ಜಿಲ್ಲೆಗೊಂದು ಐಐಟಿ ಮಾದರಿಯಲ್ಲಿ ಇಂಜನಿಯರಿಂಗ್ ಕಾಲೇಜು ಅಭಿವೃದ್ಧಿ ಸಚಿವ ಡಾ. ಅಶ್ವಥ್ ನಾರಾಯಣ

ಬೆಳಗಾವಿ,(ಡಿ.22) :  ಅವಿಷ್ಕಾರ ತಂತ್ರಜ್ಞಾನಕ್ಕೆ ಒತ್ತು ನೀಡುವ ಐಐಟಿ ಮಾದರಿಯಲ್ಲಿ ಜಿಲ್ಲೆಗೊಂದು ಇಂಜನಿಯರಿಂಗ್ ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರು ಮೇಲ್ಮನೆಗೆ ತಿಳಿಸಿದರು.

ವಿಧಾನ ಪರಿಷತ್‍ನಲ್ಲಿಂದು ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ವಿಧೇಯಕ 2021 ರ ಅನುಮೋದನೆ ಪಡೆಯಲಾಯಿತು. ಈ ವಿಧೇಯಕದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು ಸೂಪರ್ 30 ಯೋಜನೆಯಡಿ ರಾಜ್ಯದ 14 ಜಿಲ್ಲೆಗಳ ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಖಾಸಗಿ ಕಾಲೇಜುಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗುವುದು. ಒಟ್ಟಾರೆ 30 ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಉನ್ನತೀಕರಿಸಲಾಗುವುದು ಎಂದು ತಿಳಿಸಿದರು.

ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅತ್ಯುನ್ನತ ತಾಂತ್ರಿಕ ವಿ.ವಿ. ಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ಈ ಕುರಿತಂತೆ ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಚರ್ಚಿಸಲಾಗಿದೆ.  ಒಂದು ತಿಂಗಳೊಳಗಾಗಿ ವಿ.ವಿ.ಯ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇಂಜನಿಯರಿಂಗ್ ಕಾಲೇಜುಗಳಲ್ಲಿ ಖಾಲಿಯಿರುವ ಅಧ್ಯಾಪಕರ ಹುದ್ದೆ ಭರ್ತಿಗಾಗಿ ಸಮಿತಿಯನ್ನು ರಚಿಸಲಾಗಿದೆ. ಪ್ರಸ್ತುತ ವಿಷಯಕ್ಕೆ ತಕ್ಕಂತೆ ಅಧ್ಯಾಪಕರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ತಿಳಿಸಿದರು.

ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜನ್ನು ಸ್ವಾಯತ್ತ ಸಂಸ್ಥೆಯಾಗಿ ಐಐಟಿ ಮಾದರಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಅತ್ಯುನ್ನತ ಅವಿಷ್ಕಾರ ತಂತ್ರಜ್ಞಾನದ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಅಭಿವೃದ್ಧಿಪಡಿಸಲಾಗುವುದು. ಕರ್ನಾಟಕ ರಾಜ್ಯದ ಶೇ. 75ರಷ್ಟು ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಚರ್ಚೆಯಲ್ಲಿ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ, ಸದಸ್ಯರಾದ ಮರಿತಿಬ್ಬೇಗೌಡ, ತಿಪ್ಪೇಸ್ವಾಮಿ, ಸಿ.ಎಂ. ಲಿಂಗಪ್ಪ, ಅಪ್ಪಾಜಿಗೌಡ, ಪ್ರಕಾಶ ರಾಠೋಡ, ಡಾ. ತೇಜಸ್ವಿನಿಗೌಡ, ಸಿ.ಎಂ. ಇಬ್ರಾಹಿಂ, ಕವಟಗಿಮಠ, ಡಾ. ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಇತರರು ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಶೇ. 100 ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಕಾಯ್ದಿರಿಸಬೇಕು. ಕನಿಷ್ಠ 100 ಕೋಟಿ ರೂ.ಗಳನ್ನು ವಿ.ವಿ.ಯ ಅಭಿವೃದ್ಧಿಗೆ ಬಳಸಬೇಕು. ಬೆಂಗಳೂರಿನಲ್ಲಿ ಈಗಿರುವ ಇಂಜನಿಯರಿಂಗ್ ಕಾಲೇಜನ್ನು ಪಾರಂಪರಿಕ  ಕಟ್ಟಡವಾಗಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ನೂತನ ಕಟ್ಟಡ ನಿರ್ಮಾಣಕ್ಕೆ ಜ್ಞಾನಭಾರತಿಯಲ್ಲಿ 50 ಎಕರೆ ಜಮೀನು ಕಾಯ್ದಿರಿಸಲು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!