ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಅಂತಿಮ ಪದವಿ ವಿದ್ಯಾರ್ಥಿ, ಆಟೋ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಮುಂಗಸವಳ್ಳಿ ಸಮೀಪ ಗುರುವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮುಂಗಸವಳ್ಳಿಯ ಚಿದಾನಂದ (22 ವರ್ಷ) ಎಂದು ಗುರುತಿಸಲಾಗಿದೆ. ಸಹಪಾಠಿಗಳು ಹಾಗೂ ಸ್ನೇಹಿತರ ಜೊತೆ ಬರ್ತಡೇ ಸಂಭ್ರಮ ಆಚರಣೆ ಮಾಡಬೇಕಂದು ಹೊಸ ಬಟ್ಟೆ ತೊಟ್ಟು ಖುಷಿಯಲ್ಲಿದ್ದಾಗ ಆತನ ವಿಧಿ ಆಟ ಬೇರೆಯಾಗಿತ್ತು.

ಹರಿಯಬ್ಬೆ ಗ್ರಾಮದಿಂದ ಊರಿಗೆ ತೆರಳುವಾಗ ಎದುರಿಗೆ ಬಂದ ಹರಿಯಬ್ಬೆ ಗ್ರಾಮ ಪಂಚಾಯಿತಿ ಕಸದ ಆಟೋ, ವಿದ್ಯಾರ್ಥಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಧರ್ಮಪುರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ದಾಖಲಿಸಲಾಗಿದೆ . ಆದರೆ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.
ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

