ಬೆಂಗಳೂರು; ಯಡಿಯೂರಪ್ಪ ಅವರ ವಿರುದ್ಧ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಸದಾ ಕಾಲ ಆಕ್ರೋಶ ಹೊರ ಹಾಕುತ್ತಿದ್ದ ಶಾಸಕ ಯತ್ನಾಳ್ ಅವರನ್ನ ಬಿಜೆಪಿ ಉಚ್ಛಾಟನೆ ಮಾಡಿದೆ. ಯತ್ನಾಳ್ ಜೊತೆಗೇನೆ ಗುರುತಿಸಿಕೊಂಡಿದ್ದರು ಶ್ರೀರಾಮುಲು. ಇದೀಗ ಯತ್ನಾಳ್ ಅವರ ಉಚ್ಛಾಟನೆ ಬಳಿಕ ಶ್ರೀರಾಮುಲು ಬದಲಾಗಿದ್ದಾರೆ ಎನ್ನಲಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿ, ಶುಭಕೋರಿದ್ದಾರೆ.

ಶ್ರೀರಾಮುಲು ಕೂಡ ವಿಜಯೇಂದ್ರ ಅವರ ವಿರುದ್ಧವೇ ಮಾತನಾಡಿದ್ದರು. ಕೇವಲ ಒಂದು ತಿಂಗಳ ಹಿಂದಷ್ಟೇ ವಿಜಯೇಂದ್ರಗೆ ಅನುಭವ ಸಾಲದು ಎಂಬ ಮಾತುಗಳನ್ನ ಆಡಿದ್ದರು. ಅಷ್ಟೇ ಅಲ್ಲ ಬಿಜೆಪು ರಾಜ್ಯಾಧ್ಯಕ್ಷ ಹುದ್ದೆಯ ರೇಸ್ ನಲ್ಲಿಯೂ ಇದ್ದರು. ಈಗ ದಿಢೀರನೇ ವರಸೆ ಬದಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ಹಲವರು ಒಂದೆಡೆ ಸೇರಿದ್ದರು. ಅದರಲ್ಲಿ ಶಾಸಕ ಯತ್ನಾಳದ, ಕುಮಾರ ಬಂಗಾರಪ್ಪ, ಬಿಪಿ ಹರೀಶ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಬಳಿಕ ಸೇರ್ಪಡೆಯಾದವರೆ ಶ್ರೀರಾಮುಲು.

ಯಾವಾಗ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದರೋ ವರಸೆ ಬದಲಿಸಿದಂತೆ ಕಾಣಿಸುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಶ್ರೀರಾಮುಲು ಫೋಟೋ ಒಂದನ್ನ ಹಂಚಿಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಶನ್ ಕೂಡ ನೀಡಿದ್ದು, ‘ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಹಿರಿಯರು, ಹುಟ್ಟು ಹೋರಾಟಗಾರರಾದಂತಹ ಯಡಿಯೂರಪ್ಪ ಜೀ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರ ಜೊತೆಗೆ ಭೇಟಿ ಮಾಡಿ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದೆ. ಈ ವೇಳೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಪಕ್ಷ ಸಂಘಟನೆಯ ಬಗ್ಗೆ ಹಲವು ವಿಚಾರಗಳ ಚರ್ಚೆ ಮಾಡಲಾಯ್ತು’ ಎಂದು ಬರೆದುಕೊಂಡಿದ್ದಾರೆ.

