ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ಹೊರ ಜಗತ್ತಿನ ಜ್ಞಾನದ ಬೆಳಕು ಕನ್ನಡದ ಮನೆಗೆ ಹರಿಯಬೇಕೆಂದು ಖ್ಯಾತ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಶನಿವಾರ ನಡೆದ 2023-24 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ 2022 ಹಾಗೂ 23 ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂತಹ ಸಮಾರಂಭಗಳು ನಾಡಿನಾದ್ಯಂತ ಎಲ್ಲಾ ಕಡೆ ನಡೆಯಬೇಕು. ಕೇವಲ ಬೆಂಗಳೂರಿಗಷ್ಟೆ ಸೀಮಿತವಾಗಿದೆ ಎನ್ನುವ ತಪ್ಪು ಕಲ್ಪನೆ ಮೂಡಬಾರದು. ಯಾವುದೇ ಒಂದು ಭಾಷೆಯ ಅನುವಾದದ ಕೃತಿಯನ್ನು ಓದಿದರೆ ಮೂಲ ಕೃತಿಗಿಂತ ಅದ್ಬುತವಾಗಿದೆ ಎನ್ನುವ ರೀತಿಯಲ್ಲಿರಬೇಕು. ಅನುವಾದದ ಮೂಲಕ ಕನ್ನಡ ಭಾಷೆ ಸಮೃದ್ದವಾಗಿದೆ. ಹೊಸಗನ್ನಡ ಸಾಹಿತ್ಯ ಅನುವಾದಗಳಿಂದ ಹುಟ್ಟಿದೆ ಎಂದರು.
ಬೇರೆ ಭಾಷೆಗಳ ಪ್ರಭಾವದಿಂದ ರಾಜ್ಯ ಸರ್ಕಾರ ಅಕಾಡೆಮಿ ರಚಿಸಿತ್ತು. ಅನುವಾದಕ್ಕೆ ಪ್ರೋತ್ಸಾಹ ಬೇಕು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವೆಂಬ ಹೆಸರಿಟ್ಟುಕೊಂಡರೆ ಸಾಲದು. ಕುವೆಂಪುರವರ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಹಿಂದಿ, ಇಂಗ್ಲಿಷ್, ಮರಾಠಿ, ತಮಿಳಿನಲ್ಲಿ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕು. ಕನ್ನಡದಿಂದ ಬೇರೆ ಭಾಷೆಗೆ ಅನುವಾದವಾದ ಕೃತಿಗಳಿಗೆ ಮಾರುಕಟ್ಟೆಯಿಲ್ಲದಂತಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಡಿಜಿಟಲ್ ಮೂಲಕ ಭಾರತೀಯ ಭಾಷೆಗಳಿಗೆ ಕನ್ನಡದ ಶ್ರೇಷ್ಟ ಕೃತಿಗಳನ್ನು ಅನುವಾದಗೊಳಿಸಬಹುದು. ಎಲ್ಲಾ ಸರ್ಕಾರಗಳು ಅಕಾಡೆಮಿಗೆ, ಸಂಸ್ಕøತಿ ಇಲಾಖೆಗೆ ಉದಾರವಾಗಿ ನೆರವು ನೀಡುತ್ತ ಬರುತ್ತಿವೆ. ಹೊಸ ಅಕಾಡೆಮಿ ರಚನೆಯಾಗುವವರೆಗೂ ಹಳೆ ಅಕಾಡೆಮಿಗೆ ಕೆಲಸ ಮಾಡುವ ಅಧಿಕಾರವನ್ನು ಸರ್ಕಾರ ನೀಡಬೇಕು. ಸರ್ಕಾರಕ್ಕೆ ಅಕಾಡೆಮಿಯನ್ನು ಯಾವ ರೀತಿ ನಡೆಸಿಕೊಳ್ಳಬೇಕೆಂಬ ಜವಾಬ್ದಾರಿಯಿದೆ ಎಂದು ತಿಳಿಸಿದರು.
2023 ನೇ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಎಚ್.ಎಸ್.ರಾಘವೇಂದ್ರರಾವ್ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ, ಹುಲ್ಲೂರು ಶ್ರೀನಿವಾಸ ಜೋಯಿಸ್, ತ.ರಾ.ಸು. ಇವರುಗಳನ್ನು ನಾನು ನೆನಪಿಸಿಕೊಳ್ಳಲೇಬೇಕು. ಸಾಹಿತಿ ಬಿ.ಎಲ್.ವೇಣುರವರ ಬರವಣಿಗೆ ಇನ್ನು ನೆನಪಿನಲ್ಲಿ ಉಳಿದಿದೆ. ಸಿರಿಗೆರೆ ನನಗೆ ಸಮಾನತೆ, ಜಾತ್ಯತೀತತೆಯನ್ನು ಕಲಿಸಿದೆ. ಕುವೆಂಪು ಕಂಡ ಕನಸು ವಿಶ್ವಮಾನವ ಪರಿಕಲ್ಪನೆ ನನಸು ಮಾಡಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರಟಿದೆ ಎಂದು ಶ್ಲಾಘಿಸಿದರು.
ಜಾಗತಿಕರಣದಿಂದ ಅನೇಕ ಅಪಾಯಗಳನ್ನು ಎದುರಿಸುವಂತಾಗಿದೆ. ಶೋಷಣೆಗೆ ಗೋಡೆಗಳಿಲ್ಲ. ಅನುವಾದದ ಮೂಲಕ ಕನ್ನಡ ಕಟ್ಟುವ ಕೆಲಸವಾಗುತ್ತಿದೆ. ಕನ್ನಡದ ಸಂಸ್ಕøತಿ ಒಳಗೊಳ್ಳುವುದು, ಹೊರಗೆಡವುವುದಲ್ಲ. ಗಾಂಧಿ, ಅಂಬೇಡ್ಕರ್, ನ್ಯೂಟನ್, ಐನ್ಸ್ಟೈನ್ ಇವರುಗಳು ಕನ್ನಡಕ್ಕೆ ಬಂದಿರುವುದು ಬೇರೆ ಭಾಷೆಗಳಿಂದ. ಓದುಗರು ಕಡಿಮೆಯಾಗಿದ್ದಾರೆನ್ನುವುದು ಎಲ್ಲರ ಅಭಿಪ್ರಾಯ. ಆದರೆ ನಿಜವಾಗಿಯೂ ಒದುಗರು ಕಡಿಮೆಯಾಗಿಲ್ಲ. ಬೇರೆ ಬೇರೆ ವಿಧಾನಗಳಲ್ಲಿ ಓದುತ್ತಾರೆಂದರು.
ಡಾ.ಆರ್.ಕೆ.ಕುಲಕರ್ಣಿ 2024 ನೇ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ ಅನುವಾದ ಸಾಹಿತ್ಯಕ್ಕೆ ಸೃಜನ ಸಾಹಿತ್ಯದಷ್ಟೆ ಮಹತ್ವವಿದೆ. ಅನುವಾದ ಸಾಹಿತ್ಯ ಸಾಕಷ್ಟು ಬೆಳೆದಿದೆಯಾದರೂ ಇನ್ನು ಬೆಳೆಯಬೇಕಿದೆ. ಕನ್ನಡದ ವೈಭವವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ ಎಂದು ಗುಣಗಾನ ಮಾಡಿದರು.
2023 ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕøತೆ ಡಾ.ದು.ಸರಸ್ವತಿ ಮಾತನಾಡಿ ಅನುವಾದ ಎನ್ನುವುದು ಕಲಿಕೆಯ ಪ್ರಕ್ರಿಯೆ. ಅಷ್ಟೊಂದು ಸುಲಭವಾದುದಲ್ಲ. ಭಾರತ ಅಂದರೆ ಬಹುತ್ವ, ಸಮಾನತೆ, ಸಹಬಾಳ್ವೆಗೆ ಹೆಸರಾದುದು. ಹಲವಾರು ಕೃತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಹೊರಬರಬೇಕೆಂದು ಹೇಳಿದರು.
ಗದಗದ ತೋಂಟದಾರ್ಯ ಸಿದ್ದರಾಮಸ್ವಾಮಿಗಳು ಪುಸ್ತಕ ಬಹುಮಾನ ಸ್ವೀಕರಿಸಿ ಮಾತನಾಡುತ್ತ ಒಂದು ಭಾಷೆಯಲ್ಲಿರುವುದನ್ನು ಇನ್ನೊಂದು ಭಾಷೆಗೆ ತಿಳಿಸುವುದೇ ಅನುವಾದ. ಮೂಲ ಕೃತಿ ಓದಿದಾಗ ಆಗುವಷ್ಟು ಆನಂದ ಅನುವಾದದ ಕೃತಿ ಓದಿದಾಗಲು ಸಿಗಬೇಕು. ಅನುವಾದದ ಕೆಲೆಯೇ ವಿಶಿಷ್ಟವಾದುದು. ಭಾಷೆಗಳ ವಿನಿಮಯ ಅರ್ಥಪೂರ್ಣವಾದುದು ಎಂದು ಹೇಳಿದರು.
ಬಿ.ಆರ್.ಜಯರಾಮರಾಜೆ ಅರಸ್ 2022 ನೆ ಸಾಲಿನ ಪುಸ್ತಕ ಬಹುಮಾನ ಪಡೆದು ಮಾತನಾಡಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವಿಶಿಷ್ಟವಾದ ಸಂಸ್ಥೆ. ಪೆರಿಯಾರ್ pಸಾವಿತ್ರಿಬಾಯಿಪುಲೆ ಇವರುಗಳು ಸಮಾಜ ಸುಧಾರಕರು. ಅನುವಾದ ಬೆಳೆಯುತ್ತಿರುವುದರಿಂದ ಹೆಚ್ಚಿನ ಮಹತ್ವ ಪಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ, ಡಾ.ನಟರಾಜ್ ಹುಳಿಯಾರ್, ಡಾ.ರಾಜೇಂದ್ರಜೆನ್ನಿ, ಬೋಡೆ ರಿಯಾಜ್ ಅಹಮದ್, ಡಾ.ಬಸು ಬೇವಿನ ಗಿಡದ, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕುವೆಂಪು
ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು.ಮಿರ್ಜಿ, ಡಾ.ಜೆ.ಕರಿಯಪ್ಪ ಮಾಳಿಗೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಇವರುಗಳು ವೇದಿಕೆಯಲ್ಲಿದ್ದರು.

