ವರದಿ ಮತ್ತು ಫೋಟೋ ಕೃಪೆ

ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ನ್ಯಾಯಮೂರ್ತಿ ಸದಾಶಿವ ಹಾಗೂ ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರ ಶೀಘ್ರವೇ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಶೋಷಿತರ ವಾದ) ಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸದಾಶಿವ ಆಯೋಗ ಹಾಗೂ ಕಾಂತರಾಜ್ ಆಯೋಗದ ವರದಿ ಜಾರಿಯಾಗಿ ಹತ್ತದಿನೈದು ವರ್ಷಗಳು ಕಳೆದಿದ್ದರೂ ಇಲ್ಲಿಯವರೆಗೂ ಆಡಳಿತ ನಡೆಸಿದ ಪಕ್ಷಗಳು ಈಗಿನ ಕಾಂಗ್ರೆಸ್ ಸರ್ಕಾರ ಅನುಷ್ಟಾನಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದರಿಂದ ಹಿಂದುಳಿದವರು, ದಲಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಶೋಷಿತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಳ ಮೀಸಲಾತಿಯನ್ನು ಜಾರಿಗೆ ತರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್ ಮಾತನಾಡಿ ಅನಾದಿ ಕಾಲದಿಂದಲೂ ಜೀವನೋಪಾಯಕ್ಕಾಗಿ ಕಂದಾಯ ಮತ್ತು ಅರಣ್ಯ ಇಲಾಖೆ ಭೂಮಿಯನ್ನು ಸಾಗುವಳಿ ಮಾಡುತ್ತಿರುವವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸಾಗುವಳಿ ಪತ್ರಗಳನ್ನು ನೀಡಬೇಕು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಇಪ್ಪತ್ತು ವರ್ಷಗಳ ಹಿಂದೆ ಜಿಲ್ಲಾಡಳಿತದಿಂದ 2 ಸಾವಿರ ನಿವೇಶನಗಳನ್ನು ವಿಂಗಡಿಸಲಾಗಿತ್ತು. ಅದರಲ್ಲಿ ನಿಜವಾದ ಬಡವರಿಗೆ ನಿವೇಶನಗಳು ಸಿಕ್ಕಿಲ್ಲ. ಕೊಳಗೇರಿಗಳಲ್ಲಿರುವವರಿಗೆ ಸ್ವಂತ ಮನೆಗಳಿಲ್ಲ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಅರ್ಹರಿಗೆ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿದರು.

