ಸುದ್ದಿಒನ್

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ರೋಚಕ ಜಯ ಸಾಧಿಸುವ ಮೂಲಕ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಂದು ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ 3 ಟ್ರೋಫಿ ಗೆದ್ದ (2002, 2013, 2025) ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 252 ರನ್ಗಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 49 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿ 12 ವರ್ಷಗಳ ಬಳಿಕ (2013ರ ನಂತರ) ಮತ್ತೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ರೋಹಿತ್ ಶರ್ಮಾ 76 ರನ್ ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಶ್ರೇಯಸ್ ಅಯ್ಯರ್ 48 ರನ್ಗಳಿಸಿ ಗೆಲುವಿನ ರೂವಾರಿಗಳಾದರು.
ಅಕ್ಷರ್ ಪಟೇಲ್ 29 ರನ್ ಗಳಿಸಿ ಔಟಾದರೆ, ಶ್ರೇಯಸ್ ಅಯ್ಯರ್ 48 ರನ್ ಗಳಿಸಿ ಔಟಾದರು. ಸ್ಯಾಂಟ್ನರ್ ಇಬ್ಬರನ್ನೂ ಔಟ್ ಮಾಡಿದರು. ನಾಯಕ ರೋಹಿತ್ ಶರ್ಮಾ 76 ರನ್ ಮತ್ತು ಶುಭಮನ್ ಗಿಲ್ 31 ರನ್ ಗಳಿಸಿದರು. ಇವರಿಬ್ಬರ ನಡುವೆ 105 ರನ್‌ಗಳ ಜೊತೆಯಾಟ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರು. ರಾಚಿನ್ ರವೀಂದ್ರ ಮತ್ತು ಮೈಕೆಲ್ ಬ್ರೇಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು.
ಕಳೆದ 9 ತಿಂಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಗೆದ್ದ ಎರಡನೇ ಐಸಿಸಿ ಪ್ರಶಸ್ತಿ ಇದು. ಜೂನ್ 29 ರಂದು ನಡೆದ ಟಿ20 ವಿಶ್ವಕಪ್ ಅನ್ನು ಅವರು ಗೆದ್ದಿದ್ದರು. 25 ವರ್ಷಗಳ ಹಿಂದೆ ಇದೇ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಟೀಮ್ ಇಂಡಿಯಾ ಇಂದು ಸೇಡು ತೀರಿಸಿಕೊಂಡಿತು. ಇದರೊಂದಿಗೆ, ಭಾರತವು ಈ ಟ್ರೋಫಿಯಲ್ಲಿ ಗರಿಷ್ಠ ಸಂಖ್ಯೆಯ (ಮೂರು ಬಾರಿ) ಗೆಲುವುಗಳ ದಾಖಲೆಯನ್ನು ಸೃಷ್ಟಿಸಿತು.

