ಸುದ್ದಿಒನ್, ಚಿತ್ರದುರ್ಗ, (ಡಿ.09) : ದೇವಿ ಪೂಜೆ ಮಾಡಿಸಿದರೆ ಒಳ್ಳೆಯಲಾಗುತ್ತದೆ ಎಂದು ನಂಬಿಸಿ ಚಿನ್ನದ ಆಭರಣಗಳನ್ನು ಪಡೆದು ವಂಚನೆ ಮಾಡಿದ್ದ ಮೂವರು ಆರೋಪಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಬಂಡೆಪ್ಪ, ಭೀಮರಾವ್ ಮತ್ತು ಬಾಗಲಕೋಟೆಯ ಗಣೇಶ ಶಾಸ್ತ್ರಿ ಬಂಧಿತ ಆರೋಪಿಗಳು. ಇವರು ಚಳ್ಳಕೆರೆಯ ಓರ್ವರಿಗೆ ಕರೆ ಮಾಡಿ, ನಿಮ್ಮ ಮನೆಯಲ್ಲಿರುವ ಬಂಗಾರದ ಒಡವೆಗಳನ್ನು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ. ಈ ದಿವಸ ಬೆಳ್ಳಕೆರೆಗೆ ಬರುತ್ತಿದ್ದೇವೆ. ನಿಮ್ಮ ಮನೆಯಲ್ಲಿರುವ ಬಂಗಾರದ ಒಡವೆಗಳನ್ನು ತಂದು ಕೊಡಿ ಅವುಗಳನ್ನು ಪೂಜೆ ಮಾಡಿ ವಾಪಾಸ್ ಕೊಡುವುದಾಗಿ ಹೇಳಿ ಸುಮಾರು 17 ತೊಲ ತೂಕದ ಅಂದಾಜು ರೂ.6,80,000/- ಗಳಷ್ಟು ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಪಡೆದು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವಂಚಿಸಿ ಪರಾರಿಯಾಗಿರುತ್ತಾರೆ.
ಬಂಗಾರದ ಒಡವೆಗಳು ತಂದು ಕೊಡದ ಸಂಬಂಧ ವಂಚನೆಗೊಳಗಾದವರು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಚಳ್ಳಕೆರೆ ಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಮಹೇಶ್ ಗೌಡ.ಎ.ಎಸ್, ಪಿಎಸ್ಐ, ಹಾಗೂ ಸಿಬ್ಬಂದಿಯವರ ತಂಡ ಕಾರ್ಯಾಚರಣೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿ, ರೂ 6,80,000/- ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರು ಬೇರೆ ಬೇರೆ ಹುಡುಗಿಯರಿಗೆ ನಿಮಗೆ ಐ.ಎ.ಎಸ್, ಐಪಿಎಸ್ ಆಫೀಸರ್ ಆಗುವ ಯೋಗ ಇದೆ. ನಿಮಗೆ ಒಳ್ಳೆ ಅದೃಷ್ಟ ಬರುತ್ತದೆ ನೀವು ದೇವಿ ಪೂಜೆ ಮಾಡಿಸಿದರೆ ಬೇಗ ಒಳ್ಳೆಯದಾಗುತ್ತದೆ ಎಂದು ಫೋನ್ ಮೂಲಕ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಎಸ್. ಪಿ. ರಾಧಿಕಾ ರವರು ಶ್ಲಾಘಿಸಿರುತ್ತಾರೆ.