ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 13 : ಇತ್ತೀಚೆಗೆ ನಿಧನ ಹೊಂದಿದ ಕಾಂಗ್ರೆಸ್ ಎಸ್ಸಿ ವಿಭಾಗದ ಉಪಾಧ್ಯಕ್ಷ ಪಿಳ್ಳೇಕೆರನಹಳ್ಳಿಯ ಡಿ. ಕುಮಾರ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಜಯಣ್ಣ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ ಚಿಕ್ಕ ವಯಸ್ಸಿಗೆ ನಿಧನ ಹೊಂದಿರುವುದು ಕುಟುಂಬಕ್ಕೆ ಆಘಾತವಾಗಿದೆ. ಸಾವು ಯಾವಾಗ ಬರುತ್ತದೋ ಗೊತ್ತಿಲ್ಲ. ಅವರ ಕುಟುಂಬಕ್ಕೆ ವಸತಿ ವ್ಯವಸ್ಥೆ ಕಲ್ಪಿಸುವುದು ಅತ್ಯವಶ್ಯಕ. ಎಲ್ಲರೂ ಸೇರಿಕೊಂಡು ನೆರವು ನೀಡೋಣ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ನಿಷ್ಟಾವಂತ ಪದಾಧಿಕಾರಿಯಾಗಿದ್ದ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದ. ಆರ್ಥಿಕವಾಗಿ ಸಂಕಷ್ಟದಲ್ಲಿ ಜೀವಿಸುತ್ತಿದ್ದ ಡಿ.ಕುಮಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿರವರು ಭೇಟಿ ನೀಡಿ ಆಶ್ರಯ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಮಕ್ಕಳ ಶಿಕ್ಷಣ ಹಾಗೂ ಕುಟುಂಬಕ್ಕೆ ಎಲ್ಲರೂ ಸೇರಿ ನೆರವು ನೀಡೋಣ ಎಂದರು.
ಉಪಾಧ್ಯಕ್ಷ ಜಮೀರ್ ಮಾತನಾಡುತ್ತ ಹುಟ್ಟು-ಸಾವು ಸಹಜ. ಇವೆರಡರ ನಡುವೆ ಜನರ ಮನದಲ್ಲಿ ಉಳಿಯುವಂತೆ ಬದುಕುವುದು ಮುಖ್ಯ. ಕಷ್ಟದ ಜೀವನ ನಡೆಸುತ್ತಿದ್ದ ಡಿ.ಕುಮಾರ್ ಕುಟುಂಬಕ್ಕೆ ನೆರವು ಒದಗಿಸಿ ಮಾನವೀಯತೆ ಮೆರೆಬೇಕಾಗಿರುವುದರಿಂದ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವ ಗುಣವಿಟ್ಟುಕೊಂಡಿದ್ದ ಡಿ.ಕುಮಾರ್ ಇಷ್ಟು ಬೇಗನೆ ಎಲ್ಲರನ್ನು ಅಗಲುತ್ತಾನೆಂದು ಯಾರು ಅಂದುಕೊಂಡಿರಲಿಲ್ಲ. ನಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಬಳಿ ಎಲ್ಲರೂ ಹೋಗಿ ಅವರ ಕುಟುಂಬಕ್ಕೆ ನೆರವು ಕಲ್ಪಿಸುವಂತೆ ವಿನಂತಿಸೋಣ ಎಂದರು.
ಕಾಂಗ್ರೆಸ್ ಎಸ್ಸಿ. ಸೆಲ್ ವಿಭಾಗದ ರಾಜ್ಯ ಸಂಚಾಲಕ ರಮೇಶ್ ಕೋಟಿ ಮಾತನಾಡುತ್ತ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ ಅಕಾಲಿಕ ನಿಧನ ಹೊಂದಿರುವುದು ಪಕ್ಷಕ್ಕೆ ನಷ್ಟವುಂಟಾಗಿದೆ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯರವರ ಬಳಿ ಮಾತನಾಡಿ ಅವರ ಕುಟುಂಬಕ್ಕೆ ನೆರವು ಒದಗಿಸುವುದಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಮಾತನಾಡುತ್ತ ಸ್ವಂತ ಮನೆಯೂ ಇಲ್ಲದೆ ವಾಸಿಸುತ್ತಿದ್ದ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ ಸಾವಿನ ಬಗ್ಗೆ ಅನುಕಂಪ ಸೂಚಿಸುವ ಬದಲು ಅವರ ಕುಟುಂಬಕ್ಕೆ ಏನಾದರೂ ಅನುಕೂಲ ಮಾಡುವ ಕುರಿತು ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.
ಕುಮಾರಸ್ವಾಮಿ ಮಾತನಾಡಿ ಎಲ್ಲರ ಜೊತೆಯಲ್ಲಿಯೂ ಒಳ್ಳೆ ಒಡನಾಟವಿಟ್ಟುಕೊಂಡಿದ್ದ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ ನಿಷ್ಠಾವಂತ ಕಾರ್ಯಕರ್ತನಾಗಿದ್ದ. ಇಂತಹವರನ್ನು ಗುರುತಿಸಿ ಪಕ್ಷದಿಂದ ಏನಾದರೂ ಅನುಕೂಲ ಮಾಡಿಕೊಡುವುದು ಉತ್ತಮ. ವೈಯಕ್ತಿಕವಾಗಿ ನಾನು ಸಹಾಯ ಮಾಡುತ್ತೇನೆಂದು ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡುತ್ತ ಡಿ.ಕುಮಾರ್ ಸಾವಿನಿಂದ ಕುಟುಂಬಕ್ಕೆ ದಿಕ್ಕುತೋಚದಂತಾಗಿದೆ. ಪಕ್ಷಕ್ಕೆ ನಿಷ್ಟಾವಂತನಾಗಿದ್ದ ಆತನ ಕುಟುಂಬಕ್ಕೆ ವಸತಿ ಹಾಗೂ ಆರ್ಥಿಕ ಸಹಾಯ ಮಾಡುವ ಮನೋಭಾವನೆ ಎಲ್ಲರಲ್ಲೂ ಮೂಡಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಂಜುನಾಥ್, ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಕುಮಾರಣ್ಣ, ನಾಗರಾಜ್‍ಪೈಲೆಟ್, ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಅಬ್ದುಲ್ಲಾ, ವಸೀಂ, ರಮೇಶ್, ಕಣ್ಮೇಶ್, ಪ್ರಸನ್ನ, ಎಸ್.ಸಿ.ಸೆಲ್ ಕಾರ್ಯದರ್ಶಿ ರಾಮಪ್ಪ, ನ್ಯಾಯವಾದಿ ರವೀಂದ್ರ, ಎ.ಸಾಧಿಕ್‍ವುಲ್ಲಾ ಇನ್ನು ಅನೇಕರು ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

