ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17 : ಜೆಎಂಐಟಿ ಬಳಿ ಸ್ಕೈವಾಕ್ ಅಗತ್ಯವಿದ್ದು, ಈ ತಿಂಗಳಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಿ, ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ಅವರು ಮಾತನಾಡಿ, ನಗರದ ಜೆಎಂಐಟಿ ಬಳಿ ವಿದ್ಯಾರ್ಥಿಗಳು ಹೆದ್ದಾರಿ ಇಕ್ಕೆಲಗಳ ಮೆಶ್ ಅನ್ನು ಡ್ಯಾಮೇಜ್ ಮಾಡಿ, ಆ ಮೂಲಕ ರಸ್ತೆ ದಾಟಿ ಓಡಾಡುತ್ತಿದ್ದಾರೆ. ಹಲವು ಬಾರಿ ಇಲ್ಲಿ ಅಪಘಾತಗಳಾಗುತ್ತಿವೆ. ಹಾಗಾಗಿ ಇಲ್ಲಿ ಸ್ಕೈವಾಕ್ ಅಗತ್ಯವಿದ್ದು, ಸ್ಕೈವಾಕ್ಗೆ ಅನುಮತಿ ನೀಡಬೇಕು ಎಂದು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆಳಗೋಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ವೇಗ ಕಡಿತಗೊಳಿಸಲು ರಂಬಲ್ ಸ್ಟ್ರಿಪ್ಸ್, ಬ್ಲಿಂಕರ್ಸ್, ಲೈಟಿಂಗ್ ವ್ಯವಸ್ಥೆ ಮಾಡಬೇಕು. ಗಾಂಧಿ ವೃತ್ತದಿಂದ ಕೆಎಸ್ಆರ್ಟಿಸಿ ಮಾರ್ಗದ ರಸ್ತೆಯಲ್ಲಿ ಡಿವೈಡರ್ ತೆರವುಗೊಳಿಸಿದ ಬಳಿಕ ರಸ್ತೆಯನ್ನು ಸರಿಯಾದ ರೀತಿಯಲ್ಲಿ ದುರಸ್ತಿ ಮಾಡಿಲ್ಲ, ಕಬ್ಬಿಣದ ಸರಳುಗಳು ರಸ್ತೆಯ ಮೇಲೆಯೇ ಕಾಣುತ್ತಿದ್ದು, ಅಪಾಯಕಾರಿಯಾಗಿವೆ, ರಸ್ತೆ ಒಂದು ಕಡೆ ಎತ್ತರ, ಇನ್ನೊಂದೆಡೆ ತಗ್ಗಾಗಿದ್ದು, ವಾಹನ ಚಾಲನೆಗೆ ತೊಂದರೆಯಾಗಿ ಅಪಘಾತವಾಗುವ ಸಂಭವವಿದೆ. ಕೂಡಲೆ ನಗರದಲ್ಲಿ ಎಲ್ಲೆಲ್ಲಿ ಡಿವೈಡರ್ಗಳನ್ನು ತೆರವುಗೊಳಿಸಲಾಗಿದೆಯೇ ಅಲ್ಲಿ, ರಸ್ತೆ ಹಾಗೂ ಡಿವೈಡರ್ ಸರಿಪಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.






