಗೊಳ್ಳುವಂತೆ ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗನಾಥ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ. ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಣೆಯಾಗಲಿದೆ. ಜಿಲ್ಲಾಡಳಿತ, ಆಯುಷ್ ಇಲಾಖೆ ವತಿಯಿಂದ ಬರುವ ಜೂನ್ 21 ರಂದು ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಲಕ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಅಂದು ಬೆಳಿಗ್ಗೆ 7.00 ಗಂಟೆಯಿಂದ 7.45 ರವರೆಗೆ ಸುಮಾರು 2000 ಸಾವಿರಕ್ಕೂ ಅಧಿಕ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವರು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಆದ್ದರಿಂದ ನಗರ ಸಭೆಯಿಂದ ಮೈದಾನ ಸ್ವಚ್ಛಗೊಳಿಸಬೇಕು. ಜಿಲ್ಲಾ ಆಯುಷ್ ಇಲಾಖೆಯಿಂದ ಮ್ಯಾಟ್ ಹಾಸುವುದರೊಂದಿಗೆ ಮೈದಾನವನ್ನು ಯೋಗಾಭ್ಯಾಸಕ್ಕೆ ಸಜ್ಜುಗೊಳಿಸಬೇಕು. ಯೋಗದಲ್ಲಿ ಪಾಲ್ಗೊಳ್ಳುವರಿಗೆ ತೊಂದರೆಯಾಗದಂತೆ ಮೈದಾನದ ಸುತ್ತಲಿನ ಸರ್ಕಾರಿ ಕಚೇರಿ ಹಾಗೂ ಶಾಲೆಗಳ ಶೌಚಾಲಯಗಳನ್ನು ತೆರದಿಡಬೇಕು. ಆಯುಷ್ ಇಲಾಖೆ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವವರಿಗೆ ಶುದ್ಧ ಕುಡಿಯುವ ನೀರು ಹಾಗೂ ಉಪಹಾರದ ವ್ಯವಸ್ಥೆ ಮಾಡಬೇಕು. ತುರ್ತು ಸಂದರ್ಭಕ್ಕಾಗಿ ಆಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳನ್ನು ಸನ್ನದ್ದವಾಗಿ ಇರಿಸುವಂತೆ ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗನಾಥ ಸೂಚನೆ ನೀಡಿದರು.
ಯೋಗದ ಮಹತ್ವ ಸಾರಲು ಜಾಗೃತಿ ಜಾಥ: ಅಂತರಾಷ್ಟಿçಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಜನರಲ್ಲಿ ಯೋಗದ ಮಹತ್ವ ಸಾರಲು ಜೂನ್ 19 ರಂದು ಬೃಹತ್ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳು ಜಾಥಕ್ಕೆ ಹಸಿರು ನಿಶಾನೆ ತೋರುವರು. ಜಿಲ್ಲೆಯ ಯೋಗ ಸಂಸ್ಥೆಗಳು, ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಹಾಗೂ ಚಿತ್ರದುರ್ಗ ನಗರದಲ್ಲಿನ ಎಲ್ಲಾ ಸರ್ಕಾರಿ ಕಚೇರಿ ಸಿಬ್ಬಂದಿ ಜಾಗೃತಿ ಜಾಥದಲ್ಲಿ ಪಾಲ್ಗೊಳ್ಳುವರು. ಓನಕೆ ಒಬವ್ವ ವೃತ್ತ, ಮದಕರಿ ನಾಯಕ ವೃತ್ತ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಉಚ್ಚಂಗೆಲ್ಲಮ್ಮ ದೇವಾಸ್ಥಾನ ಬೀದಿ, ಆನೆ ಬಾಗಿಲು, ಗಾಂಧಿ ವೃತ್ತ, ಎಸ್.ಬಿ.ಐ ವೃತ್ತದ ಮೂಲಕ ಜಾಥ ಹಳೆ ಮಾಧ್ಯಮಿಕ ಆವರಣದಲ್ಲಿ ಸಂಪನ್ನಗೊಳ್ಳಲಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಯೋಗ ತರಬೇತಿ :
ವಿದ್ಯಾರ್ಥಿ ಚೇತನ ಕಾರ್ಯಕ್ರಮದಡಿ ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಯ ಮಕ್ಕಳಿಗೆ 2 ತಿಂಗಳ ಕಾಲ ಯೋಗ ತರಬೇತಿಯನ್ನು ನೀಡಲಾಗಿದೆ. ಇದರಿಂದ ಮಕ್ಕಳಲ್ಲಿ ಶಾರೀರಿಕ ಧೃಡತೆ ಹಾಗೂ ನೆನಪಿನ ಶಕ್ತಿ ಹೆಚ್ಚಳವಾಗುತ್ತದೆ. ಜಿಲ್ಲೆಯ ಹೆಸರಾಂತ ಯೋಗ ತರಬೇತಿ ಸಂಸ್ಥೆಗಳ ಶಿಕ್ಷಕರು ಉಚಿತವಾಗಿ ಸರ್ಕಾರಿ ಮಕ್ಕಳಿಗೆ ಯೋಗ ತರಬೇತಿ ನೀಡಿದ್ದಾರೆ ಎಂದು ಡಾ.ಶಿವಕುಮಾರ್ ತಿಳಿಸಿದರು. ಸಭೆಯಲ್ಲಿ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕರಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಸಾಮೂಹಿಕ ಯೋಗಾಭ್ಯಾಸದಲ್ಲಿ ಮಾಡಬೇಕಾದ ಯೋಗದ ಶಿಷ್ಟಾಚಾರದ ಪ್ರತಿಯನ್ನು ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗನಾಥ ಬಿಡುಗಡೆ ಮಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಕಾರ್ಮಿಕಾಧಿಕಾರಿ ಬಾಲಚಂದ್ರ ಬಗಟಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಬೋಗಿ, ಪಿಯು ಉಪನಿರ್ದೇಶಕ ತಿಮ್ಮಯ್ಯ, ಆಯುಷ್ ಇಲಾಖೆ ವೈದ್ಯಾಧಿಕಾರಿಗಳಾದ ಡಾ.ವಿಜಯ್ ಭಾಸ್ಕರ್, ಡಾ.ನಾಗರಾಜ ನಾಯ್ಕ್, ಡಾ.ವಿಜಯ ಲಕ್ಷ್ಮೀ, ಡಾ ಪ್ರಶಾಂತ ಸೇರಿದಂತೆ ಜಿಲ್ಲೆಯ ವಿವಿಧ ಯೋಗ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಜಿಲ್ಲೆಯು ಆಯುರ್ವೇದ ಕಾಲೇಜಿನ ಪ್ರಾಂಶಪಾಲರು, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.






