ಚಿತ್ರದುರ್ಗ : ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಎಐಡಿಎಸ್ಓ ಮನವಿ

3 Min Read

 

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 26 : ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಖಾತ್ರಿಪಡಿಸಬೇಕು ಹಾಗೂ ಸರ್ಕಾರಿ ಶಾಲೆಗಳ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಎಐಡಿಎಸ್ಓ ಚಿತ್ರದುರ್ಗ ಜಿಲ್ಲಾ ಸಮಿತಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಮೂರು ವರ್ಷಗಳಿಂದ ರಾಜ್ಯದ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆತಿಲ್ಲ. ರಾಜ್ಯದ ಹಲವೆಡೆ ಕೆಲವು ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ 2022 ರಲ್ಲಿ ಸುಮಾರು ಶೇ. 40 ವಿದ್ಯಾರ್ಥಿಗಳಿಗೆ, 2023 ರಲ್ಲಿ ಶೇ. 65 ವಿದ್ಯಾರ್ಥಿಗಳಿಗೆ, 2024 ರಲ್ಲಿ ಶೇ. 95 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲದೇ ಇರುವುದು ಶೋಚನೀಯ ಪರಿಸ್ಥಿತಿ. ಬಹುಪಾಲು ವಿದ್ಯಾರ್ಥಿಗಳಿಗೆ ಸುಮಾರು ₹50 ಸಾವಿರಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ಬಾರದಿರುವುದು ಆತಂಕದ ಸಂಗತಿಯಾಗಿದೆ. ರಾಜ್ಯದಲ್ಲಿ 10ಲಕ್ಷಕ್ಕೂ ಹೆಚ್ಚಿನ ವಿದ್ಯಾಥಿಗಳು ವಿದ್ಯಾರ್ಥಿವೇತನದ ಮೇಲೆ ಅವಲಂಬಿತರಾಗಿ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಬರದೆ ಇರುವುದು ಅತ್ಯಂತ ದುಖಃಕರ. ವಿದ್ಯಾರ್ಥಿ ವೇತನವು ಸರ್ಕಾರದ ಭಿಕ್ಷೆಯಲ್ಲ ಅದು ನಮ್ಮ ಹಕ್ಕು. ಪ್ರಸ್ತುತ ದಿನದಲ್ಲಿ ಉನ್ನತ ಶಿಕ್ಷಣದ ವೆಚ್ಚ ಅತ್ಯಂತ ಅಧಿಕವಾಗುತ್ತಿದೆ, ಇನ್ನೊಂದೆಡೆ ಕ್ರಮೇಣವಾಗಿ ವಿದ್ಯಾರ್ಥಿ ವೇತನ ಕಡಿತಗೊಳಿಸುವುದರಿಂದ ಅಧಿಕ ಪ್ರಮಾಣದ ರೈತ ಕಾರ್ಮಿಕರನ್ನು ಒಳಗೊಂಡಂತೆ ಬಡಜನರ ಮಕ್ಕಳ ಶಿಕ್ಷಣದ ಕನಸು ಕನಸುಗಳಾಗಿ ಉಳಿದು ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ. ಕ್ರಮೇಣ ರಾಜ್ಯದಲ್ಲಿ ವಿದ್ಯಾರ್ಥಿವೇತನವನ್ನೇ ಕಡಿತಗೊಳಿಸುವ ಪರಿಸ್ಥಿತಿ ಉಂಟಾಗುವ ಆತಂಕ ರಾಜ್ಯದ ವಿದ್ಯಾರ್ಥಿಗಳಿಗಿದೆ. ಇದನ್ನು ಕಸಿದುಕೊಳ್ಳುವ ಸರ್ಕಾರದ ನಡೆಯನ್ನು ಒಪ್ಪೋದಿಲ್ಲ, ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕು.

ಇತ್ತೀಚೆಗಷ್ಟೆ ರಾಜ್ಯ ಸರ್ಕಾರವು ‘ಹಬ್ ಅಂಡ್ ಸ್ಪೋಕ್’ ಅಡಿಯಲ್ಲಿ ಕಡಿಮೆ ಹಾಜರಾತಿ ಇರುವ ಸರ್ಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಹಾಗೆಯೆ ರಾಜ್ಯ ಸರ್ಕಾರವು 6,000 ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುತ್ತಿರುವುದು ಶಿಕ್ಷಣ ವಿರೋಧಿ ನಿಲುವಾಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ರಾಜ್ಯದ ವಿದ್ಯಾರ್ಥಿಗಳ ಹಾಗೂ ಪೋಷಕರ ವ್ಯಾಪಕ ಪ್ರತಿರೋಧದ ನಡುವೆಯೂ ಶಾಲೆಗಳನ್ನು ಮುಚ್ಚುತ್ತಿರುವುದು ರಾಜ್ಯ ಸರ್ಕಾರದ ಭಂಡತನವನ್ನು ಎತ್ತಿ ತೋರಿಸಿದೆ. ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಅನುಸರಿಸಿದೆ ಏಕಾಏಕಿ ಶಾಲೆಗಳನ್ನು ಮುಚ್ಚುತ್ತಿರುವ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ನಿಲುವು ಸರಿಯಲ್ಲ.

ಆದ್ಯತೆಯ ಮೇರೆಗೆ ಸರ್ಕಾರವು ಶಿಕ್ಷಣಕ್ಕೆ ಬಜೆಟ್ ನಲ್ಲಿ ಅನುದಾನ ನಿಗದಿಪಡಿಸಬೇಕು ಮತ್ತು ಎಲ್ಲ ವಿಭಾಗದ ಮತ್ತು ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಸಂಯೋಜನೆಗೊಳಿಸುವ ಬದಲು ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯ ನೀಡಿ ರಕ್ಷಿಸಬೇಕೆಂದು ಈ ಮೂಲಕ ಎಐಡಿಎಸ್‌ಓ ಆಗ್ರಹಪೂರ್ವಕ ಮನವಿ ಮಾಡುತ್ತೇದೆ ಎಂದರು.

ಈ ವರ್ಷದ ಜನವರಿ ತಿಂಗಳಲ್ಲಿ ವಿದ್ಯಾರ್ಥಿವೇತನದ ಕುರಿತು ಬಿಸಿಎಂ ಇಲಾಖೆಯಿಂದ ದೊರೆತ ಅಧಿಕೃತ ಮಾಹಿತಿಯ: ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ ದೊರೆಯದ ವಿದ್ಯಾರ್ಥಿಗಳು

2020-21      26236
2021-22    107735
2022-23    104376
2023-24    252025

ಒಟ್ಟು 490372 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಂ.ಶಾಂತಿ ಸೇರಿದಂತೆ‌ ಎಐಡಿಎಸ್ಓ ಸದಸ್ಯರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *