ಸುದ್ದಿಒನ್, ಚಿತ್ರದುರ್ಗ, ಜೂನ್. 05 : ನಗರದಲ್ಲಿರುವ ಪ್ರತಿಯೊಬ್ಬರೂ ಗಿಡ ಬೆಳೆಸುವ ಮೂಲಕ ಚಿತ್ರದುರ್ಗವನ್ನು ಹಸಿರು ನಗರವನ್ನಾಗಿ ಮಾಡಬೇಕು, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದಿಂದ ಆಯುರ್ವೇದ ವನ ನಿರ್ಮಾಣ ಕಾರ್ಯ ಶ್ಲಾಘನೀಯ ಪರಿಸರೋತ್ಸವ ವರ್ಷ ಪೂರ್ಣ ನಡೆಯುವ ಕಾರ್ಯವಾಗಲಿ ಎಂದು ನಗರಸಭೆ ಅಧ್ಯಕ್ಷರಾದ ಸುಮಿತಾ ರಾಘವೇಂದ್ರ ಹೇಳಿದರು
ಅರಣ್ಯ ಇಲಾಖೆ, ಆಯುಷ್ ಇಲಾಖೆ, ನಗರಸಭೆ, ಚಿತ್ರದುರ್ಗ,ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ. ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಸಿದ್ದಾರ್ಥ ಬಡಾವಣೆಯಲ್ಲಿ ನೂತನವಾಗಿ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ನೇತೃತ್ವದಲ್ಲಿ ನಿರ್ಮಾಣ ಮಾಡುತ್ತಿರುವ “ಗುರುಕುಲ ಆಯುರ್ವೇದ ವನದಲ್ಲಿ ಹಮ್ಮಿಕೊಂಡಿದ್ದ ಪರಿಸರೋತ್ಸವ ಮತ್ತು ಆಯುರ್ವೇದ ವಿದ್ಯಾರ್ಥಿಗಳೊಂದಿಗೆ ಹಾವು ಅರಿವು – ವನ್ಯಜೀವಿ ಉಳಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಎಲ್ಲಾ ಕಡೆ ಪರಿಸರ ನಾಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಗಿಡನೆಡಬೇಕಾಗಿದೆ. ಆಯುರ್ವೇದ ವಿದ್ಯಾರ್ಥಿಗಳಿಗೆ ಈ ವನ ಪ್ರಾಕ್ಟಿಕಲ್ ಗೆ ಹೇಳಿಮಾಡಿಸಿದಂತೆ ಇದೆ. ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ದಂತೆ ಎಲ್ಲರೂ ಮುಂದೆ ಬಂದು ಉದ್ಯಾನವನಗಳ ಅಭಿವೃದ್ಧಿಗೆ ಮುಂದಾಗಿ ಎಂದರು.
ನಗರಸಭೆ ಆಯುಕ್ತರಾದ ಎಂ. ರೇಣುಕಾ ಮಾತನಾಡಿ,
ಕಾಡಿನ ನಾಶ, ಜಲ ಮಾಲಿನ್ಯ, ಅತಿಯಾದ ಪ್ಲಾಸ್ಟಿಕ್ ಬಳಕೆ, ಹವಾಮಾನ ವೈಪರೀತ್ಯ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪರಿಸರವನ್ನು ಉಳಿಸಿ, ಬೆಳೆಸುವ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಹೊತ್ತಿನಲ್ಲಿ ಪರಿಸರ ಉಳಿಸುವುದು ಬಹಳ ಅವಶ್ಯವಾಗಿರುವ ಕಾರಣ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಬಹಳ ಅರ್ಥಪೂರ್ಣವಾಗಿ ಪರಿಸರ ದಿನವನ್ನು ಆಚರಿಸುವ ಮೂಲಕ ಪರಿಸರ ಉಳಿಸಿ, ಬೆಳಸುವ ಕೆಲಸವನ್ನು ಮಾಡಬಹುದು ಎಂದರು.
ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಚಂದ್ರಕಾಂತ್ ನಾಗಸಮುದ್ರ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್, ರಾಜ್ಯ ಸಂಚಾಲಕರಾದ ಟಿ.ರುದ್ರಮುನಿ, ಕರ್ನಾಟಕ ರಾಜ್ಯ ಗಣಿಭಾದಿತ ಪ್ರದೇಶ ಹೋರಾಟ ಸಮಿತಿ ಅಧ್ಯಕ್ಷರಾದ ರಮೇಶ್ ಬಿ ದುರ್ಗ ಮಾತನಾಡಿದರು.
ಚಿತ್ರದುರ್ಗ ನಗರ ಡಿವೈಎಸ್ ಪಿ ದಿನಕರ್, ಇನ್ಸ್‌ಪೆಕ್ಟರ್ ಉಮೇಶ್ ಬಾಬು, ನಗರಸಭೆ ಸದಸ್ಯರಾದ ಜಯಣ್ಣ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಜಲ ಜಾಗೃತಿ ಉಪಾಧ್ಯಕ್ಷರಾದ ಕೆ. ಓಂಕಾರಪ್ಪ, ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಉಪನ್ಯಾಸಕರಾದ ಬಿ.ಎನ್. ವೀರೇಶ್, ನವೀನ್ ಸಜ್ಜನ್, ವಿದ್ಯಾಗಣಪತಿ ಸೇವಾಸಮಿತಿ ಅಧ್ಯಕ್ಷರಾದ ಲಿಂಗರಾಜ್ ಎಂ, ಪರಿಸರ ಪ್ರೇಮಿಗಳಾದ ಬಸವರಾಜಪ್ಪ, ಪಕೀರಪ್ಪ ರವಿ ಟಿ. ಅಜಯ್ ಸೇರಿದಂತೆ ಇನ್ನೂರಕ್ಕೂ ಅಧಿಕ ಆಯುರ್ವೇದ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ವನ್ಯ ಸಂರಕ್ಷಕ ಸ್ನೇಕ್ ಚೇತನ್ ಮೂರು ಹಾವುಗಳನ್ನು ತಂದು ಪರಿಣಾಮ ಕಾರ್ಯಾಗಾರ ನಡೆಸಿದರು. ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಉಪಾಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಡಾ. ಎಂ.ಸಿ.ನರಹರಿ ಇವರ ಸ್ಮರಣೆಯಲ್ಲಿ ಸಾವಿರದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.






