ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಶೀಘ್ರದಲ್ಲಿ ಘೋಷಣೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೂಚನೆ

suddionenews
2 Min Read

ಚಿತ್ರದುರ್ಗ, (ಸೆಪ್ಟೆಂಬರ್.09) : ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನಾ ಸಭೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯು ಕಾಮಗಾರಿಯು ಬಹಳ ವರ್ಷಗಳಿಂದ ನಡೆಯುತ್ತಿದೆ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ನೀರಾವರಿ ಸಚಿವರು ಬದಲಾವಣೆಯಾದರೂ ಸಹ ಭದ್ರಾ ಮೇಲ್ದಂಡೆ ಯೋಜನೆ ಮಾತ್ರ ಪೂರ್ಣಗೊಳ್ಳುತ್ತಿಲ್ಲ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ ಕಾಮಗಾರಿಗು ಸುಸೂತ್ರವಾಗಿ ಪೂರ್ಣಗೊಳ್ಳಲು ಸಾಧ್ಯ ಎಂದು ಹೇಳಿದರು.

ಅಧಿಕಾರಿಗಳು ಕೆಲಸಕ್ಕೆ ಬಂದು ಹೋಗುವುದಕ್ಕೆ ಮಾತ್ರ ಸೀಮಿತವಾಗದೇ ಸಮಾಜದ ಏಳಿಗೆಗೆ ಏನಾದರೂ ಕೊಡುಗೆ ನೀಡಬೇಕು. ಅಧಿಕಾರಿಗಳು ಸಮಾಜಕ್ಕೆ ಬದ್ಧತೆಯನ್ನಿಟ್ಟುಕೊಂಡು ಜೀವನ ನಡೆಸಬೇಕು. ಬದ್ಧತೆ ಇಲ್ಲದ ವ್ಯಕ್ತಿಗಳನ್ನು ನಾನು ಸಹಿಸುವುದಿಲ್ಲ. ಇನ್ನೂ ಮುಂದೆ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಫ್ಲೋರೆಡ್‍ಯುಕ್ತ ನೀರು ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ಮೇಲೆ ನೀರಿಗೆ ಸಂಬಂಧಿಸಿದ ಖಾಯಿಲೆಗಳು ಹೆಚ್ಚಾಗುತ್ತಿವೆ. ನೀರು ನಮ್ಮ ದೇಹದ ಮೇಲೆ ತುಂಬಾ  ಪರಿಣಾಮ ಬೀರುತ್ತಿವೆ. ಬಹುತೇಕ ಖಾಯಿಲೆಗಳು  ನೀರಿನಿಂದಲೇ ಬರುತ್ತವೆ. ಒಂದು ಕಡೆ ಮನುಷ್ಯನ ದೇಹದ ಮೇಲೆ ನೀರು ಪರಿಣಾಮ ಬೀರಿದರೆ, ಮನುಷ್ಯನ ಬದುಕಿಗೆ, ಆ ದೇಶದ ಅರ್ಥಿಕ ಭವಿಷ್ಯತ್ತಿಗೆ ನೀರಾವರಿ ತುಂಬಾ ಮುಖ್ಯವಾದುದಾಗಿದೆ ಎಂದು ಹೇಳಿದರು.

ಪ್ಯಾಕೇಜ್01 ಮಾರ್ಚ್‍ಗೆ ಪೂರ್ಣ:
ತುಂಗಾನದಿಯಿಂದ 17.40 ಟಿಎಂಸಿ ನೀರನ್ನು ಎತ್ತಿ ಭದ್ರಾ ಜಲಾಶಯಕ್ಕೆ ಹರಿಸುವ ಕಾಮಗಾರಿಯು ಮುಂಬರುವ ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಯ ಪ್ಯಾಕೇಜ್ 1 ಕಾಮಗಾರಿಯು ಬಹಳ ಪ್ರಮುಖವಾಗಿದ್ದು, ತುಂಗಾನದಿಯಿಂದ ಭದ್ರಾ ನದಿಯವರೆಗೂ ಎಲ್ಲ ಕ್ಲಿಯರೆನ್ಸ್ ಆಗಿದ್ದು, ಅರಣ್ಯದಲ್ಲಿ ಗಿಡ ತೆಗೆಯುವುದು ಸೇರಿದಂತೆ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಫೆಬ್ರವರಿಯೊಳಗೆ ಭೂಸ್ವಾಧೀನ:
ಭದ್ರಾ ಮೇಲ್ದಂಡೆ ಯೋಜನೆಗಾಗಿ ಒಟ್ಟು 7012 ಎಕರೆ ಜಮೀನು ಭೂಸ್ವಾಧೀನದ ಅವಶ್ಯಕತೆ ಇದ್ದು, ಈಗಾಗಲೇ 3500 ಎಕರೆ ಭೂಸ್ವಾಧೀನವಾಗಿದೆ. ಉಳಿದ 3512 ಎಕರೆ ಜಮೀನು ಭೂಸ್ವಾಧೀನ ಬಾಕಿ ಇದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಅರಣ್ಯ ಭೂಮಿ ಹೊರತುಪಡಿಸಿ ಉಳಿದಂತೆ ಎಲ್ಲ ಆವಾರ್ಡ್ ಹಂತಕ್ಕೆ ಹೋಗಿದೆ. ಅಬ್ಬಿನಹೊಳೆ ಹೊರತು ಪಡಿಸಿ ಎಲ್ಲಿಯೂ ಭೂಸ್ವಾಧೀನದ ಸಮಸ್ಯೆ ಇಲ್ಲ. ಮುಂಬರುವ ಜನವರಿ-ಫೆಬ್ರವರಿಯೊಳಗೆ ಭೂಸ್ವಾಧೀನ ಸಮಸ್ಯೆ ಬಗೆಹರಿಯಲಿದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಇದುವರೆಗೆ ರೂ.4800 ಕೋಟಿ ಖರ್ಚಾಗಿದೆ. ಭೂಸ್ವಾಧೀನಕ್ಕಾಗಿ ಅನುದಾನದ ಸಮಸ್ಯೆ ಇಲ್ಲ ಎಂದು ಹೇಳಿದರು.

ರಾಷ್ಟ್ರೀಯ ಯೋಜನೆ ಘೋಷಣೆ ಶೀಘ್ರ:
ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಶೀಘ್ರದಲ್ಲಿ ಘೋಷಣೆಯಾಗಲಿದೆ.

ರಾಷ್ಟ್ರೀಯ ಯೋಜನೆಯಾಗಿಸಲು ಹೈಪರ್ ಕಮಿಟಿ ಆಗಿದೆ. ಈಗ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡುವುದು ಬಾಕಿ ಇದೆ. ಶೀಘ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಭದ್ರಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಅಧಿಕಾರಿಗಳು, ಇಂಜಿನಿಯರ್‍ಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *