ಚಿತ್ರದುರ್ಗ : ರಾಜ್ಯ ಸರ್ಕಾರದ ಅಬಕಾರಿ ನೀತಿ ವಿರೋಧಿಸಿ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 04 : ರಾಜ್ಯ ಸರ್ಕಾರದ ಅಬಕಾರಿ ನೀತಿಯನ್ನು ವಿರೋಧಿಸಿ ಶುಕ್ರವಾರದಂದು ಜಿಲ್ಲೆಯ ಮದ್ಯ ಮಾರಾಟಗಾರರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ್ದ ಜಿಲ್ಲೆಯ ನೂರಾರು ಮಂದಿ ಮದ್ಯ ಮಾರಾಟಗಾರರು, ರಾಜ್ಯ ಸರ್ಕಾರ ಅನುಸರಿಸುತ್ತಿರುವ ಅಬಕಾರಿ ನೀತಿಯ ವಿರುದ್ದ ತೀವ್ರ ಆಕ್ರೊಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಬಕಾರಿ ಉದ್ಯಮ ನಡೆಸುತ್ತಿರುವವರು ತೀವ್ರ ಸಂಕಷ್ಟದ ಪರಿಸ್ಥತಿಯನ್ನು ಎದುರಿಸುತ್ತಿದ್ದಾರೆ. ಕಳೆದ ದಶಕಗಳಿಂದಲೂ ಇದೇ ಪರಿಸ್ಥಿತಿ ಮುಂದುವರೆದಿದ್ದು, ಇವರ ನೋವು ಯಾರಿಗೂ ಕೇಳಿಸುತ್ತಿಲ್ಲ. ಸರ್ಕಾರಗಳು ಈ ವರ್ಗದ ಜನರ ನೋವಿಗೆ ಸ್ಪಂದಿಸುತ್ತಿಲ್ಲವೆಂದು ಕಿಡಿಕಾರಿದರು.

ಒಂದು  ರಾಜ್ಯದ ಅಭಿವೃದ್ದಿಯಲ್ಲಿ ಈ ಉದ್ಯಮದ ಪಾಲು ಬಹಳಷ್ಟು ಇದೆ. ಪ್ರತಿವರ್ಷವೂ ಸಾವಿರಾರು ಕೋಟಿ ರೂಪಾಯಿ ಆದಾಯ ಸರ್ಕಾರಕ್ಕೆ ಇದರಿಂದ ಬರುತ್ತಿದೆ. ಹೀಗಿದ್ದರೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರಗಳು ನಿರ್ಲಕ್ಷ ಭಾವ ತೋರುತ್ತಲೇ ಬಂದಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ ಕಳೆದ ದಶಕಳಿಂದ ನಮ್ಮ ಯಾವುದೇ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ತಾನೇ ರೂಪಿಸಿರುವ ನಿಯಮಾವಳಿಗಳನ್ನು ಪಾಲನೆ ಮಾಡುತ್ತಿಲ್ಲವೆಂದು ಆರೋಪಿಸಿದರು.

ಕಳೆದ ಹಲವು ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ನಮ್ಮ ನೋವು, ಅನಾನುಕೂಲ, ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ಸರ್ಕಾರದ ಅಬಕಾರಿ ನೀತಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಜೊತೆಗೆ ಬಜೆಟ್‍ನಲ್ಲಿ ಈ ಉದ್ಮಮಕ್ಕೆ ಪೂರಕವಾಗಿರುವ ಅಂಶಗಳನ್ನಾದರೂ ಸೇರಿಸಿಲ್ಲವೆಂದು ಜಿ.ಟಿ.ಬಾಬುರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಮದ್ಯ ಮಾರಾಟಗಾರರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸವಾಲುಗಳನ್ನು ಎದುರಿಸಿಯೇ ಉದ್ಯಮವನ್ನು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ನೋವು, ಸಮಸ್ಯೆಗಳನ್ನು ಹಲವು ಬಾರಿ ಸರ್ಕಾರದ ಮುಖ್ಯಸ್ಥರುನ್ನು ಬೇಟಿ ಮಾಡಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದರು.

ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಟ ಶೇಕಡ 20ರಷ್ಟು ಲಾಭಾಂಶವನ್ನು ನೀಡಬೇಕು, ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು, ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು, ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಆಗುತ್ತಿರುವ ಅನಗತ್ಯ ಕಿರುಕುಳವನ್ನು ತಡೆಯಬೇಕು. ಅಬಕಾರಿ ಉದ್ಯಮ ಬೆಳೆಯಲು ಪೂರಕವಾದ ನೀತಿ, ನಿಯಮಾವಳಿಗಳನ್ನು ರೂಪಿಸಬೇಕು ಎಂಬುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಐಶ್ವರ್ಯ ಗ್ರೂಪ್‍ನ ಅರುಣ್‍ಕುಮಾರ್, ಕಿರಣ್‍ಕುಮಾರ್, ದುರ್ಗದ ಸಿರಿಯ ಹನುಮಂತರೆಡ್ಡಿ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜೀವನ್, ಮದ್ಯ ಮಾರಾಟಗಾರರ ಸಂಘದ ಹಿರಿಯೂರು ತಾಲ್ಲೂಕು ಅಧ್ಯಕ್ಷ ವೆಂಕಟಸ್ವಾಮಿ, ಚಳ್ಳಕೆರೆ ತಾಲ್ಲೂಕು ಸಂಘದ ಅಧ್ಯಕ್ಷ ಪ್ರಕಾಶ್, ಹೊಸದುರ್ಗದ ಮಂಜುನಾಥ್, ಮೊಳಕಾಲ್ಮೂರಿನ ಗುರುಲಿಂಗಪ್ಪ, ಹೊಳಲ್ಕೆರೆಯ ತಿಪ್ಪೇಸ್ವಾಮಿ ಸೇರಿದಂತೆ ಚಿತ್ರದುರ್ಗ ಮತ್ತು ಜಿಲ್ಲೆಯ ವಿವಿಧ ತಾಲ್ಲಕುಗಳಿಂದ ಹಲವಾರು ಮದ್ಯ ಮಾರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಸಮಿತಿ ಸಭೆ;
ಪ್ರತಿಭಟನೆಯ ಬಳಿಕ ಚಿತ್ರದುರ್ಗದ ದುರ್ಗದ ಸಿರಿ ಹೊಟೇಲ್ ಸಬಾಂಗಣದಲ್ಲಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಸಭೆ ನಡೆಯಿತು.

ಸಂಘದ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಪ್ರಮುಖ ಮದ್ಯ ಮಾರಾಟಗಾರರು ಪಾಲ್ಗೊಂಡು ಕೆಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದರು.

 

Share This Article
Leave a Comment

Leave a Reply

Your email address will not be published. Required fields are marked *