ಉಡುಪಿ; ನಿನ್ನೆಯಷ್ಟೇ 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ, ಚಿತ್ರರಂಗದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಡಿಸಿಎಂ ಹೇಳಿಕೆಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಇಂದು ಕೂಡ ತಮ್ಮ ಹೇಳಿಕೆಯ ಮೇಲೆ ನಿಂತಿದ್ದು, ಮತ್ತೆ ಸಿನಿಮಾರಂಗದವರ ವಿರುದ್ಧ ಹರಿಹಾಯ್ದಿದ್ದಾರೆ.

ಉಡುಪಿಯಲ್ಲಿ ಚಲನಚಿತ್ರೋತ್ಸವದ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಿನಿಮಾದವರು ಏನು ಬೇಕಾದರೂ ಮಾತಾಡಿಕೊಳ್ಳಲಿ. ಅವರು ಹೋರಾಟವನ್ನೇ ಮಾಡಲಿ, ಪ್ರತಿಭಟನೆ ಮಾಡಲಿ, ನಾನು ಇರುವ ಸತ್ಯವನ್ನೇ ಹೇಳಿದ್ದೇನೆ. ಅವರು ಯಾವಾಗಲೂ ನೆಲ,ಜಲದ ಬಗ್ಗೆ ಪಕ್ಷಾತೀತ ಸಹಕಾರವನ್ನೇ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಮೇಕೆದಾಟು ಯೋಜನೆ ಹೋರಾಟಕ್ಕೆ ಯಾರೂ ಬರಲಿಲ್ಲ. ಮೇಕೆದಾಟು ಯೋಜನೆಗೆ ಬಂದ ಪ್ರೇಮ್ ಕೇಸ್ ಹಾಕಿಸಿಕೊಂಡ. ದುನಿಯಾ ವಿಜಯ್ ಮತ್ತು ಸಾಧು ಕೋಕಿಲ ಮೇಲೂ ಕೇಸ್ ಹಾಕಿದರು. ಬಿಜೆಪಿಯವರು ಕೇಸ್ ಹಾಕಿದರು.

ನಿನ್ನೆ ನಡೆದ ಫಿಲ್ಮ್ ಫೆಸ್ಟಿವಲ್ ನನ್ನದಾ..? ಚಿತ್ರರಂಗದ್ದು. ಅದಕ್ಕೇನೆ ಅನೇಕರು ಬಂದಿರಲಿಲ್ಲ. ಫಿಲ್ಮ್ ಫೆಸ್ಟಿವಲ್ ಸತ್ತು ಹೋಗಿದೆ, ಚಿತ್ರಮಂದಿರಗಳೆಲ್ಲಾ ಮುಚ್ಚಿ ಹೋಯ್ತು, ಊಟ ಇಲ್ಲ ಅಂತೆಲ್ಲಾ ಚಿತ್ರರಂಗದವರು ಮಾತಾಡುತ್ತಾರೆ. ಆದರೆ ಫಿಲ್ಮ್ ಫೆಸ್ಟಿವಲ್ ಗೆ ಪ್ರೋತ್ಸಾಹ ಮಾತ್ರ ಇಲ್ಲ. ಹಾಗಾದ್ರೆ ಅಂತರಾಷ್ಟ್ರೀಯ ಚಿತ್ರೋತ್ಸವ ಸರ್ಕಾರ ಯಾರಿಗಾಗಿ ಮಾಡ್ತಾ ಇದೆ. ಚಿತ್ರರಂಗ ಎಂದರೆ, ನಟ-ನಟಿ, ಟೆಕ್ನಿಷಿಯನ್ಸ್ ಎಲ್ಲಾ ಇದ್ದಾರೆ. ಅವರಿಗೆ ಸಂಬಂಧಿಸಿದ ಹಬ್ಬವನ್ನ ಅವರೇ ಮಾಡಿಕೊಳ್ಳಲಿಲ್ಲ ಎಂದರೆ ಹೇಗೆ..? ಎಂದು ಚಿತ್ರೋತ್ಸವಕ್ಕೆ ಕಲಾವಿದರೇ ಬಾರದೆ ಇದ್ದದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರದ್ದೇ ಹಬ್ಬವಾದರೂ ಬರಲಿಲ್ಲವಲ್ಲ ಎಂಬ ಆಕೋಪ ಅವರದ್ದು.

