ಬೆಂಗಳೂರು: ಸದ್ಯ ರಾಜ್ಯದಲ್ಲಿ ಮೂರನೆ ಅಲೆಯ ಆತಂಕ ಶುರುವಾಗಿದೆ. ರೂಪಾಂತರಿ ಒಮಿಕ್ರಾನ್ ಜನರನ್ನ ಭಯಭೀತಿಗೊಳಿಸಿದೆ. ವೈರಸ್ ಭಯದ ಜೊತೆಗೆ ಜೀವನದ ಭಯವೂ ಶುರುವಾಗಿದೆ. ಇನ್ನೆಲ್ಲಿ ಮತ್ತೆ ಕರ್ಫ್ಯೂ, ಲಾಕ್ಡೌನ್ ಅಂತ ಮಾಡಿ ಜೀವನ ನಡೆಸೋದಕ್ಕೂ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತೋ ಅನ್ನೋ ಭಯ ಬಡ, ಮಧ್ಯಮವರ್ಗ ಜನರದ್ದು. ಈ ಬಗ್ಗೆ ಇಂದು ಸ್ಪಷ್ಟನೆ ಕೊಟ್ಟಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಸದ್ಯಕ್ಕೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮಾಡುವ ಯಾವ ಯೋಜನೆಯೂ ಇಲ್ಲ ಎಂದಿದ್ದಾರೆ.
ಸೋಂಕು ಹೆಚ್ಚಳದ ಹಿನ್ನೆಲೆ ಇಂದು ಸಚಿವ ಸಂಪುಟ ಕರೆದು ಮಾತನಾಡಿದ್ದು, ಸದ್ಯ ಕೇರಳ ಹಾಗೂ ಗಡಿಭಾಗದಲ್ಲಿ ಬರುವವರ ಟೆಸ್ಟಿಂಗ್ ಮುಂದುವರೆಯಲಿದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತದೆ. ಗಡಿಭಾಗದಲ್ಲಿ ಕೊರೊನಾ ತಪಾಸಣೆ ಮುಂದುವರೆಯುತ್ತದೆ. ಮೂವರಿಗೆ ಪಾಸಿಟಿವ್ ಬಂದರೆ ಕ್ಲಸ್ಟರ್ ಮಾಡಲಾಗುತ್ತದೆ.
ಸದ್ಯಕ್ಕೆ ಸಭೆಯಲ್ಲಿ ಯಾವುದೇ ಹೊಸ ನಿರ್ಬಂಧ ವಿಧಿಸಿಲ್ಲ. ಒಂದು ವಾರಗಳ ಕಾಲ ಪರಿಸ್ಥೀತಿ ನೋಡಿಕೊಂಡು ಮತ್ತೆ ತೀರ್ಮಾನ ಮಾಡುತ್ತೇವೆ. ಕ್ರಿಸ್ಮಸ್ ಆಚರಣೆ ಹಾಗೂ ಹೊಸ ವರ್ಷಾಚರಣೆ ಬಗ್ಗೆಯೂ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದಿದ್ದಾರೆ.