ಚಿತ್ರದುರ್ಗ. ಮಾ.04: ಕೋಳಿ ಮಾಂಸ ಅಥವಾ ಕೋಳಿ ಮೊಟ್ಟೆ ಸೇವಿಸುವುದರಿಂದ ಹಕ್ಕಿ ಜ್ವರ ಮನುಷ್ಯರಲ್ಲಿ ಬರುವುದಿಲ್ಲ. ಆದರೆ ಸೋಂಕು ತಗುಲಿದ ಕೋಳಿಯ ಮಾಂಸ ಚೆನ್ನಾಗಿ ಬೇಯಿಸದೆ ಹಾಗೂ ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣು ಪ್ರಸಾದ್ ತಿಳಿಸಿದ್ದಾರೆ.

ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70ಡಿಗ್ರಿ ಸೆಂಟಿಗ್ರೇಡ್‍ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು ಎಂದು ಅವರು ಸೂಚಿಸಿದ್ದಾರೆ. ಅಡುಗೆಗಾಗಿ ಕೋಳಿ ಸಿದ್ದಪಡಿಸಿದ ನಂತರ ಕೈಗಳನ್ನು ನಂಜು ನಾಶಕದಿಂದ ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿಮೊಟ್ಟೆ ಸೇವಿಸಬಾರದು. ಹಕ್ಕಿ ಜ್ವರ ಸಾಂಕ್ರಮಿಕರೋಗ. ಮುನ್ನೆಚ್ಚರಿಕೆಯಿಂದ ತಡೆಯಬಹುದಾದ ಕಾಯಿಲೆ ಆದ್ದರಿಂದ ಕಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿಕೇಂದ್ರಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು.ಹಕ್ಕಿ ಜ್ವರದ ಲಕ್ಷಣಗಳು ಮನುಷ್ಯರಲ್ಲಿ ಕಾಣಿಸಿಕೊಂಡರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕುಎಂದುಅವರು ಹೇಳಿದ್ದಾರೆ.

ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬರದಂತೆಎಚ್ಚರ ವಹಿಸಬೇಕು. ಬೇರೆಯವರ ಮನೆಗೆ ಭೇಟಿ ನೀಡಿದಾಗ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು. ಹಕ್ಕಿಜ್ವರ ಶಂಕಿತಅಥವಾ ಪೀಡಿತ ಕೋಳಿ ಫಾರಂಗಳಿಗೆ ಭೇಟಿ ನೀಡಬಾರದು. ಹಕ್ಕಿಜ್ವರ ಹರಡಿರುವ ಫಾರಂನ ವಾತವರಣದ ಸಂಪರ್ಕಕ್ಕೆ ಬಂದಲ್ಲಿತಕ್ಷಣತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿಕೊಳ್ಳುವುದು ಮತ್ತು ಮುಂದಿನ 4 ದಿನಗಳವರೆಗೆ ತಮ್ಮ ದೇಹದಲ್ಲಾಗುವ ಉಷ್ಣಾಂಶದಲ್ಲಾಗುವ ಬದಲಾವಣೆಗಳನ್ನು ಗಮನಿಸಬೇಕು. ಒಂದು ವೇಳೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮಾತ್ರವಲ್ಲ, ಸೋಕಿರುವ ಪ್ರದೇಶಗಳಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗಳನ್ನು ಸೋಪಿನಿಂದ ತೊಳೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ರೋಗ ಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ, ಸೋಂಕಿರುವ ಹಸಿ ಮೊಟ್ಟೆಯನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು, ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಕಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ. ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಎಚ್‍ಎನ್ 1 ಜ್ವರದ ಲಕ್ಷಣಗಳಂತೆಯೆ ಇರುತ್ತದೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೂವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು.ಉಸಿರಾಟದಲ್ಲಿ ತಂದರೆ ಕಾಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.
ಹಕ್ಕಿಜ್ವರ ಎಚ್5 ಎನ್1 ವೈರಸ್‍ನಿಂದ ಹರಡುವ ರೋಗ. ಇದು ಟರ್ಕಿ ಕೋಳಿ, ಗಿನಿ ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಂದು ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣು ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


