ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 25 : ಭಾರತದ ಪ್ರತಿಯೊಬ್ಬ ಪ್ರಜೆಗಳನ್ನು ರಕ್ಷಣೆ ಮಾಡುವ ಸಂವಿಧಾನಕ್ಕೆ ಅಪಾಯವಾದರೆ ಜನಸಾಮಾನ್ಯರ ಪಾಡೇನು? ಈ ಕುರಿತು ಬುದ್ದಿ ಜೀವಿಗಳು, ಪ್ರಜ್ಞಾವಂತರು ಚಿಂತಿಸಬೇಕಿದೆ ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ನುಡಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಯಾನ ದೇಶ ರಕ್ಷಣೆಯ ಹೊಣೆ ನಮ್ಮದಾಗಿಸಿಕೊಳ್ಳೋಣ ಬನ್ನಿ ಸಂವಿಧಾನ ರಕ್ಷಣಾ ಪಡೆಗೆ ಸೇರ್ಪಡೆಯಾಗೋಣ ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನಕ್ಕೆ 140 ವರ್ಷಗಳ ಶಕ್ತಿಯಿದೆ. ಯಾರ ಸ್ವತ್ತಲ್ಲ. ಸಂವಿಧಾನ ಆಶಯಗಳಿಗೆ ವಿರುದ್ದವಾದ ಘಟನೆಗಳು ನಡೆಯುತ್ತಿರುವುದನ್ನು ಪ್ರಶ್ನಿಸಿದರೆ ಸಾಯಿಸುತ್ತಾರೆ ಇಲ್ಲ ಜೈಲಿಗೆ ಕಳಿಸುತ್ತಾರೆ. ಶಬರಿಮಲೈಗೆ ಮಹಿಳೆಯೊಬ್ಬರು ಪ್ರವೇಶಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪನ್ನು ಕೇಂದ್ರ ಸರ್ಕಾರ ಸ್ವಾಗತಿಸಬೇಕಿತ್ತು. ಗೃಹ ಸಚಿವ ಅಮಿತ್‍ಷಾ ಗೇಲಿ ಮಾಡಿದರು. ಆಗ ನಿಜವಾಗಿಯೂ ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಬೇಕಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದಾಗ ದೇಶದ ಪ್ರಧಾನಿ ಸಮರ್ಥಿಸಿಕೊಂಡರು. ಇವೆಲ್ಲವನ್ನು ಗಮನಿಸಿದಾಗ ಸಂವಿಧಾನಕ್ಕೆ ಗಂಡಾಂತರವಿದೆ ಎನ್ನುವುದು ಗೊತ್ತಾಗುತ್ತದೆಂದು ಹೇಳಿದರು.
ಸಂವಿಧಾನದ ಗೆರೆಯನ್ನು ದಾಟಿದ ಪ್ರಧಾನಿ ಇಂದಿರಾಗಾಂಧಿಗೆ ಯಾವ ಸ್ಥಿತಿಯಾಯಿತು ಎನ್ನುವುದನ್ನು ಈಗಿನ ಪ್ರಧಾನಿ ಮೋದಿ ಅರ್ಥಮಾಡಿಕೊಂಡು ಸಂವಿಧಾನವನ್ನು ಗೌರವಿಸಬೇಕು. ಗೌರಿ ಲಂಕೇಶ್, ಎಂ.ಎಂ.ಕಲುಬುರ್ಗಿ ಇವರುಗಳನ್ನು ಹತ್ಯೆಗೈದ ಹಂತಕರನ್ನು ಇನ್ನು ಪತ್ತೆ ಹಚ್ಚಲು ಆಗಿಲ್ಲ. ಸಂವಿಧಾನ ದೊಡ್ಡದು. ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗಕ್ಕೆ ಕೈಹಾಕುತ್ತಿದೆ. ಚುನಾವಣಾ ಪ್ರಕ್ರಿಯೆ ಕುಲಗೆಟ್ಟಿದೆ. ಒಕ್ಕೂಟದ ವ್ಯವಸ್ಥೆ ನಾಶವಾಗುತ್ತಿದೆ. ಹಿಂದಿ ಹೇರಿಕೆ ಅಕ್ಷಮ್ಯ ಅಪರಾಧ.
ಬಹುತ್ವ, ಸಾಮರಸ್ಯ, ಸಹಬಾಳ್ವೆಯನ್ನು ಕೆಡಿಸುವ ಕೆಲಸವಾಗುತ್ತಿದೆ ಎಂದು ವಿಷಾಧಿಸಿದರು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ ಸಂವಿಧಾನವನ್ನು ಪೂರ್ಣವಾಗಿ ಅಧ್ಯಯನ ಮಾಡಿದ್ದೇವಾ ಎನ್ನುವುದನ್ನು ವಕೀಲರಿಂದ ಹಿಡಿದು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲದಲ್ಲಿವೆ. ಅಕ್ಷರಜ್ಞಾನವುಳ್ಳ ಪ್ರತಿಯೊಬ್ಬ ನಾಗರೀಕನು ಇದನ್ನು ಅರ್ಥಮಾಡಿಕೊಳ್ಳಬೇಕು. ಜಸ್ಟಿಸ್ ನಾಗಮೋಹನ್‍ದಾಸ್ ಸಂವಿಧಾನವನ್ನು ಎಲ್ಲರೂ ಓದಬೇಕೆಂದು ಹೇಳಿದ್ದಾರೆ. ಅದರ ಪ್ರಕಾರ ಸಂವಿಧಾನ ತಿಳಿದುಕೊಂಡರೆ ಮಾತ್ರ ದೇಶ ಸುರಕ್ಷಿತವಾಗಿರಲು ಸಾಧ್ಯ ಎಂದರು.
ದೇಶ ಮತ್ತು ಸಂವಿಧಾನವನ್ನು ರಕ್ಷಿಸಬೇಕಿದೆ. ಸಂವಿಧಾನಕ್ಕೆ ಅಪಚಾರವಾದಾಗ ಕಾನೂನು ಉಲ್ಲಂಘನೆಯಾದಂತಾಗುತ್ತದೆ. ಸಂಘಟನೆ, ಶಕ್ತಿ, ಸಹಕಾರದಿಂದ ಮಾತ್ರ ಸಂವಿಧಾನ ಉಳಿಸಬಹುದು. ಸಂವಿಧಾನಕ್ಕೆ ಕೆಟ್ಟದಾಗುತ್ತಿದೆಯೆನ್ನುವುದನ್ನು ಕೇಳಿಸಿಕೊಂಡರೆ ಪ್ರತಿಭಟಿಸದೆ ಸುಮ್ಮನಿರುವುದು ಹೇಡಿತನ ಎಂದು ವ್ಯಂಗ್ಯವಾಡಿದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡುತ್ತ ಭಾರತವನ್ನು ನೂರಾರು ವರ್ಷಗಳ ಕಾಲ ಬ್ರಿಟೀಷರು ಆಳಿದರು. ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವಾಗಿಟ್ಟುಕೊಂಡು ಗಾಂಧಿ ಬ್ರಿಟಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಇದರ ಹಿಂದೆ ಅನೇಕ ಮಹನೀಯರ ತ್ಯಾಗ ಬಲಿದಾನವಿದೆ. ದುರಂತವೆಂದರೆ ನಮ್ಮವರೆ ಗಾಂಧಿಯನ್ನು ಕೊಂದಿದ್ದು, ಎಂದರು.
ಇಂದಿರಾಗಾಂಧಿ, ರಾಜೀವ್‍ಗಾಂಧಿ ಹತ್ಯೆಯಾಯಿತು. ಬಲ್ಕಿಸ್‍ಭಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸೆಷನ್ಸ್ ನ್ಯಾಯಾಲಯ ಹನ್ನೊಂದು ಆರೋಪಿಗಳಿಗೆ ಸಜೆ ನೀಡಿದ್ದನ್ನು ಹೈಕೋಟ್ ಮತ್ತು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಆಗ ಕೇಂದ್ರ ಸರ್ಕಾರ ರಾಷ್ಟ್ರಪತಿಗೆ ಪತ್ರ ಬರೆದ ಪರಿಣಾಮ ಎಲ್ಲರನ್ನು ಖುಲಾಸೆಗೊಳಿಸಿತು. ಇದನ್ನು ನೋಡಿದರೆ ಸಂವಿಧಾನ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಕಾಡುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಾನೂನನ್ನೆ ಕೈಗೆ ತೆಗೆದುಕೊಳ್ಳುವುದಾದರೆ ಸಂವಿಧಾನ ಕಾನೂನು ಏಕೆ ಇರಬೇಕು? ಕೇಶವಾನಂದಭಾರತಿರವರ ತೀರ್ಪು ಎತ್ತಿ ಹಿಡಿದು ಸಂವಿಧಾನ ರಕ್ಷಿಸಬೇಕಿದೆ. ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಫುಲ್‍ಬೆಂಚ್ ನ್ಯಾಯ ಪೀಠದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ತೀರ್ಪು ನೀಡಿರುವುದನ್ನು ನೋಡಿದರೆ ಸಂವಿಧಾನ ಅಪಾಯದಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ನ್ಯಾಯವಾದಿ ಸಿ.ಶಿವುಯಾದವ್ ಮಾತನಾಡಿ ಸಂವಿಧಾನದ ಮೇಲೆ ಯಾರೆ ದಬ್ಬಾಳಿಕೆ ದೌರ್ಜನ್ಯವೆಸಗಿದರೆ ಎಲ್ಲರೂ ಪ್ರತಿಭಟಿಸಬೇಕು. ಸಂವಿಧಾನವನ್ನು ಬದಲಾಯಿಸುತ್ತೇವೆನ್ನುವುದೇ ಸಂವಿಧಾನ ವಿರೋಧಿ ಕೃತ್ಯ. ಸುಪ್ರೀಂಕೋರ್ಟ್‍ನ್ನು ಸರ್ಕಾರ ತನ್ನ ಹಿಡಿದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆಯೆಂದು ಬುದ್ದಿವಂತರು
ಚಿಂತಕರು ಹಾದಿ ಬೀದಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಂವಿಧಾನವನ್ನು ತಿದ್ದುಪಡಿಗೊಳಿಸಿ ಬದಲಾಯಿಸುತ್ತೇವೆನ್ನುವುದೇ ಅಪರಾಧ ಎಂದು ಹೇಳಿದರು.
ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಮಾತನಾಡುತ್ತ ದೇಶದ ಪ್ರತಿಯೊಬ್ಬರಿಗೂ ಸಮಾನತೆ ನೀಡಿರುವ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ಮನುವಾದಿಗಳು ಹೇಳುತ್ತಿದ್ದಾರೆ. ರಕ್ಷಣೆ ಮಾಡುವ ಕೆಲಸವಾಗಬೇಕು. ದೇವರು, ಧರ್ಮ, ಜಾತಿ ಹೆಸರಿನಲ್ಲಿ ದಬ್ಬಾಳಿಕೆ ನಡೆಯುತ್ತಿದೆ. ಸಂವಿಧಾನ ಉಳಿದರೆ ಬದುಕು ಉಳಿಯುತ್ತದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಮೌಲ್ಯಗಳು ನಾಶವಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ ಅಪಾಯದಲ್ಲಿರುವ ಸಂವಿಧಾನ ರಕ್ಷಿಸುವುದು ಎಲ್ಲರ ಹೊಣೆ. ಸಂವಿಧಾನ ಬದಲಾಯಿಸುವವರ ವಿರುದ್ದ ಪ್ರತಿರೋಧ ತೋರಬೇಕೆಂದು ಸಲಹೆ ನೀಡಿದರು.
ನಿವೃತ್ತ ಪಿ.ಯು. ಡಿ.ಡಿ.ಪಿ.ಐ. ಶಿವಕುಮಾರ್ ಮಾತನಾಡುತ್ತ ಸಂವಿಧಾನ ಹಾಳಾಗಿದೆ. ಕೇಂದ್ರ ಸರ್ಕಾರಕ್ಕೆ ಪ್ರತಿ ಪ್ರಜೆಯೂ ತೆರಿಗೆ ಕಟ್ಟುತ್ತಿದ್ದಾನೆ. ಆದರೆ ಅನ್ಯಾಯ ಅಕ್ರಮಗಳನ್ನು ಪ್ರಶ್ನಿಸುವಂತಿಲ್ಲ. ಸಂವಿಧಾನ ದಮನಗೊಳಿಸುವವರ ವಿರುದ್ದ ಹೋರಾಡಬೇಕಿದೆ ಎಂದರು.
ಯುವ ನ್ಯಾಯವಾದಿಗಳಾದ ಓ.ಪ್ರತಾಪ್‍ಜೋಗಿ, ಮಾಲತೇಶ್ ಅರಸ್, ಅಶೋಕ್‍ಬೆಳಗಟ್ಟ ಇವರುಗಳು ಮಾತನಾಡಿದರು. ನ್ಯಾಯವಾದಿ ಮಹಮದ್ ಸಾಧಿಕ್‍ವುಲ್ಲಾ, ಟಿ.ಶಫಿವುಲ್ಲಾ, ದಿಲ್‍ಶಾದ್ ಉನ್ನಿಸ, ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಇವರುಗಳು ವೇದಿಕೆಯಲ್ಲಿದ್ದರು.


