ನೀರಿಗಾಗಿ 253 ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ : ಸ್ಥಳಕ್ಕೆ ಬಾರದ ಸಚಿವರ ವಿರುದ್ಧ ರೈತರ ಆಕ್ರೋಶ

3 Min Read

ಸುದ್ದಿಒನ್, ಹಿರಿಯೂರು, ಮಾರ್ಚ್. 03 : ತಾಲೂಕಿನ ಜವನಗೊಂಡನಹಳ್ಳಿಯ ಗಾಯಿತ್ರಿ ಜಲಾಶಯ ಸೇರಿದಂತೆ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ 253 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ನಮ್ಮ ಹೋರಾಟದತ್ತ ತಲೆ ಹಾಕಿಲ್ಲ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕೆ ಟಿ. ತಿಪ್ಪೇಸ್ವಾಮಿ ಕಿಡಿಕಾರಿದರು.

ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ನಡೆಯುತ್ತಿದ್ದ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ವರ್ಗಾಯಿಸಿಕೊಂಡು, ಜೆಜಿ ಹಳ್ಳಿ , ಐಮಂಗಲ ಹಾಗೂ ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಕುರಿತು ಮಾತನಾಡಿದರು.

ಗಾಯಿತ್ರಿ ಜಲಾಶಯ ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಉರುಳು ಸೇವೆ, ಪಂಜಿನ ಮೆರವಣಿಗೆ, ಬಾರು ಕೋಲು ಚಳುವಳಿ, ಟ್ರಾಕ್ಟರ್ ಚಳುವಳಿ, ಎತ್ತಿನಗಾಡಿ ಚಳುವಳಿ ಸೇರಿದಂತೆ ಅನೇಕ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದು ಯಾವುದೇ ಪ್ರಯೋಜನವಾಗಿಲ್ಲ. ಇನ್ನೆರಡು ದಿನಗಳಲ್ಲಿ ಸಂಬಂಧಪಟ್ಟ ಸಚಿವರನ್ನು ಧರಣಿ ಸ್ಥಳಕ್ಕೆ ಕರೆಸಿ ರೈತರ ಸಮಸ್ಯೆ ಬಗಹರಿಸಿದಿದ್ದರೇ ರೈತರು ದಂಗೆ ಏಳಲಿದ್ದಾರೆ. ಇದಕ್ಕೆ ಸಚಿವರು, ಜಿಲ್ಲಾ ಮತ್ತು ತಾಲೂಕು ಆಡಳಿತವೇ ಹೊಣೆ ಎಂದರು.

ನಮ್ಮ ತಾಲೂಕಿನ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇಂದಿನಿಂದ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ನಾವು ಪ್ರಾಣವನ್ನು ಬಿಟ್ಟೆವು, ಹೋರಾಟ ಮಾತ್ರ ಬಿಡುವುದಿಲ್ಲ. ಸಚಿವರು ತಾಲೂಕಿಗೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದ್ದಾರೆ ಎಂದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ವಾಣಿ ವಿಲಾಸ ಜಲಾಶಯದಿಂದ ವೇದಾವತಿ ನದಿ ಮೂಲಕ 0.25 ಟಿಎಂಸಿ ನೀರು ಹರಿಸಬೇಕು ಎಂದು, ಹೋರಾಟ ಇಲ್ಲದೆ ಚಳ್ಳಕೆರೆಯವರು ಆದೇಶ ಮಾಡಿಸಿಕೊಳ್ಳುತ್ತಾರೆ. ಹೋರಾಟ ಮಾಡೋಕೆ ನಾವು ಬೇಕು, ನೀರು ತಗೊಂಡು ಹೋಗೋಕೆ ಅವರು ಬೇಕು ನಮ್ಮ ತಾಲೂಕಿನ ಪರಿಸ್ಥಿತಿ ಹೀಗಾಗಿದೆ. ಬೇಸಿಗೆ ಕಾಲ ಆರಂಭಗೊಂಡಿದೆ. ಕೆರೆಗಳು ಬತ್ತಿ ಹೋಗಿವೆ. ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸಚಿವರ ನಿರ್ಲಕ್ಷ್ಯದಿಂದ ನಮಗೆ ಅನ್ಯಾಯವಾಗುತ್ತಿದೆ. ಈ ಹಿಂದೆ ಸುಧಾಕರ್ ಅವರು ಶಾಸಕರಾಗಿದ್ದ ಸಂಧರ್ಭದಲ್ಲಿ ಭದ್ರಾ ದಿಂದ ವಿವಿ ಸಾಗರ ಡ್ಯಾಂಗೆ 5ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಆದರೆ ಪಕ್ಕದ ಶಿರಾ ಶಾಸಕರು ಐದರಲ್ಲಿ ಮೂರು ಟಿಎಂಸಿ ನೀರನ್ನು ಕಡಿತಗೊಳಿಸಿ ಎರಡು ಟಿಎಂಸಿಗೆ ಇಳಿಸಿದರು. ಆಗ ಸುಧಾಕರ್ ಅವರು ತುಟಿ ಬಿಚ್ಚಲಿಲ್ಲ, ರೈತರನ್ನು ಕಣ್ಣೊರೆಸುವ ಮಾತುಗಳನ್ನು ಹಾಡುತ್ತಿದ್ದಾರೆ. ಈ ಬಜೆಟ್ ನಲ್ಲಿ ನಮ್ಮ ನೀರಿಗಾಗಿ ಅನುಧಾನ ಮೀಸಲಿಡಬೇಕು ಭದ್ರಾ ಜಲಾಶಯದಿಂದ ವಿವಿ ಸಾಗರ ಡ್ಯಾಂಗೆ ನೀರು ಹರಿಸಿ, ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಅರಳಿಕೆರೆ ತಿಪ್ಪೇಸ್ವಾಮಿ ಮಾತನಾಡಿ ತಾಲೂಕು ನೀರಿನ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 7 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ರೈತರು ಟ್ಯಾಂಕರ್ ಮೂಲಕ ನೀರು ಹರಿಸಿಕೊಂಡು ತೋಟ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ನಾಲ್ಕೈರು ವರ್ಷಗಳಿಂದ ನಮ್ಮ ಜಲಾಶಯಕ್ಕೆ ಹೆಚ್ಚಿನ ನೀರು ಬೇಕೆಂದು ಎಚ್ಚರಿಸುತ್ತಾ ಇದ್ದೇವೆ. ಆದರೆ ನಮ್ಮ ಕೂಗು ಹಿಂದಿನ ಮತ್ತು ಈಗಿನ ಸರ್ಕಾರಕ್ಕೆ ಮುಟ್ಟುಟ್ಟಿಲ್ಲ. ಈ ತಾಲ್ಲೂಕಿನ ಶಾಸಕರು ಜನರನ್ನು ಮುಠ್ಠಾಳರು ಎಂದು ಕೊಂಡಿದ್ದಾರೆ. ಈ ಮಂತ್ರಿ ರೈತರ ಜೊತೆ ಮಾತಾಡಲಿ ಆಗ ಆತನ ಬೇಳೆಕಾಳು ಗೊತ್ತಾಗುತ್ತದೆ ಎಂದು ಗುಡುಗಿದರು.

ಮುಂದಿನ ನಮ್ಮ ಪೀಳಿಗೆ ನಮಗೆ ಶಾಪ ಕೊಡುವ ಪರಿಸ್ಥಿತಿ ಬರುತ್ತದೆ. ಜಲಾಶಯ ನಮ್ಮದು ನೀರು ನಮ್ಮದು. ಆದರೆ ನಮ್ಮ ತಾಲೂಕಿಗೆ ಹೆಚ್ಚಿನ ಅನ್ಯಾಯ ಆಗಿದೆ. ಮೊಳಕಾಲ್ಮೂರು, ಚಳ್ಳಕೆರೆ, ಕುದಾಪುರ ಎಲ್ಲಾ ಕಡೆಗೂ ನೀರು ತೆಗೆದುಕೊಂಡು ಹೋಗುತ್ತಾರೆ. ಆದರೆ ನಮ್ಮ ತಾಲೂಕಿನ ಜನರು ಬೀದಿಯ ಧೂಳು ಕುಡಿದು ನೀರು ಕೊಡಿ ಎಂದು ಹೋರಾಟ ಮಾಡುತ್ತಿರುವುದು ನಮ್ಮ ದುರ್ದೈವ ಎಂದರು.

ಈ ಸಂದರ್ಭದಲ್ಲಿ ಈರಣ್ಣ, ರಾಮಣ್ಣ, ಕೆಆರ್. ಹಳ್ಳಿ ರಾಜಪ್ಪ, ಶಿವಣ್ಣ, ನಂದಿಹಳ್ಳಿ ರಂಗಸ್ವಾಮಿ, ಸಣ್ಣ ತಿಮ್ಮಣ್ಣ, ರಾಜ್ ಕುಮಾರ್, ಮಂಜುನಾಥ್, ರಾಮಕೃಷ್ಣ, ಬಾಲಕೃಷ್ಣ, ಸಿದ್ದಮ್ಮ, ಜಯರಾಮಪ್ಪ, ಶ್ರೀರಂಗಮ್ಮ, ಹಟ್ಟಿಗೌಡ ಈರಣ್ಣ, ತಿಮ್ಮಾರೆಡ್ಡಿ, ಬಿಆರ್. ರಂಗಸ್ವಾಮಿ, ಚಂದ್ರಪ್ಪ, ದೊರೆಸ್ವಾಮಿ, ಗೌಡನಹಳ್ಳಿ ರಮೇಶ್ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *