ಹಿರಿಯ ನಾಗರಿಕರಿಗೆ ನೇತ್ರ ತಪಾಸಣಾ ಶಿಬಿರ : ಸದುಪಯೋಗಕ್ಕೆ ಮನವಿ

2 Min Read

ಸುದ್ದಿಒನ್, ಚಿತ್ರದುರ್ಗ ಮಾ. 03 : ಜಿಲ್ಲೆಯ ಹಿರಿಯ ನಾಗರಿಕರಿಗೆ ಉಚಿತವಾಗಿ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ಅವರು ಹೇಳಿದರು.

 

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಇಲಾಖೆ ಸಹಾಯಯೋಗದೊಂದಿಗೆ ಚಿತ್ರದುರ್ಗ ನಗರದ ಬಾಲ ಭವನದಲ್ಲಿ ಏರ್ಪಡಿಸಲಾದ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರಿಯರಿಗೆ ಕಣ್ಣು, ಕಿವಿ, ಹಲ್ಲುಗಳು ವಯಸ್ಸಿನ ಕಾರಣ ಸಹಜವಾಗಿ ಆಗಾಗ ತೊಂದರೆಗಳನ್ನು ಕೊಡುತ್ತಿರುತ್ತವೆ. ಈ ದಿನ ವಿಶೇಷವಾಗಿ ವಿಶ್ವ ಶ್ರವಣ ದಿನ.  ಕೇಳಿಸಿಕೊಳ್ಳುವುದು, ನೋಡುವುದು, ಊಟ ಮಾಡುವುದು, ಸರಳವಾಗಿದ್ದಲ್ಲಿ ಎಲ್ಲರ ಜೀವನ ಸುಗಮವಾಗಿ ಸಾಗುತ್ತದೆ. ಈ ರೀತಿಯ ಶಿಬಿರಗಳು ಎಲ್ಲಾ ಹಿರಿಯ ನಾಗರಿಕರಿಗೆ ಅನುವು ಮಾಡಿಕೊಡುತ್ತದೆ.  ಕಣ್ಣಿನ ತಪಾಸಣೆ, ಕಣ್ಣಿನ ಪೆÇರೆ ಚಿಕಿತ್ಸೆ, ಕನ್ನಡಕಗಳ ವಿತರಣೆ ಆರೋಗ್ಯ ಇಲಾಖೆಯಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ.  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ ಅವರು ಮಾತನಾಡಿ, ಸರ್ಕಾರದ ಮಾರ್ಗದರ್ಶನದಂತೆ ಹಿರಿಯ ನಾಗರಿಕರಿಗೆ ಪ್ರತಿ ತಾಲೂಕಿನಲ್ಲೂ ಎರಡು ಶಿಬಿರಗಳನ್ನು ಆಯೋಜಿಸುವಂತೆ ಸೂಚಿಸಲಾಗಿತ್ತು. ಅದರಂತೆ ಮೊದಲ ಹಂತದ ತಪಾಸಣಾ ಶಿಬಿರಗಳು ಎಲ್ಲಾ ತಾಲೂಕುಗಳಲ್ಲಿಯೂ ಯಶಸ್ವಿಯಾಗಿ ಜರುಗಿದೆ. ಎರಡನೇ ಹಂತದ ಶಿಬಿರ ಫೆಬ್ರುವರಿ 24 ರಿಂದ ಪ್ರಾರಂಭವಾಗಿದ್ದು ಈ ದಿನ ಚಿತ್ರದುರ್ಗ ತಾಲೂಕಿನಲ್ಲಿ ನಡೆಯುತ್ತಿದೆ ಎಂದರು.

ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ವೈದ್ಯರಾದ ಡಾ. ಪ್ರದೀಪ್ ಬಿ.ಜಿ. ಮಾತನಾಡಿ, ಮೊದಲ ಹಂತದ ತಪಾಸಣಾ ಶಿಬಿರಗಳಲ್ಲಿ 38 ಹಿರಿಯ ನಾಗರಿಕ ಫಲಾನುಭವಿಗಳಿಗೆ ಯಶಸ್ವಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲೆಯಾದ್ಯಂತ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸಿದೆ. ಕಣ್ಣಿನ ಪೊರೆ ರೋಗವಲ್ಲ ವಯೋಸಹಜ ಪ್ರಕ್ರಿಯೆ, ಪೊರೆಯನ್ನು ತೆಗೆದು ಶಸ್ತ್ರ ಚಿಕಿತ್ಸೆ ನೀಡಿದಲ್ಲಿ ಕಣ್ಣು ಸಂಪೂರ್ಣ ಕಾಣುತ್ತದೆ.  ದಿನ ನಿತ್ಯದ ಒಪಿಡಿಯಲ್ಲಿ ಹಿರಿಯ ನಾಗರಿಕರು ನಿಂತು ಕಾದು ಚಿಕಿತ್ಸೆ ಪಡೆಯುವುದಕ್ಕಿಂತ ಈ ರೀತಿಯ ಶಿಬಿರಗಳಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಳ್ಳುವುದರಿಂದ ಸುಲಭವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ವಿಜಯ್ ಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ನೇತ್ರ ಸಹಾಯಕ ಅಧಿಕಾರಿಗಳಾದ ರಾಮು ಬರ್ಕತಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ನೇತ್ರ ಸಹಾಯಕ ಅಧಿಕಾರಿ ಮೈತ್ರ ರಾಘವೇಂದ್ರ, ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಮೈಲಾರಪ್ಪ ಸೇರಿದಂತೆ 60 ಕ್ಕೂ ಹೆಚ್ಚು ಹಿರಿಯ ನಾಗರಿಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *