ರೈತರ ಅಮರಣಾಂತ ಉಪವಾಸ ಸತ್ಯಾಗ್ರಹ : ಸಚಿವ ಎನ್.ಎಸ್. ಬೋಸರಾಜು ಆಗಮನಕ್ಕೆ ಪಟ್ಟು

3 Min Read

 

 

ಸುದ್ದಿಒನ್, ಹಿರಿಯೂರು, ಮಾರ್ಚ್. 05 : ತಾಲೂಕಿನ ಗಾಯಿತ್ರಿ ಜಲಾಶಯ ಸೇರಿದಂತೆ 16 ಕೆರೆ ಹಾಗೂ ಐಮಂಗಲ ಮತ್ತು ಕಸಬಾ ಹೋಬಳಿಯ 6 ಕೆರೆಗಳಿಗೆ ವಾಣಿವಿಲಾಸ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರಿದಿದ್ದು ಧರಣಿ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಆಗಮಿಸುವಂತೆ ರೈತರು ಪಟ್ಟು ಹಿಡಿದರು.

 

ನಗರದ ತಾಲೂಕು ಕಛೇರಿ ಮುಂಭಾಗದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಹಾಗೂ ತಹಶೀಲ್ದಾರ್ ಸಿ ರಾಜೇಶ್ ಕುಮಾರ್ ರವರು ಭೇಟಿ ನೀಡಿ ರೈತರ ಮನವೊಲಿಸಲು ಮುಂದಾದರು. ಆದರೆ ನೀರು ಹರಿಸುವ ಆದೇಶದ ಕಾಪಿ ಬರುವವರೆಗೂ ನಾವು ಹೋರಾಟ ಕೈ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

 

ರೈತರನ್ನು ಉದ್ದೇಶಿಸಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಮಾತನಾಡಿ ಧರಣಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮೂಲಕ ಸಚಿವರಿಗೆ , ಸರ್ಕಾರಕ್ಕೆ ಮಾಹಿತಿ ರವಾನೆಯಾಗಿದೆ. ಹೋರಾಟ ಫಲಪ್ರದವಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ನಮಗೆ ತಿಳಿದು ಬಂದಿದ್ದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾವುಗಳು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಂತ ರೀತಿಯಿಂದ ವಾಪಸ್ ಪಡೆಯಿರಿ. ಜಿಲ್ಲಾಡಳಿತ ನಿಮ್ಮ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಸಂದೇಶವನ್ನು ಕೊಡಲು ಬಂದಿದ್ದೇವೆ. ಸರ್ಕಾರದ ಆದೇಶಕ್ಕಾಗಿ ನಾವು ಸಹ ಕಾಯುತ್ತಿದ್ದೇವೆ. ತಾವೆಲ್ಲರೂ ಸಹಕರಿಸಿ ಈ ಧರಣಿ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

 

ತಹಶೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿ ತಾಲೂಕಿನಲ್ಲಿ ವಾಣಿವಿಲಾಸ ಜಲಾಶಯ ಭರ್ತಿಯಾಗಿದ್ದು ನಿಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ನಾವು ಕೂಡ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸ್ವಲ್ಪ ಕಾಲಾವಕಾಶ ಬೇಕಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ತಿಳಿಸಿದ್ದಾರೆ. ಅನ್ನದಾತರು ಹಮ್ಮಿಕೊಂಡಿರುವ ಆಮರಣಾoತ ಉಪವಾಸ ಸತ್ಯಾಗ್ರಹವನ್ನು ಇಲ್ಲಿಗೆ ಕೈ ಬಿಡಿ ಎಂದು ಮನವಿ ಮಾಡಿದರು.

ಅಧಿಕಾರಿಗಳ ಮನವಿಯ ನಂತರ ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ ತಾಲೂಕಿನ ಜೆಜಿ ಹಳ್ಳಿ ಹೋಬಳಿಯಲ್ಲಿ ನೀರಿನ ಅಭಾವ ತೀವ್ರತರವಾಗಿದ್ದು ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಅಧಿವೇಶನ ಮುಗಿಯುವುದರೊಳಗಾಗಿ ಸರ್ಕಾರ ಭರವಸೆ ನೀಡಿ ಬಜೆಟ್ ನಲ್ಲಿ ಅನುದಾನದ ಬಿಡುಗಡೆಗೆ ಕ್ರಮ ಕೈಗೊಳ್ಳಬಹುದು ಎಂದು ಧರಣಿ ಪ್ರಾರಂಭಿಸಿದ್ದೇವೆ. ಆದರೆ ಸಚಿವರಿಂದ ಜಿಲ್ಲಾಡಳಿತದಿಂದ ನಮಗೆ ಯಾವುದೇ ಸರಿಯಾದ ಮಾಹಿತಿ ಬಂದಿಲ್ಲ. ಈಗಾಗಲೇ ಸಚಿವರು ಕೆಲವು ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಆ ಸಭೆಯಲ್ಲಿ ಕಲ್ಲುವಳ್ಳಿ ಭಾಗಕ್ಕೆ ಕೊಡಲು ನೀರಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿರುವುದು ನಮಗೆ ತಿಳಿದಿದೆ. ನಮ್ಮನ್ನು ಕೇಳಿದರೆ ನೀರು ಎಲ್ಲಿದೆ ಎಂಬುದನ್ನು ನಾವು ತಿಳಿಸುತ್ತೇವೆ.

 

ಈ ಹಿಂದೆ ಚಳುವಳಿ ಆರಂಭಿಸಿದಾಗ ಐದು ಟಿಎಂಸಿ ನೀರನ್ನು ವಿವಿಸಾಗರಕ್ಕೆ ಹಂಚಿಕೆ ಮಾಡಲಾಯಿತು. ಆದರೆ ಆ ನೀರನ್ನು ಕಡಿತಗೊಳಿಸಿ 2 ಟಿಎಂಸಿಗೆ ಇಳಿಸಲಾಯಿತು. ಈ ಎರಡು ಟಿಎಂಸಿ ನೀರಲ್ಲಿ ಯಾರನ್ನು ಹೇಳದೆ, ಕೇಳದೇ ಚಳ್ಳಕೆರೆ ಮೊಳಕಾಲ್ಮೂರು, ಪ್ರಕಾಶ್ ಸ್ಪಾoಜ ಸ್ಟೀಲ್ ಕಂಪನಿ, ಸ್ಟೀಲ್ ಫ್ಯಾಕ್ಟರಿಗೆ ನೀರು ಕೊಡಲಾಗಿದೆ. ಬಹಳಷ್ಟು ಸಮಸ್ಯೆ ಇರುವ ಭಾಗಕ್ಕೆ ನೀರು ಹರಿಸಿ ಅಂದ್ರೆ ಹರಿಸುತ್ತಿಲ್ಲ. ವಿವಿ ಸಾಗರ ಡ್ಯಾಂ ಅಕ್ಕಪಕ್ಕವಿರುವ ಭರಮಗಿರಿ, ಕೂನಿಕೆರೆ ಕೆರೆ ಹಾಗೂ ಗೌನಹಳ್ಳಿ ಕೆರೆಗಳಿಗೇ ನೀರಿಲ್ಲದಂತಾಗಿದೆ. ನಮ್ಮ ಜಲಾಶಯದಲ್ಲಿ 30 ಟಿಎಂಸಿ ನೀರು ಇಟ್ಟುಕೊಂಡು ಬೇರೆ ತಾಲೂಕಿಗೆ ನೀರು ಕೊಡ್ತಾರೆ. ಆದರೆ ನಮ್ಮ ಹಳ್ಳಿಗಳಿಗೆ ನೀರಿಲ್ಲ. ಇದು ನಮ್ಮ ದುರ್ದೈವ. ನಾವು ಈಗಾಗಲೇ ಸೋತು ಸುಣ್ಣದಂತಾಗಿ ಅಂತಿಮ ಘಟ್ಟದ ಹೋರಾಟ ಆರಂಭಿಸಿದ್ದು ನಮಗೆ ನೀರು ಕೊಡುವವರೆಗೂ ನಾವು ಹೋರಾಟವನ್ನು ಹಿಂದಕ್ಕೆ ಪಡೆಯುವುದಿಲ್ಲ. ಸರ್ಕಾರದಿಂದ ಆದೇಶ ಏನಾದರೂ ಇದ್ದರೆ ಕೊಡಿ ನಾವು ಹೋರಾಟವನ್ನು ಹಿಂಪಡೆಯುತ್ತವೆ ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಘೋಷಿಸಿದರು.

 

ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಎಇಇ ಚಂದ್ರಯ್ಯ, ದಿಂಡಾವರ ಸಣ್ಣ ತಿಮ್ಮಣ್ಣ,ಬಡಗಿ ಕರಿಯಜ್ಜನಹಟ್ಟಿ ಈರಣ್ಣ,‌ ಸೂರಗೊಂಡನಹಳ್ಳಿ ಮೀಸೆ ತಿಮ್ಮಯ್ಯ, ಆನೆಸಿದ್ರಿ ಶಿವಣ್ಣ, ಚಂದ್ರಗಿರಿ ದಿಂಡಾವರ, ರಾಮಕೃಷ್ಣ ಜೂಲಯ್ಯನಹಟ್ಟಿ, ಅರಳಿಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ನಂದಿಹಳ್ಳಿ ರಂಗಸ್ವಾಮಿ, ಜಗನ್ನಾಥ್, ರಾಮಕೃಷ್ಣ, ಬಬ್ಬೂರು ಶಿವಣ್ಣ , ರಾಜಪ್ಪ,
ದುಗ್ಗಾಣಿಹಟ್ಟಿ ಕೃಷ್ಣ, ಜಯಪ್ರಕಾಶ್ ಮುಂತಾದ ರೈತರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *