ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಕಡ್ಡಾಯ : ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚನೆ

4 Min Read

 

ಚಿತ್ರದುರ್ಗ ಫೆ. 19 : ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ನೀಡುತ್ತಿದ್ದ ಕಿರುಕುಳದಂತಹ ಹಾವಳಿ ತಡೆಗಟ್ಟಲು ಸರ್ಕಾರ ಸುಗ್ರೀವಾಜ್ಞೆ ಮೂಲಕ ಆಧ್ಯಾದೇಶ ಜಾರಿಗೊಳಿಸಿದ್ದು, ಇದರ ಅನ್ವಯ ಎಲ್ಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿ ಸಂಸ್ಥೆಗಳು 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚನೆ ನೀಡಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ಸರ್ಕಾರದ ಸುಗ್ರೀವಾಜ್ಞೆ ಆಧ್ಯಾದೇಶ ಕುರಿತಂತೆ ಮಾಹಿತಿ ಹಾಗೂ ಸೂಚನೆ ನೀಡುವ ಸಲುವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹಾವಳಿಗೆ ರಾಜ್ಯದಲ್ಲಿ ಅನೇಕ ಕುಟುಂಬಗಳು ಸಂಕಷ್ಟವನ್ನು ಅನುಭವಿಸಿದ್ದವು.  ಹೀಗಾಗಿ ಇಂತಹ ಕುಟುಂಬಗಳ ರಕ್ಷಣೆಗಾಗಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಆಧ್ಯಾದೇಶ ಹೊರಡಿಸಿದ್ದು, ಶೀಘ್ರವೇ ಇದು ಕಾನೂನು ಕೂಡ ಆಗಲಿದೆ.   ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಗಿರವಿ, ಲೇವಾದೇವಿ ಸಂಸ್ಥೆಗಳು ಈ ಹಿಂದಿನ ಕಾಯ್ದೆಯಂತೆ ಸಹಕಾರ ಸಂಘಗಳ ಉಪನಿಬಂಧಕರಲ್ಲಿ ನೊಂದಣಿ ಮಾಡಿಕೊಂಡಿದ್ದರೂ ಕೂಡ, ಸರ್ಕಾರದ ಆಧ್ಯಾದೇಶದ ಪ್ರಕಾರ ಎಲ್ಲರೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 30 ದಿನಗಳ ಒಳಗಾಗಿ ನೊಂದಣಿ ಮಾಡಿಕೊಳ್ಳಬೇಕು.  ನೊಂದಣಿ ಪರವಾನಿಗೆಯು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ನಂತರ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ. ನೊಂದಣಿ ಮಾಡಿಕೊಳ್ಳದಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.  ಪೊಲೀಸ್ ಇಲಾಖೆ ಕೂಡ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಸಂಸ್ಥೆಯಲ್ಲಿ ತನಿಖೆ ನಡೆಸಬಹುದಾಗಿದೆ.  ಸಾಲಗಾರರು ಹಾಗೂ ಸಾಲ ನೀಡುವ ಸಂಸ್ಥೆಯ ನಡುವೆ ನಡೆಯುವ ಒಪ್ಪಂದವು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿ ಇರಬೇಕು.  ಸಾಲ ನೀಡಿಕೆ, ವಸೂಲಾತಿ ವಿವರ, ಸಾಲಕ್ಕೆ ವಿಧಿಸಲಾಗುವ ಬಡ್ಡಿದರ, ಕಂತುಗಳ ವಿವರ, ಮರುಪಾವತಿ ತೀರುವಳಿ ಸೇರಿದಂತೆ ಯಾವುದೇ ಷರತ್ತು, ನಿಬಂಧನೆಗಳನ್ನು ಮುಚ್ಚಿಡದೆ, ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರಬೇಕು.  ಬಲವಂತದ ವಸೂಲಾತಿ ಹಾಗೂ ನಿಯಮ ಉಲ್ಲಂಘನೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಜಾಮೀನು ರಹಿತ ಬಂಧನ ಆಗಲಿದೆ.  ಅಪರಾಧಕ್ಕೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 05 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಚಿನ್ನ, ಸಾಲ ಪಡೆದವರ ಸರ್ಕಾರಿ ದಾಖಲೆಗಳು, ಆಸ್ತಿಪತ್ರಗಳನ್ನು ಅಡಮಾನವಾಗಿ ಇರಿಸಿಕೊಳ್ಳುವಂತಿಲ್ಲ.  ಒಂದು ವೇಳೆ ಇರಿಸಿಕೊಂಡಿದ್ದರೆ, ಅದನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಬೇಕು.  ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮುಖ್ಯ ಕಚೇರಿ ಹೊಂದಿರುವಂತಹ ಸಂಸ್ಥೆಗಳು ಕಡ್ಡಾಯವಾಗಿ ಸ್ಥಳೀಯವಾಗಿ ಕಚೇರಿ ಹೊಂದಿದ್ದು, ಸ್ಥಳೀಯವಾಗಿ ನೊಂದಣಿ ಮಾಡಿಕೊಂಡಿರಬೇಕು. ಸಂಸ್ಥೆಗಳು ಪ್ರತಿ ತ್ರೈಮಾಸಿಕ ಹಾಗೂ ವಾರ್ಷಿಕ ವರದಿ ತಖ್ತೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.  ತಪ್ಪಿದಲ್ಲಿ 6 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ.  ಸಾಲ ನೀಡಿದ ಸಂಸ್ಥೆಗಳು, ಸಾಲ ಪಡೆದವರಿಂದ ಬಲವಂತದ ಸಾಲ ವಸೂಲಾತಿ ಮಾಡುವುದು, ಮನೆಯ ಕುಟುಂಬ ಸದಸ್ಯರಿಗೆ ಕಿರುಕುಳ ಕೊಡುವುದು, ಅವಹೇಳನಕಾರಿ ಹಾಗೂ ನಿಂದನೆಯ ಮಾತುಗಳನ್ನಾಡುವುದು, ದೈಹಿಕ ಹಲ್ಲೆ, ಹಿಂಸೆ, ದಾಖಲೆ ವಶದಲ್ಲಿಟ್ಟುಕೊಂಡು ಬೆದರಿಕೆ ಕ್ರಮಗಳನ್ನು ಕೈಗೊಳ್ಳುವಂತಿಲ್ಲ.  ಇಂತಹ ಯಾವುದೇ ದೂರುಗಳನ್ನು ಪೊಲೀಸ್ ಅವರು ನಿರಾಕರಿಸುವಂತಿಲ್ಲ, ಜೊತೆಗೆ ಇದು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗುತ್ತದೆ.  ಇಂತಹ ದೂರುಗಳ ಬಗ್ಗೆ ಡಿವೈಎಸ್‍ಪಿ ವೃಂದ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಹುದಾಗಿದೆ ಎಂದರು.

ನಿಯಮ ದುರುಪಯೋಗ ಸಲ್ಲದು :
ಸರ್ಕಾರ ಹೊರಡಿಸಿರುವ ಆಧ್ಯಾದೇಶವನ್ನು ಸಾಲ ಪಡೆದವರು ಕೂಡ ದುರುಪಯೋಗ ಮಾಡಿಕೊಳ್ಳುವಂತಿಲ್ಲ.  ಒಂದು ವೇಳೆ ಇಂತಹ ಯಾವುದೇ ದೂರುಗಳ ವಿಚಾರಣೆಗಾಗಿ ಅಪರ ಜಿಲ್ಲಾಧಿಕಾರಿಗಳನ್ನು ಓಂಬುಡ್ಸ್‍ಮನ್ ಆಗಿ ನೇಮಿಸಲಾಗಿದ್ದು, ಪ್ರಕರಣದ ವಿಚಾರಣೆಯನ್ನು ನಡೆಸಿ, ಇವರ ವರದಿಯ ಆಧಾರದಲ್ಲಿ ತಪ್ಪಿತಸ್ಥರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಯಾವುದೇ ದೂರುಗಳು ಇದುವರೆಗೂ ಬಂದಿಲ್ಲ, ಆದಾಗ್ಯೂ ಯಾರೂ ಕೂಡ ನಿಯಮಗಳನ್ನು ಉಲ್ಲಂಘಿಸದೆ, ಕಾನೂನು ಕ್ರಮಗಳಿಗೆ ಅವಕಾಶ ಮಾಡಿಕೊಡದೆ, ಸುಗಮವಾಗಿ, ಕ್ರಮಬದ್ಧವಾಗಿ ಹಣಕಾಸಿನ ವ್ಯವಹಾರಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

 

ಸಹಾಯವಾಣಿ ಶೀಘ್ರ ಪ್ರಾರಂಭ : ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ ತಡೆಗೆ ಸರ್ಕಾರ ಹೊರಡಿಸಿರುವ ಆಧ್ಯಾದೇಶ ಕುರಿತಂತೆ, ಸಾಲ ನೀಡಿಕೆ, ಸಾಲ ವಸೂಲಿ ಮಾಡುವ ಕಾರ್ಯಗಳ ಬಗ್ಗೆ ಯಾವುದೇ ದೂರು ಅಥವಾ ಗೊಂದಲಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಶೀಘ್ರವೇ ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ, ಸಂಸ್ಥೆಗಳು ಸಾಲ ವಸೂಲಾತಿಗಾಗಿ ನೇಮಿಸಿಕೊಳ್ಳುವ ಸಿಬ್ಬಂದಿಗಳು, ಏಜೆನ್ಸಿಗಳ ಅಪರಾಧ ಹಿನ್ನೆಲೆಯನ್ನು ಪೊಲೀಸ್ ಇಲಾಖೆಯಿಂದ ಪರಿಶೀಲಿಸಿಕೊಂಡು, ಬಳಿಕವೇ ನೇಮಿಸಿಕೊಳ್ಳಬೇಕು.  ಈಗಾಗಲೆ ನೇಮಕ ಮಾಡಿಕೊಂಡಿರುವವರ ಅಪರಾಧ ಹಿನ್ನೆಲೆಯನ್ನು ಕೂಡ ಪರಿಶೀಲಿಸಿಕೊಳ್ಳಬೇಕು.  ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು, ಗೂಂಡಾ ಗಳನ್ನು ನೇಮಿಸಿಕೊಂಡಿದ್ದಲ್ಲಿ, ಸಂಬಂಧಪಟ್ಟ ಸಂಸ್ಥೆ ಕೂಡ ಇದರ ಕಠಿಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ.  ಹೀಗಾಗಿ ಯಾವುದೇ ಹಣಕಾಸು ಸಂಸ್ಥೆಗಳು ಪ್ರಕರಣ ದಾಖಲಿಸಿಕೊಳ್ಳುವ ರೀತಿ ಮಾಡಿಕೊಳ್ಳದೆ, ನಿಯಮಬದ್ಧವಾಗಿ ಹಣಕಾಸು ವ್ಯವಹಾರ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಡಿವೈಎಸ್‍ಪಿ ದಿನಕರ್, ಸಹಕಾರ ಸಂಘಗಳ ಉಪನಿಬಂಧಕ ದಿಲೀಪ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕುಮಾರ್ ಉಪಸ್ಥಿತರಿದ್ದರು.  ಜಿಲ್ಲೆಯ ಹಲವು ಮೈಕ್ರೋ ಫೈನಾನ್ಸ್, ಗಿರವಿ ಲೇವಾದೇವಿ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *