ಬೆಂಗಳೂರು; ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ದೊಡ್ಡ ಕನಸಿರುತ್ತದೆ. ಪೋಷಕರ ಆಸೆಯಂತೆ ಮಕ್ಕಳು ನಡೆದುಕೊಳ್ಳುವುದು ಸಾಮಾನ್ಯ. ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗೆ ಇಸ್ರೋ ಸಂಸ್ಥೆ ದೊಡ್ಡ ಅವಕಾಶವೊಂದನ್ನ ನೀಡಿದೆ. ಈ ಸುದ್ದಿ ಓದಿ ಇದರ ಸದುಪಯೋಗ ಪಡೆದುಕೊಳ್ಳಬಹುದು.

ಇಸ್ರೋ ಸಂಸ್ಥೆಯು ಯುವ ವಿಜ್ಞಾನಿ ಕಾರ್ಯಕ್ರಮ, ಯುವಿಕಾ 2025ರ ಮೂಲಕ ಮಕ್ಕಳ ಕನಸ್ಸನ್ನ ಪೂರ್ತಿ ಮಾಡುವುದಕ್ಕೆ ಹೊರಟಿದೆ. ಈಗಾಗಲೇ ನೋಂದಣಿ ಕೂಡ ಆರಂಭವಾಗಿದೆ. ಈ ಕಾರ್ಯಕ್ರಮದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸಲು ಅವಕಾಶ ನೀಡಲಿದೆ. ಹೀಗಾಗಿ ಆಸಕ್ತಿ ಇರುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಪ್ರಸ್ತುತ 9ನೇ ತರಗತಿಯಲ್ಲಿರುವ ಮಕ್ಕಳಿಗಾಗಿ ವಿನ್ಯಾಸಗೊಳಿಸಿರುವ ಕಾರ್ಯಕ್ರಮ ಇದಾಗಿದೆ. ಭವಿಷ್ಯದಲ್ಲಿ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ವೃತ್ತಿಜೀವನವನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಇಸ್ರೋದ ಧ್ಯೇಯದ ಭಾಗವಾಗಿದೆ.

ಬೇರೆ ಜಿಲ್ಲೆಯ ವಿದ್ಯಾರ್ಥಿಗಳ ಗಮನಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಮಕ್ಕಳಿಗೆ ಊಟ, ವಸತಿ, ಅಧ್ಯಯನ ಸಾಮಾಗ್ರಿಗಳು ಸೇರಿದಂತೆ ಎಲ್ಲಾ ಸೌಲಭ್ಯವನ್ನು ಒದಗಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು, ಭಾರತದಾದ್ಯಂತ ಯಾವುದೇ ಶಾಲೆಯಲ್ಲಿ ಜನವರಿ 1, 2025ರ ಸಾಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ರಿಜಿಸ್ಟರ್ ಮಾಡಿಕೊಳ್ಳಬಹುದು. ಆಯ್ಕೆಯು ಶೈಕ್ಷಣಿಕ ಸಾಧನೆ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಆಧರಿಸಿರುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ನೋಂದಣಿಗಳು ಫೆಬ್ರವರಿ 24, 2025ರಂದು ಪ್ರಾರಂಭವಾಗಿದ್ದು ಮಾರ್ಚ್ 23, 2025ರಂದು ಮುಕ್ತಾಯಗೊಳ್ಳುತ್ತವೆ. ಮೊದಲ ಆಯ್ಕೆ ಪಟ್ಟಿಯನ್ನು ಏಪ್ರಿಲ್ 7, 2025ರಂದು ಬಿಡುಗಡೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ಮೇ 18, 2025ರಂದು ಇಸ್ರೋ ಕೇಂದ್ರಗಳಿಗೆ ವರದಿ ಮಾಡಬೇಕು. ಇಸ್ರೋದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಯೂ ಅದೇ ವೆಬ್ಸೈಟ್ ನಲ್ಲಿ ಸಿಗಲಿದೆ.

