ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.16): ಬ್ಯಾಂಕುಗಳ ಖಾಸಗೀಕರಣ, ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ನೌಕರರ ಹೆಚ್ಚಳ, ಕೆಲವು ಉದ್ಯಮಿಗಳಿಗೆ ನೀಡಿರುವ ಸಾಲ ಮರುಪಾವತಿಗೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಪ್ಲಾಯ್ಸಿ ಹಾಗೂ ಇತರೆ ಬ್ಯಾಂಕ್‍ಗಳ ಸಿಬ್ಬಂದಿ ಗುರುವಾರ ಎಸ್.ಬಿ.ಐ.ಎದುರು ಮುಷ್ಕರ ನಡೆಸಿದರು.
ಎರಡು ದಿನಗಳ ಈ ಮುಷ್ಕರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪಾಲ್ಗೊಂಡು ಬ್ಯಾಂಕ್ ಸಿಬ್ಬಂದಿಗಳಿಗೆ ಬೆಂಬಲ ಸೂಚಿಸಿತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಬ್ಯಾಂಕ್ ಮತ್ತು ರೈತರ ನಡುವೆ ಅವಿನಾಭಾವ ಸಂಬಂಧವಿದೆ. ಏಕೆಂದರೆ ಕೃಷಿಗಾಗಿ ರೈತರು ಬ್ಯಾಂಕ್‍ಗಳಲ್ಲಿಯೇ ಸಾಲ ಪಡೆಯಬೇಕು. ಕೇಂದ್ರ ಸರ್ಕಾರ ಎಲ್ಲವನ್ನು ಖಾಸಗಿಕರಣಗೊಳಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರ ಪರಿಣಾಮವಾಗಿ ಹದಿನೈದು ತಿಂಗಳ ಕಾಲ ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ನಡೆಸಿದ ಚಳುವಳಿಗೆ ಮಣಿದ ಪ್ರಧಾನಿ ಮೋದಿ ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆದರು. ಹಾಗಾಗಿ ನಿಮ್ಮಗಳ ಜೊತೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಬ್ಯಾಂಕ್‍ಗಳು ಖಾಸಗಿರಕರಣವಾಗಲು ಬಿಡುವುದಿಲ್ಲ ಎಂದು ಬ್ಯಾಂಕ್ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ ಒಂದೊಂದಾಗಿ ಎಲ್ಲವನ್ನು ಖಾಸಗಿಕರಣಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರ ಎಲ್ಲವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹೊರಟಿದೆ. ಬ್ಯಾಂಕ್ ಸಿಬ್ಬಂದಿಗಳೆಂದರೆ ಕೈತುಂಬಾ ಸಂಬಳ ತೆಗೆದುಕೊಂಡು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆಂದು ನಾವುಗಳು ಅಂದುಕೊಂಡಿದ್ದೆವು. ಆದರೆ ನಿಮ್ಮಗಳ ಒತ್ತಡ, ಇನ್ನಿತರೆ ಸಮಸ್ಯೆಗಳನ್ನು ನೋಡಿದಾಗ ಬ್ಯಾಂಕ್‍ಗಳು ಖಾಸಗಿಕರಣವಾಗಬಾರದೆಂದೆನಿಸುತ್ತದೆ. ಅದಕ್ಕಾಗಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಪ್ಲಾಯ್ಸಿ ಅಸೋಸಿಯೇಷನ್‍ನ ಸಿ.ಅಂಜಿನಪ್ಪ, ಎಸ್.ಶಂಕರಪ್ಪ, ಹರೀಶ್‍ಬಾಬುರೆಡ್ಡಿ, ಮಹೇಶ್, ಜಮೀಲ್, ಭವೀನ, ಯೋಗೇಶ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್, ಎಸ್.ಬಿ.ಐ, ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.