ಬೆಂಗಳೂರು: ನಾನು ಹಳ್ಳಿಯಿಂದ ಬಂದವನು. ಅಂದು ಅಸ್ಪೃಶ್ಯರು ಅನುಭವಿಸಿದ ನೋವು ನಾನು ಕಣ್ಣಾರೆ ಕಂಡಿದ್ದೇನೆ. ಆದ್ದರಿಂದ ಸಾಮಾಜಿಕ ನ್ಯಾಯ ಕಲ್ಪಿಸುವುದು ನನ್ನ ಹೊಣೆಗಾರಿಕೆ ಆಗಿದೆ ಎಂದು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮಾದಿಗ ಮತ್ತು ಸಂಬಂಧಿತ ಜಾತಿಗಳ ಸಮನ್ವಯ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮುಖಂಡರ ಮನವಿ ಸ್ವೀಕರಿಸಿ ಮಾತನಾಡಿದರು.
ಪರಿಶಿಷ್ಟರ ಜತೆಗೆ ಬೆಳೆದವನು ನಾನು. ಹಾಗಾಗಿ ನಿಮ್ಮೆಲ್ಲರ ನೋವು, ಕಷ್ಟ, ಪರಿಸ್ಥಿತಿ ನನಗೆ ಅರ್ಥವಾಗಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಒಳಮೀಸಲಾತಿ ಸಂಬಂಧ ತೀರ್ಪು ನೀಡಿದೆ. ಹೇಗೆ ಕೊಡಬೇಕು, ಯಾರಿಗೆ ಕೊಡಬೇಕು, ಯಾರನ್ನು ಯಾರ ಜೊತೆ ಸೇರಿಸಬೇಕು, ಯಾರಿಗೆ ಎಷ್ಟು ಕೊಡಬೇಕು ಎಂಬ ವಿಚಾರದ ಬಗ್ಗೆ ಚರ್ಚೆ ಮಾಡೋಣ ಎಂದರು.

75 ವರ್ಷಗಳಲ್ಲಿ ಮೀಸಲಾತಿಯ ಎಲ್ಲ ಸೌಲಭ್ಯವನ್ನು ಅನುಭವಿಸಿ ಚಲನಶೀಲತೆಯನ್ನು ಕಂಡಿರುವ ಜನ ಮೇಲುಸ್ಥರಕ್ಕೆ ಮುಂದುವರಿದಿದ್ದಾರೆ. ಇದೇ ಸಮಯದಲ್ಲಿ ಇನ್ನೊಂದು ಸ್ಥರದ ವರ್ಗಕ್ಕೆ ಉದ್ಯೋಗವು ಇಲ್ಲ. ಗ್ರಾಮ ಪಂಚಾಯಿತಿ ಸದಸ್ಯನಾಗಲು ಸಾಧ್ಯವಾಗಿಲ್ಲ. ಇದನ್ನು ನಾವು ನೋಡಬೇಕು, ತಿಳಿದುಕೊಳ್ಳಬೇಕು, ಅವರಿಗೂ-ಇವರಿಗೂ ನ್ಯಾಯ ಕೊಡಿಸಬೇಕಾಗಿದೆ ಈ ದಿಕ್ಕಿನಲ್ಲಿ ನಮಗೆ ಸಂಘರ್ಷ ಬೇಡ, ಸಮನ್ವಯತೆ ಬೇಕು. ಸಹೋದರತ್ವ ಬೇಕಾಗಿದೆ. ಈ ವಿಚಾರವನ್ನು ಇಡೀ ದೇಶದ ಎಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ತಿಳಿಯಬೇಕಿದೆ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ಸರ್ವೋಚ್ಛ ನ್ಯಾಯಾಲಯವು ಆಗಸ್ಟ್ 1, 2024ರಂದು ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಆದೇಶ ನೀಡಿದೆ. ಒಳ ಮೀಸಲಾತಿ ಜಾರಿಗೊಳಿಸುವುದರಿಂದ ಸಂವಿಧಾನದ ಯಾವುದೇ ಅನುಚ್ಛೇದಗಳಿಗೆ ವಿರೋಧವಲ್ಲ. ಸಮಾನತೆಯನ್ನು ಸಾಧಿಸುವುದಕ್ಕೆ ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಜತೆಗೆ ಒಳ ಮೀಸಲಾತಿ ಜಾರಿ ಮಾಡುವ ಮುನ್ನ ವೈಜ್ಞಾನಿಕ ಔದ್ಯೋಗಿಕ ಶೈಕ್ಷಣಿಕ ದತ್ತಾಂಶ ಸಂಗ್ರಹಿಸಿ ಎಂದು ತಿಳಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಆಯೋಗವನ್ನು ನೇಮಕ ಮಾಡಿದೆ ಎಂದು ಹೇಳಿದರು.
ಇಲ್ಲಿಯವರೆಗೆ ಎರಡು ಸಾವಿರಕ್ಕೂ ಹೆಚ್ಚು ಜನರು ನನ್ನನ್ನು ಭೇಟಿ ಮಾಡಿ ಚರ್ಚೆ ಜತೆಗೆ ಮನವಿ ಸಲ್ಲಿಸಿದ್ದಾರೆ. ಎಚ್.ಆಂಜನೇಯ ಅವರು ಒಂದೂವರೆ ತಿಂಗಳಿನಲ್ಲಿ ಐದು ಬಾರಿ ಭೇಟಿ ಮಾಡಿ ಸಮುದಾಯದ ಪರವಾಗಿ ಹಕ್ಕೋತ್ತಾಯ ಮಂಡಿಸಿದ್ದಾರೆ.ನಾನು ಇಲ್ಲಿ ಎಲ್ಲರ ಮಾತುಗಳನ್ನು ಕಿವಿಯಿಂದ ಅಲ್ಲ ಹೃದಯದಿಂದ ಆಲಿಸಿದ್ದೇನೆ. ಅದೇ ರೀತಿ ನಿವೃತ್ತ ಅಧಿಕಾರಿ ಭೀಮಪ್ಪ ಗೋನಾಳ್ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಿ ಅವರಿಂದ ಸಲಹೆ ಸೂಚನೆ ಪಡೆದಿದ್ದೇನೆ ಎಂದರು.
ಹಸಿದವರು ಕಾಯುವುದಕ್ಕೆ ಆಗುವುದಿಲ್ಲ, ಅವರು ಸತ್ತು ಹೋಗುತ್ತಾರೆ. ಊಟ ಮಾಡುವವರು ಕಾಯುತ್ತಾರೆ. ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ನಮ್ಮ ಆಯೋಗ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ನೀವು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಸಲಹೆಗಳಲ್ಲಿ ಕೆಲವು ಅಂಶಗಳನ್ನು ಮಾರ್ಗಸೂಚಿಯಾಗಿ ಅನುಸರಿಸುತ್ತಿದೆ ಎಂದು ಹೇಳಿದರು.
ಎಲ್ಲಿಯವರೆಗೆ ಜಾತಿ ಅಸಮಾನತೆ ಇರುತ್ತದೆ, ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಎಲ್ಲಿಯವರೆಗೆ ಮೀಸಲಾತಿ ಇರುತ್ತೋ, ಅಲ್ಲಿಯವರೆಗೆ ಒಳ ಮೀಸಲಾತಿ ಇರಬೇಕು. ಆದರೆ, ಮೀಸಲಾತಿ ಮತ್ತು ಒಳಮೀಸಲಾತಿ ನಮ್ಮೆಲ್ಲರ ಸಮಸ್ಯೆಗೆ ಪರಿಹಾರ ಅಲ್ಲ ಎಂದು ತಿಳಿಸಿದರು.
ದೇಶದಲ್ಲಿ ಶೇ.100ರಷ್ಟು ಉದ್ಯೋಗ ಸೃಷ್ಟಿ ಆದರೆ ಶೇ.98 ಉದ್ಯೋಗ ಖಾಸಗಿ ಕ್ಷೇತ್ರದಲ್ಲಿವೆ. ಅಲ್ಲಿ ಮೀಸಲಾತಿ ಅನ್ವಯ ಆಗುವುದಿಲ್ಲ. ಉಳಿದ ಶೇ.2ರಲ್ಲಿ 1ರಷ್ಟು ಸಾಮಾನ್ಯ ವರ್ಗಕ್ಕೆ ಮೀಸಲಾದರೆ, ಎಸ್ಸಿ-17, ಎಸ್ಟಿ-7, ಒಬಿಸಿ ವರ್ಗಕ್ಕೆ 52 ಮೀಸಲಾಗಿದೆ. ಒಟ್ಟು 76ರಷ್ಟು ಉದ್ಯೋಗ ಕೇವಲ ಶೇ.1ರಷ್ಟು ಜನರಿಗೆ ಮೀಸಲಾಗಿದೆ. ಶೇಕಡ ಈ 1ರಷ್ಟು ಮೀಸಲಾತಿ ಕೂಡ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ವಿಷಾದಿಸಿದರು.
ಗಣಕೀಕರಣ ಮತ್ತು ಯಾಂತ್ರಿಕರಣ ವ್ಯಾಪಕವಾಗಿ ಮುಂದುವರಿಯುತ್ತಿದೆ. ರೋಬೋಟ್ ಯುಗ ಬರುತ್ತಿದೆ. ಇದರಲ್ಲಿ ಮೀಸಲಾತಿ ಕೊಡಲು ಸಾಧ್ಯವೇ ಎಂದು ಪ್ರಶ್ನೀಸಿದರು. ಮೀಸಲಾತಿ ಎಂಬ ವಿಷಯವನ್ನು ಇಟ್ಟುಕೊಂಡು ನಾವು ಇನ್ನೂ ಎಷ್ಟು ವರ್ಷ ಹೀಗೆ ಸುತ್ತಬೇಕು. ಹಾಗಂತ ಮೀಸಲಾತಿ ಬೇಡ ಅಂತ ಅಲ್ಲ, ಮೀಸಲಾತಿ ಬೇಕು ಅನ್ನೋ ವಿಚಾರದಲ್ಲಿ ಅದು ನೂರಕ್ಕೆ ನೂರು ಜಾರಿಗೊಂಡರೇ ನನ್ನ ಸಮುದಾಯದ ಶೇ.4ರಿಂದ 5ರಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಉಳಿದ ಶೇ.95ರಷ್ಟು ಯುವಕ ಯುವತಿಯರ ಬದುಕು ಏನಾಗಬೇಕು..? ಇದರ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವಾ..? ಈ ಬಗ್ಗೆ ನಾವು ಯೋಚಿಸಬೇಕಿದೆ ಚಿಂತಿಸಬೇಕಿದೆ ಎಂದು ಸಲಹೆ ನೀಡಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುಮಾರಸ್ವಾಮಿ, ಮಾಚಿ ಸಚಿವ ಎಂ.ಶಿವಣ್ಣ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಭೀಮಪ್ಪ ಗೋನಾಳ್, ಶಾಸಕ ಕೆ.ಎಸ್.ಬಸವಂತಪ್ಪ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಗಂಗಹನುಮಯ್ಯ, ಧರ್ಮಸೇನ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಮಾಜಿ ಅಧ್ಯಕ್ಷ ಓ.ಶಂಕರ್, ಸಫಾಯಿ ಕರ್ಮಚಾರಿ ಆಯೋಗ ಮಾಜಿ ಅಧ್ಯಕ್ಷರಾದ ನಾರಾಯಣ, ಎಂ.ಆರ್.ವೆಂಕಟೇಶ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಮಾನಯ್ಯ, ಎಸ್ಸಿ ಎಸ್ಟಿ ಆಯೋಗದ ಮಾಜಿ ಅಧ್ಯಕ್ಷ ಎ.ಮುನಿಯಪ್ಪ, ಮುಖಂಡರಾದ ಅಂಬಣ್ಣ ಆರೋಲಿಕರ್, ಡೋಹರ್ ಸಮಾಜದ ಅಧ್ಯಕ್ಷ ಸಂತೋಷ್ ಸವಣೂರು, ಮೋಚಿಗಾರ ಸಮಾಜದ ಅಧ್ಯಕ್ಷ ಶಿವಪ್ಪ ಜಿ ಮುಳಗುಂದ ಸೇರಿದಂತೆ ಎಡ ಗುಂಪಿನ ಮಾದಿಗರು, ಸಮಗಾರರು, ಮೋಚಿಗರು, ಡೋಹರ್ ಮತ್ತಿತರ ಸಂಬಂಧಿತ ಜಾತಿಗಳ ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಖಾಸಗಿ ಕ್ಷೇತ್ರದಲ್ಲಿ ಮೀಸಲು ಬೇಕು :
ದೇಶದಲ್ಲಿ 6,42,000, ರಾಜ್ಯದಲ್ಲಿ 2,72,000 ಉದ್ಯೋಗಗಳು ಖಾಲಿ ಇವೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ. ಖಾಸಗಿಕರಣ ದಲ್ಲಿ ಮೀಸಲಾತಿ ಇಲ್ಲ. ಇದರ ಬಗ್ಗೆ ನಾವು ಧ್ವನಿ ಎತ್ತಬೇಕು ಎಂದು ನಾಗಮೋಹನ್ ದಾಸ್ ಹೇಳಿದರು.
ನಮ್ಮ ಸಮುದಾಯದ ಯುವಕ-ಯುವತಿಯರಿಗೆ ಜೀವನ ಕಟ್ಟಿಕೊಡುವ ದಿಸೆಯಲ್ಲಿ ನಾವೆಲ್ಲ ಚಿಂತಿಸಬೇಕಾಗಿದೆ. ಇದರ ಬಗ್ಗೆ ಮಾತನಾಡಬೇಕಿದೆ. ಖಾಲಿ ಇರುವ ಉದ್ಯೋಗಗಳ ಬಗ್ಗೆ ಖಾಸಗಿಕರಣದ ಬಗ್ಗೆ ಮಾತನಾಡಬೇಕಿದೆ. ಒಳಮೀಸಲಾತಿ ಜಾರಿ ನಂತರವೂ ಹೋರಾಟ ಮತ್ತು ಚರ್ಚೆಗಳು ನಿರಂತರವಾಗಿ ಮುಂದುವರಿಯಬೇಕಿದೆ ಎಂದು ತಿಳಿಸಿದರು.
30 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದ ಮಾದಿಗರ ಆಶಯಕ್ಕೆ ಪೂರವಾಗಿ ಎಲ್ಲ ಸರ್ಕಾರಗಳು ಸ್ಪಂದಿಸಿದ್ದವು. ಆದರೆ, ಒಳಮೀಸಲಾತಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂಬ ವಿಷಯ ಸಮಸ್ಯೆ ಆಗಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್ ತೀರ್ಪು ನಮಗೆ ಉಸಿರು ಕೊಟ್ಟಿದೆ ಎಂದು ಮಾಜಿ ಸಚಿವ, ಕಾರ್ಯಕ್ರಮ ರುವಾರಿ ಎಚ್.ಆಂಜನೇಯ ಹೇಳಿದರು.
ಮಾದಿಗ ಮತ್ತು ಸಮಗಾರ, ಮೋಚಿ ಮತ್ತಿತರ ಎಡ ಗುಂಪಿನಲ್ಲಿರುವ ಸಮುದಾಯಗಳ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಯನ್ನು ಎಲೆಎಲೆಯಾಗಿ ಸಭೆಯಲ್ಲಿ ಬಿಚ್ಚಿಟ್ಟ ಆಂಜನೇಯ, ಪರಿಶಿಷ್ಟ ಜಾತಿಯಲ್ಲಿ ಮಾದಿಗ ಮತ್ತು ಸಂಬಂಧಿತ ಸಮುದಾಯಗಳು ತಮ್ಮ ಹಕ್ಕನ್ನು ಪಡೆಯುವಲ್ಲಿ ಸಂಪೂರ್ಣ ವಿಫಲಗೊಂಡಿದ್ದು, ಒಳಮೀಸಲಾತಿ ಜಾರಿ ಆಗುವ ಭರವಸೆ ನಮ್ಮಲ್ಲಿ ಬದುಕು ಆಸೆ ಮೂಡಿಸಿದೆ ಎಂದರು.
ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳ ಮೀಸಲಾತಿ ಅನುಷ್ಠಾನಗೊಳಿಸಲು ತಕ್ಷಣವೇ ಕ್ರಮ ತೆಗೆದುಕೊಂಡು ಒಳ ಮೀಸಲಾತಿ ಹಂಚಿಕೆ ಮಾಡಲು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ವಿಚರಣಾ ಆಯೋಗವನ್ನು ರಚಿಸಿ, ವರದಿ ನೀಡುವಂತೆ ಆದೇಶ ಮಾಡಿದ್ದಾರೆ. ಈಗ ನ್ಯಾಯಮೂರ್ತಿಗಳು ನಮ್ಮ ನೋವು ಆಲಿಸಿ ತಾಯಿ ಹೃದಯದಲ್ಲಿ ಮೀಸಲು ಹಂಚಿಕೆ ಮಾಡಬೇಕು ಎಂದು ಕೋರಿದರು.



















