ಬೆಂಗಳೂರು; ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ನಡುವೆ ವಾಕ್ಸಮರ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಮಹಾಕುಂಭಮೇಳದ ಬಗ್ಗೆ ಮಾತಾಡಿದ್ದರು. ಆದರೂ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಫ್ಯಾಮಿಲಿ ಸಮೇತ ಮಹಾ ಕುಂಭಮೇಳಕ್ಕೆ ಹೋಗಿ ಬಂದಿದ್ದರು. ಅದರ ವಿಡಿಯೋ ಕೂಡ ಹಂಚಿಕೊಂಡಿದ್ದರು. ಇದರ ನಡುವೆ ಇದೀಗ ಸದ್ಗುರು ಅವರು ಆಹ್ವಾನಿಸಿದ್ದಂತ ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಶಿವರಾತ್ರಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು.

ಇದು ಎಐಸಿಸಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ನೇರವಾಗಿಯೇ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಪಿವಿ ಮೋಹನ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಡಿಕೆ ಶಿವಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಹೋಗಬಾರದಿತ್ತು. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಡಿಕೆ ಶಿವಕುಮಾರ್ ಅವರು ಕೊಯಂಬತ್ತೂರಿನಲ್ಲಿ ನಡೆದ ಸದ್ಗುರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜಾತ್ಯಾತೀತ ಪಕ್ಷದ ಅಧ್ಯಕ್ಷರಾಗಿ, ಜಾತ್ಯಾತೀತ ಸರ್ಕಾರದ ಡಿಸಿಎಂ ಆಗಿದ್ದಾರೆ. ರಾಷ್ಟ್ರದ ಭರವಸೆಯ ಸಂಕೇತ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡಿದ ವ್ಯಕ್ತಿಗೆ ಸಾರ್ವಜನಿಕ ಧನ್ಯವಾದ ಸಲ್ಲಿಸುವುದು ಸರೀನಾ? ಎಂದು ಪ್ರಶ್ನೆ ಮಾಡಿದ್ದರು.

ಇದೀಗ ಪಿ ವಿ ಮೋಹನ್ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಟಾಂಗ್ ಕೊಟ್ಟಿದ್ದು, ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ಆದರೆ ನಾನು ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ. ನಾನು ಬಿಜೆಪಿಯವರ ಜೊತೆಗೆ ಕ್ಲೋಸ್ ಆಗಿದ್ದೇನೆಂದು ಹೇಳುತ್ತಿದ್ದಾರೆ. ನಾನು ಜೈಲಿನಲ್ಲಿದ್ದಾಗ ಸಿಖ್ ಧರ್ಮದ ಬಗ್ಗೆ ತಿಳಿದುಕೊಂಡಿದ್ದೇನೆ. ಕುಂಭಮೇಳದಲ್ಲಿ ಮಾಡಿದ ವ್ಯವಸ್ಥೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದೇನೆ. ಎಲ್ಲೋ ಒಂದೆರಡು ತೊಂದರೆಗಳು ಆಗಿರಬಹುದು’ ಎಂದು ತಿರುಗೇಟು ನೀಡಿದ್ದಾರೆ.

