ಬೆಂಗಳೂರು: ಎಂಇಎಸ್ ಪುಂಡರ ಪುಂಡಾಟಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಎಂಇಎಸ್ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಇದೀಗ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡ ಈ ಮರಾಠ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮರಾಠ ಮಂಡಳಿಯನ್ನ ತಡೆಹಿಡಿಯಬೇಕು ಎಂದಿದ್ದಾರೆ. ನಾನೇನು ಮರಾಠರ ವಿರೋಧಿಯಲ್ಲ. ಆದರೆ ನಮ್ಮ ಬಾವುಟವನ್ನ ಸುಡುವುದು ಸರಿಯಲ್ಲ. ನಾವೂ ಬಿಡಿಬಿಡಿಯಾಗಿ ಹೋರಾಟ ಮಾಡುವ ಬದಲು ಒಗ್ಗಟ್ಟಾಗಿ ಹೋರಾಡಬೇಕು. ಇಡೀ ಚಿತ್ರರಂಗ ಬೆಳಗಾವಿಗೆ ತೆರಳಿ ಹೋರಾಟ ನಡೆಸಬೇಕು.
ಸರ್ಕಾರ ಮೀನಾಮೇಷ ಮಾಡದೆ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಧ್ವಜಕ್ಕೆ ಅವಮಾನ ಮಾಡಿದರೆ ದೇಶಕ್ಕೆ ಅವಮಾನ ಮಾಡಿದಂತೆ. ಎಲ್ಲರು ಒಗ್ಗಟ್ಟಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.