ಬೆಂಗಳೂರು: ರಾಜ್ಯ ಬಜೆಟ್ 2025 ಅನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಮಾರ್ಚ್ 7 ರಂದು ಬಜೆಟ್ ಮಂಡನೆ ಮಾಡುತ್ತೇನೆಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ. ಅದಕ್ಕೂ ಮುನ್ನ ಬಜೆಟ್ ಅಧಿವೇಶನ ನಡೆಯಲಿದೆ. ಮಾರ್ಚ್ 3 ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತದೆ.

ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಳಿಕ 3 ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇನ್ನು ರಾಜ್ಯ ಬಜೆಟ್ ಮೇಲೆ ಜನ ಕೂಡ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ, ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನ ಬಜೆಟ್ ನಲ್ಲಿ ಮಂಡಿಸುವಂತಹ ನಿರೀಕ್ಷೆ ಇದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ನಡೆಯಲು ಸಾಧ್ಯವೇ ಆಗದೆ ಹೋದರೂ ಬಜೆಟ್ ಮಂಡನೆ ವಿಚಾರಕ್ಕಾಗಿ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ, ಚರ್ಚೆಯನ್ನು ಮಾಡಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಮಾಹಿತಿಯನ್ನು ಪಡೆದಿದ್ದಾರೆ. ಇಂದು ಬೆಳಗ್ಗೆ ಕೂಡ ರೈತರ ಜೊತೆಗೆ ಸಭೆ ನಡೆಸಿದ್ದಾರೆ. ಇಂದಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ರೈತ ಪರ ಸಂಘಟನೆಗಳು, ಸಿಎಂ ಸಿದ್ದರಾಮಯ್ಯ ಬಳಿ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು, ರೈತರ ಬೇಡಿಕೆಗಳನ್ನು ನಿರಂತರವಾಗಿ ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ. ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವುದು ಕೃಷಿಯಲ್ಲಿಯೇ. ಆದ್ದರಿಂದ ರೈತರ ಬೇಡಿಕೆಗಳಿಗೆ ನಮ್ಮ ಮೊದಲ ಆದ್ಯತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದ ನಾನು ಸದಾ ರೈತರ ಪರವಾಗಿ ಇರ್ತೇನೆ ಎಂದು ಭರವಸೆ ನೀಡಿದ್ದಾರೆ.

