ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 11 : ದುರ್ಗದ ಸಿರಿ ಕಲಾ ಸಂಘದಿಂದ ಐತಿಹಾಸಿಕ ಚಿತ್ರದುರ್ಗ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾ.23 ರಂದು ಸಂಜೆ ಐದು ಗಂಟೆಯಿಂದ ಬೆಂಗಳೂರಿನ ಅಂತರಾಷ್ಟ್ರೀಯ ಖ್ಯಾತಿಯ ಪ್ರಭಾತ್ ಕಲಾವಿದರಿಂದ ಕರುನಾಡ ವೈಭವ ಹಾಗೂ ಧರ್ಮಭೂಮಿ ನೃತ್ಯ ರೂಪಕ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ನಡೆಸಲಾಗುವುದೆಂದು ಸಂಘದ ಗೌರವಾಧ್ಯಕ್ಷ ಮಹಂತರೆಡ್ಡಿ ತಿಳಿಸಿದರು.

ಐಶ್ವರ್ಯ ಫೋರ್ಟ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹತ್ತು ವರ್ಷಗಳ ಕಾಲ ಕಾರಣಾಂತರಗಳಿಂದ ದುರ್ಗದ ಸಿರಿ ಕಲಾ ಸಂಘದಿಂದ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. 2004 ರಲ್ಲಿ ಗಾಯಕ ಪಿ.ಬಿ.ಶ್ರೀನಿವಾಸ್‍ರನ್ನು ಕರೆಸಿದ್ದೆವು. ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಣ್ಯಂರವರನ್ನು ಇಲ್ಲಿಗೆ ಕರೆಸಲು ತಯಾರಿ ನಡೆಸಿದ್ದೆವು ಬರಲು ಅವರು ಕೂಡ ಒಪ್ಪಿಗೆ ನೀಡಿದ್ದರು. ಬರಲು ಆಗಲಿಲ್ಲ. 2007 ರಲ್ಲಿ ಎಲ್.ಆರ್.ಈಶ್ವರಿಯನ್ನು ಕರೆಸಿ ಚಿತ್ರದುರ್ಗದ ಜನತೆಗೆ ಮನರಂಜನೆಯನ್ನು ನೀಡಿದ್ದೆವು. ಜಾನಪದ ಗಾಯಕ ಸಿ.ಅಶ್ವಥ್‍ರವರು ಕೂಡ ಬಂದು ಹೋಗಿದ್ದರು. ಈಗ ಮತ್ತೆ ದುರ್ಗದ ಸಿರಿ ಕಲಾ ಸಂಘ ಚಿತ್ರದುರ್ಗದಲ್ಲಿ ಮತ್ತೆ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ಮುಂದಾಗಿದೆ ಎಂದು ಹೇಳಿದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಒಬ್ಬೊಬ್ಬ ಕಲಾವಿದರನ್ನು ಗುರುತಿಸಿ ಸನ್ಮಾನಿಸಿ ನಗದು ನೀಡಿ ಗೌರವಿಸಲು ತೀರ್ಮಾನಿಸಿದ್ದೇವೆ. ಮೈಸೂರು ಮಹಾರಾಜರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಸಾಹಸಸಿಂಹ ಡಾ.ವಿಷ್ಣುವರ್ಧನ್‍ರವರ ಪತ್ನಿ ಭಾರತಿ ಕೂಡ ಕರುನಾಡ ವೈಭದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರುಗಳಾದ ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ರವಿಕಾಂತೆಗೌಡ, ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳನ್ನು ಕರೆದಿದ್ದೇವೆಂದರು. ಹಾಸ್ಯ ನಟ ದೊಡ್ಡಣ್ಣ ಕೂಡ ಕರುನಾಡ ವೈಭವಕ್ಕೆ ಆಗಮಿಸಲಿದ್ದಾರೆ. ಪ್ರತಿ ವರ್ಷವೂ ದುರ್ಗೋತ್ಸವ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳಿಗೆ ಈ ಸಂದರ್ಭದಲ್ಲಿ ಭಿನ್ನವತ್ತಳೆ ಅರ್ಪಿಸುತ್ತೇವೆಂದು ಮಹಂತರೆಡ್ಡಿ ವಿವರಿಸಿದರು.
ಜಿ.ಎಸ್.ಮಂಜುನಾಥ್ ಮಾತನಾಡಿ ವಿದ್ಯಾರ್ಥಿ ದಸೆಯಿಂದಲೂ ನಾನು ಕೂಡ ಕಲಾವಿದ. ಮನರಂಜನೆ ಜನರಿಗೆ ಬೇಕಾಗುತ್ತದೆನ್ನುವುದನ್ನು ಮನಗಂಡು ದುರ್ಗದ ಸಿರಿ ಕಲಾ ಸಂಘದಿಂದ ಕರುನಾಡ ವೈಭವ ಹಾಗೂ ಧರ್ಮಭೂಮಿ ನ್ಯತ್ಯ ರೂಪಕ ಹಮ್ಮಿಕೊಳ್ಳಲಾಗಿದೆ. ಅರವತ್ತರಿಂದ ಎಪ್ಪತ್ತು ಉದ್ಯಮಿಗಳು ಇದಕ್ಕೆ ಕೈಜೋಡಿಸಿದ್ದಾರೆ. ಹಂಪಿ, ಕಿತ್ತೂರು ಉತ್ಸವದ ಮಾದರಿಯಲ್ಲಿ ಪ್ರತಿ ವರ್ಷವೂ ದುರ್ಗದಲ್ಲಿ ದುರ್ಗೋತ್ಸವ ಆಚರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಹಕಾರ ಪಡೆದು ಮುಖ್ಯಮಂತ್ರಿಗಳ ಬಳಿ ಹೋಗುತ್ತೇವೆ. 25 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಆಸನಗಳ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಬಿ.ಎ.ಲಿಂಗಾರೆಡ್ಡಿ, ಅನಂತೆರಡ್ಡಿ, ಅರುಣ್‍ಕುಮಾರ್, ಸೈಟ್‍ಬಾಬಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ನಿವೃತ್ತ ಡಿ.ವೈ.ಎಸ್ಪಿ.ಗಳಾದ ಅಬ್ದುಲ್‍ರೆಹಮಾನ್, ಸೈಯದ್ ಇಸಾಖ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

