ಸುದ್ದಿಒನ್, ಚಿತ್ರದುರ್ಗ, (ಡಿ.07): ಸ್ಥಳೀಯ ಸಂಸ್ಥೆಗಳ ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಬಿ.ಸೋಮಶೇಖರ್ ಗೆಲುವು ಈಗಾಗಲೇ ನಿಶ್ಚಿತಗೊಂಡಿದ್ದು, ಮತಗಳ ಅಂತರ ಬಾಕಿ ಉಳಿದಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಹೇಳಿದರು.
ಸುದ್ದಿಒನ್ ನೊಂದಿಗೆ ಮಾತನಾಡಿದ ಅವರು, ಬಿ.ಸೋಮಶೇಖರ್ ಅವರು ಸ್ನೇಹಿಜೀವಿ, ಅತ್ಯಂತ ಸರಳ ವ್ಯಕ್ತಿ. ಜೊತೆಗೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಗ್ರಾಪಂ ಅಧ್ಯಕ್ಷರಾಗಿದ್ದ ವೇಳೆ ಇಡೀ ರಾಜ್ಯವೇ ನಿಬ್ಬೆರಗಾಗುವಂತೆ 12 ಕೋಟಿ ರೂಪಾಯಿ ಅನುದಾನ ತಂದು ತಮ್ಮ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಗೊಳಿಸಿದ ವ್ಯಕ್ತಿಯಾಗಿದ್ದಾರೆ. ಇದೇ ಕಾರಣಕ್ಕೆ ಪಕ್ಷ ಅವರ ಜನಪರ ಕಾಳಜಿ, ಕಾರ್ಯವೈಖರಿ, ಬದ್ಧತೆ, ಗ್ರಾಮೀಣ ಜನರ ಹಿತಾಸಕ್ತಿ ಕಂಡು ಅನೇಕ ಸ್ಥಾನಮಾನಗಳನ್ನು ನೀಡಿತ್ತು ಎಂದರು.
ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪಕ್ಷದ ವಿವಿಧ ಸ್ಥಾನ ಅಲಂಕರಿಸಿದ್ದ ಬಿ.ಸೋಮಶೇಖರ್, ಪಕ್ಷ ಸಂಘಟನೆ ಜೊತೆಗೆ, ಹಳ್ಳಿ ಜನರ ಹಿತಾಸಕ್ತಿಗೆ ಶ್ರಮಿಸಿದ್ದಾರೆ. ಇವರ ಈ ಬದ್ಧತೆ ಗಮನಿಸಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಾವಯವ ಕೃಷಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಪಕ್ಷ ಅವಕಾಶ ನೀಡಿತ್ತು.
ಈ ಅವಧಿಯಲ್ಲಿ ಅವರು ಕೃಷಿಕರ ಪರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಜೊತೆಗೆ ಒಂದು ಊರು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಇವರ ಬದ್ಧತೆ ನಿಜಕ್ಕೂ ಮಾದರಿ ಆಗಿದೆ. ಐಎಎಸ್, ಐಪಿಎಸ್ ಸೇರಿದಂತೆ ಆಡಳಿತ ಯಂತ್ರದಲ್ಲಿರುವ ಅನೇಕ ಹಿರಿಯ ಅಧಿಕಾರಿಗಳ ವಿಶ್ವಾಸ ಗಳಿಸಿದ್ದಾರೆ. ಇವರಿಂದ ಚಿತ್ರದುರ್ಗ-ದಾವಣಗೆರೆ ಜಿಲ್ಲೆಗೆ ಬಹಳಷ್ಟು ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ನಾವೆಲ್ಲರೂ ಒಮ್ಮತದ ಅಭ್ಯರ್ಥಿಯನ್ನಾಗಿಸಿದ್ದೇವೆ.
ನಾನು ಸೇರಿದಂತೆ ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಮಾಜಿ ಶಾಸಕ ಎ.ವಿ.ಉಮಾಪತಿ ಅನೇಕರನ್ನು ಸ್ಪರ್ಧಿಸುವಂತೆ ಪಕ್ಷ ಹೇಳಿತ್ತು. ಆದರೆ ನಾವೆಲ್ಲರೂ ಚಿತ್ರದುರ್ಗ-ದಾವಣಗೆರೆ ಜಿಲ್ಲೆಯ ಹಿತಾದೃಷ್ಟಿಯಿಂದ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಕುರಿತು ಹೆಚ್ಚು ತಿಳುವಳಿಕೆ ಇರುವ ಬಿ.ಸೋಮಶೇಖರ್ ಅವರನ್ನು ಕಣಕ್ಕೆ ಇಳಿಸುವಂತೆ ಮಾಡಿಕೊಂಡ ಮನವಿಗೆ ಪಕ್ಷ ಸಮ್ಮತಿಸಿ, ಟಿಕೆಟ್ ನೀಡಿದೆ. ಇವರ ಗೆಲುವು ಈಗಾಗಲೇ ನಿಶ್ಚಿತವಾಗಿದ್ದು, ದಾಖಲೆ ರೀತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳಬೇಕಾದ ಹೊಣೆಗಾರಿಕೆ ಅವಳಿ ಜಿಲ್ಲೆಯ ಮುಖಂಡರ ಮೇಲಿದೆ ಎಂದರು.
ಈಗಾಗಲೇ ಬಿ.ಸೋಮಶೇಖರ್ ಅವರು ಗೆಲುವು ನಿಶ್ಚಿತಗೊಂಡಿದೆ. ಇವರ ಗೆಲುವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹನುಮಲಿ ಷಣ್ಮುಖಪ್ಪ ಹೇಳಿದರು.
ನಾನು ಸೇರಿದಂತೆ ಅನೇಕ ಮುಖಂಡರು ಜಿಲ್ಲೆಯಾದ್ಯಂತ ಪ್ರವಾಸ ನಡೆಸಿದ್ದೇವೆ. ಈ ವೇಳೆ ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಅನೇಕ ಸದಸ್ಯರು ನಮ್ಮೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳಲು ಹೆಚ್ಚು ಆಸಕ್ತಿ ತೋರಿದ್ದಾರೆ. ಇದಕ್ಕೆ ಕಾರಣ ಬಿ.ಸೋಮಶೇಖರ್ ಅವರಲ್ಲಿರುವ ಸರಳತೆ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ಉತ್ತಮ ಎಂಬ ನಂಬಿಕೆ ಆಗಿದೆ ಎಂದರು.