ಬೆಂಗಳೂರು; ರಾಜ್ಯದಲ್ಲಿ ಸದ್ಯಕ್ಕೆ ಜಾತಿ ಗಣತಿ ವರದಿಯ ವಿಚಾರವೇ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ವಿರೋಧ ಪಕ್ಷದ ನಾಯಕರು ಮೂಲಪ್ರತಿಯೇ ಕಳೆದುಹೋಗಿದೆ ಎಂದು ಆರೋಪ ಮಾಡಿದ್ದಾರೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮೂಲಪ್ರತಿ ಸಿದ್ದರಾಮಯ್ಯ ಅವರ ಬಳಿಯೇ ಇದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಶೋಕ್ ಅವರು ಎಂದಾದರೂ ಸತ್ಯವನ್ನ ಹೇಳಿದ್ದಾರಾ..? ಮೂಲ ಪ್ರತಿ ನನ್ನ ಬಳಿ ಇರುವುದಕ್ಕೆ ಹೇಗೆ ಸಾಧ್ಯ..? ರಾಹುಲ್ ಗಾಂಧಿಯಾವರಿಗೆ ನಾನು ಯಾವುದೇ ಪತ್ರ ಬರೆದಿಲ್ಲ. ಆದರೆ ಅವರ ಜೊತೆಗೆ ಚರ್ಚೆ ಮಾಡಿನೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಯಾರೂ ಕೂಡ ಈ ಬಗ್ಗೆ ಜೋರಾಗಿ ಮಾತನಾಡಿಲ್ಲ. ಸಮೀಕ್ಷೆಯನ್ನು ಸರಿಯಾಗಿ ಓದಿಕೊಂಡು ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗಿದೆ.
ಸಚಿವರು ಅಭಿಪ್ರಾಯ ತಿಳಿಸಿದ ನಂತರ ಮತ್ತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಯಾವ ಜಾತಿಗೂ ಅನ್ಯಾಯವಾಗಬಾರದು ಎನ್ನುವುದು ನಮ್ಮ ಸರ್ಕಾರದ ಉದ್ದೇಶ. ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ. ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿದ್ದರೂ ಬಡವ ಬಡವನಾಗಿಯೇ ಉಳಿಯಬೇಕೆ? ಸಮಾನತೆ ಬೇಡವೇ, ಜಾತಿಗೆ ಅಂಟಿಕೊಂಡೇ ಇರಬೇಕೆ? ಹಿಂದುಳಿದವರಿಗೆ, ಮುಸ್ಲಿಂಮರಿಗೆ ಮಾತ್ರವಲ್ಲದೆ ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು, ಸಾಮಾಜಿಕ ಆರ್ಥಿಕ ಶಕ್ತಿ ತುಂಬಬೇಕು. ಇದೇ ನಮ್ಮ ಗುರಿ. ಇದು ಸಾಮಾಜಿಕ, ಶೈಕ್ಷಣಿಕ ಗಣತಿಯ ಆಶಯ ಎಂದು ಹೇಳಿದ್ದಾರೆ.
