ಸುದ್ದಿಒನ್, ಚಿತ್ರದುರ್ಗ, (ಡಿ.10) : ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯು ಇಂದು (ಶುಕ್ರವಾರ) ಸಂಜೆ 4 ಗಂಟೆಗೆ ಶೇ.99.88 ರಷ್ಟು ಮತದಾನದ ಮೂಲಕ ಅಂತ್ಯಗೊಂಡಿದೆ.
ಈ ಮೂಲಕ ಮತದಾರರು ತಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪರಸ್ಪರ ಎಡೆಬಿಡದೇ ಗೆಲುವಿಗಾಗಿ ಅಲೆದಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು, ಬೆಂಬಲಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇನ್ನೇನಿದ್ದರೂ ಡಿಸೆಂಬರ್ 14 ರವರೆಗೂ ಸೋಲು-ಗೆಲುವುಗಳ ಲೆಕ್ಕಾಚಾರ ಮಾತ್ರ ಬಾಕಿಯಿದೆ. ಯಾರು ಗೆಲ್ಲುತ್ತಾರೆ ? ಯಾರು ಸೋಲುತ್ತಾರೆ ? ಎಂಬ ಕುತೂಹಲ ಮಾತ್ರ ಮುಂದುವರೆದಿದೆ.
ಶತಾಯಗತಾಯ ಗೆಲ್ಲಲೇಬೆಕೆಂದು ಅದೃಷ್ಟ ಪರೀಕ್ಷೆಗಿಳಿದ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಪ್ರತಿ ಗ್ರಾಮಪಂಚಾಯತಿಗಳಲ್ಲಿ ತಮ್ಮದೇ ಶೈಲಿಯಲ್ಲಿ ಈ ಬಾರಿ ನಮಗೊಂದು ಅವಕಾಶ ಕೊಡಿ ಎಂದು ಹಗಲಿರುಳೆನ್ನದೇ, ಹಸಿವಿನ ಹಂಗಿಲ್ಲದೆ, ನೆಮ್ಮದಿಯ ನಿದ್ರೆಯಿಲ್ಲದೆ ಹೀಗೆ ನಾನಾ ರೀತಿಯ ಕಸರತ್ತುಗಳನ್ನು ಮತದಾರರ ಮನೆಮನೆಗಳಿಗೆ ತೆರಳಿ ಮತದಾರ ಪ್ರಭುವಿನ ಮನ ಮುಟ್ಟುವ ರೀತಿಯಲ್ಲಿ ದಣಿವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
ಇಂದಿಗೆ ಆಯಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ದೈಹಿಕ ಶ್ರಮಕ್ಕೆ ಪೂರ್ಣವಿರಾಮ ಬಿದ್ದಿದೆ. ರಾಗ, ದ್ವೇಷ, ಅಸೂಯೆ, ಆತ್ಮೀಯತೆ, ಸಹಕಾರ, ತಂತ್ರ, ಪ್ರತಿತಂತ್ರ, ಷಡ್ಯಂತ್ರ…. ಹೀಗೆ ರಾಜಕೀಯದ ಎಲ್ಲ ಆಯಾಮಗಳೂ ತಾತ್ಕಾಲಿಕ ಶಮನಗೊಂಡಿವೆ. ಆದರೆ ಡಿಸೆಂಬರ್ 14 ರಂದು ಫಲಿತಾಂಶ ಬರುವ ತನಕ ಮಾನಸಿಕ ಒತ್ತಡಗಳು ಮಾತ್ರ ಅಭ್ಯರ್ಥಿಗಳನ್ನು ಕಾಡಲಿವೆ.
ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಹಿರಂಗ ಚಟುವಟಿಕೆಗಳು ಸ್ತಬ್ಧಗೊಂಡಿವೆ. ತೆರೆ ಮರೆಯ ಚಟುವಟಿಕೆಗಳು ಮಾತ್ರ ಇನ್ನೂ ನಿಂತಿಲ್ಲ. ಗೆದ್ದರೆ ಹೇಗೆ ಸಂಭ್ರಮಾಚರಣೆ ಮಾಡಬೇಕು ಸೋತರೆ ಹೇಗೆ ನಷ್ಟ ಭರಿಸಿಕೊಳ್ಳಬೇಕು ಎಂಬ ಚಿಂತನೆಗಳ ಮಧ್ಯೆ ಮತಪೆಟ್ಟಿಗೆಯಲ್ಲಿ ಭದ್ರವಾಗಿರುವ ತಮ್ಮ ಭವಿಷ್ಯದ ಗುಟ್ಟು ಬಹಿರಂಗಗೊಳ್ಳುವ ಕ್ಷಣಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.