ಚಿತ್ರದುರ್ಗ, (ಡಿಸೆಂಬರ್.10) :ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿರುವ ರೋಗಿಗಳ ಕುಟುಂಬದಿಂದ ಯಾವುದೇ ಇತರೆ ದಾಖಲೆಗಳನ್ನು ಆಸ್ಪತ್ರೆ ಸಿಬ್ಬಂದಿ ಕೇಳುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ರಾಜ್ಯದಲ್ಲಿ ಆದ್ಯತೆ ಮತ್ತು ಸಾಮಾನ್ಯ ವರ್ಗದ ಕುಟುಂಬ ಸದಸ್ಯರಿಗೆ ಶೀಘ್ರ ಮತ್ತು ಶುಲ್ಕರಹಿತ ಚಿಕಿತ್ಸೆ ನೀಡಲು ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಆರಂಭಿಸಲಾಗಿದೆ. ಈ ಕಾರ್ಡ್ ಮಾಡಿಸಲು ಅರ್ಹರು ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಗಳನ್ನು ದಾಖಲೆಗಳಾಗಿ ಸಲ್ಲಿಕೆ ಮಾಡಿರುತ್ತಾರೆ.
ಈಗಾಗಲೇ 1.5 ಕೋಟಿ ಜನರು ಆಯುಷ್ಮಾನ್ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ಇವರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತೆರಳಿದಾಗ ಕೆಲವು ಸರ್ಕಾರಿ ಆಸ್ಪತ್ರೆಗಳು, ನೊಂದಾಯಿತ ಆಸ್ಪತ್ರೆಗಳು ಹಾಗೂ ಅವಶ್ಯಕತೆ ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೀಡಿದರೂ ಪೂರಕ ದಾಖಲೆ ಕೇಳಿ ತೊಂದರೆ ಉಂಟುಮಾಡಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರಿಗೆ ದೂರುಗಳು ದಾಖಲಾಗಿದ್ದು, ಆಯುಷ್ಮಾನ್ ಕಾರ್ಡ್ ಒದಗಿಸಿದವರಿಗೆ ಬೇರ್ಯಾವ ದಾಖಲೆಗಳನ್ನು ಕೇಳದೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದೆ.
ದಾಖಲೆಗಳಿಗೆ ಒತ್ತಾಯಿಸಿದರೆ ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಆಯುಷ್ಮಾನ್ ಕಾರ್ಡ್ ಪಡೆಯದ ಅರ್ಹ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದಾಗ ತಮ್ಮ ಬಳಿ ಲಭ್ಯವಿರುವ ಆಧಾರ್‍ಕಾರ್ಡ್ ಮತ್ತು ಪಡಿತರ ಚೀಟಿಯನ್ನು ದಾಖಲೆಗಳನ್ನಾಗಿ ಒದಗಿಸಿ ಶುಲ್ಕರಹಿತ ಚಿಕಿತ್ಸೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಆಸ್ಪತ್ರೆಗಳು, ಆರೋಗ್ಯ ಸಹಾಯವಾಣಿ 104 ಗೆ ಅಥವಾ 18004258330 ಟೋಲ್‍ಫ್ರೀ ಹಾಗೂ
www.sast.karnataka.gov.in/home, www.arogya.karnataka.gov.in
ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಚಿತ್ರದುರ್ಗ ಜಿಲ್ಲಾ ಸಂಯೋಜಕರಾದ ಡಾ. ಚಂದ್ರಶೇಖರ್ ರಾಜು ತಿಳಿಸಿದ್ದಾರೆ.